ಹಿರಿಯೂರು: ‘ವನ್ಯಜೀವಿಗಳನ್ನು, ಅಮೂಲ್ಯವಾದ ಅರಣ್ಯ ಸಂಪತ್ತನ್ನು ರಕ್ಷಿಸುವುದು ಕೇವಲ ಅರಣ್ಯ ಇಲಾಖೆಗೆ ಸಂಬಂಧಿಸಿದ್ದು ಎಂದು ಭಾವಿಸದೆ ಅದೊಂದು ಸಾರ್ವಜನಿಕ ಜವಾಬ್ದಾರಿ ಎಂದು ತಿಳಿದಲ್ಲಿ ಭವಿಷ್ಯದ ಮಾನವ ಪೀಳಿಗೆಗೆ ಈ ಸಂಪತ್ತನ್ನು ಉಳಿಸಿಕೊಂಡು ಹೋಗಬಹುದು’ ಎಂದು ವಲಯ ಅರಣ್ಯಾಧಿಕಾರಿ ಬಾಬು ಹೇಳಿದರು.
ನಗರದ ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಅರಣ್ಯ ಇಲಾಖೆ, ರೋಟರಿ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 71ನೇ ವನ್ಯಜೀವಿ ಸಪ್ತಾಹ ಹಾಗೂ ವನ್ಯಜೀವಿ ಸಂರಕ್ಷಣಾ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಡು ಉಳಿದರೆ ಮಾತ್ರ ನಾಡು, ನಾಡಿನ ಜನ ಉಳಿಯಲು ಸಾಧ್ಯ. ನಾಗರಿಕತೆ, ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಪ್ರದೇಶವನ್ನು ಅತಿಕ್ರಮಿಸುತ್ತ ಹೋದಲ್ಲಿ ಪ್ರಕೃತಿಯಲ್ಲಿ ಉಂಟಾಗಬಹುದಾದ ಏರುಪೇರುಗಳನ್ನು ಯಾರಿಂದಲೂ ತಡೆಯಲಾಗದು. ವನ್ಯಜೀವಿಗಳು ಆಹಾರಕ್ಕಾಗಿ ಜನವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತಿರುವುದು ಕೂಡ ಅರಣ್ಯದ ಅತಿಕ್ರಮಣದ ನಿದರ್ಶನವಾಗಿದೆ’ ಎಂದು ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಸುಂದರರಾಜ್ ಎಚ್ಚರಿಸಿದರು.
ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಆರ್. ಗಂಗಾಧರ ಮಾತನಾಡಿ, ‘ಮನುಷ್ಯರು ನಿಸರ್ಗದ ನಿಯಮಗಳಿಗೆ ಅನುಗುಣವಾಗಿ ಜೀವನ ಸಾಗಿಸುವುದನ್ನು ಅಭ್ಯಾಸ ಮಾಡಿಕೊಳ್ಳದೆ, ಮನುಷ್ಯನ ಬದುಕಿಗೆ ಸಹಕಾರಿಯಾಗಿರುವ ಅರಣ್ಯ ಸಂಪತ್ತಿಗೆ ಕಣ್ಣು ಹಾಕಿದಲ್ಲಿ ಆಪತ್ತು ಖಚಿತ’ ಎಂದರು.
ಹಾವುಗಳ ವಿವಿಧ ತಳಿಗಳು, ಹಾವು ಕಚ್ಚಿದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಚಿತ್ರದುರ್ಗ ವನ್ಯಜೀವಿ ಸಂಸ್ಥೆಯ ರಘುರಾಮ್ ಮಾಹಿತಿ ನೀಡಿದರು. ಪ್ರಾಂಶುಪಾಲ ಪ್ರೊ.ಮಹೇಶ್ ಜಾಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಎ. ವರುಣ್ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ. ನಾಗಣ್ಣ, ಡಾ. ರಾಧಿಕಾ ಉಪಸ್ಥಿತರಿದ್ದರು.
ಕಾಲೇಜಿನ ಎನ್ ಎಸ್ಎಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಲೇಜಿನ ಮುಂಭಾಗದಿಂದ ಆರಂಭಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಪರಿಸರ ಸಂರಕ್ಷಣೆಯ ಘೋಷಣೆಯನ್ನು ಕೂಗುತ್ತಾ ಜಾಥಾ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.