ಚೀಲೂರು (ನ್ಯಾಮತಿ): ತಾಲ್ಲೂಕಿನ ಚೀಲೂರು ಬಸವೇಶ್ವರ ನಗರದಲ್ಲಿ ನಿರ್ಮಾಣ ಹಂತದ ಮನೆಗೆ ಭಾನುವಾರ ರಾತ್ರಿ ನುಗ್ಗಿದ ಕರಡಿಯನ್ನು ಮನೆಯಲ್ಲಿದ್ದ ಮಹಿಳೆ ದಿಟ್ಟತನದಿಂದ ಓಡಿಸಿದ ಘಟನೆ ನಡೆದಿದೆ.
ಬಸವೇಶ್ವರ ನಗರದ ಚಿಕ್ಕ ಚಾನಲ್ ಬಳಿ ನಿರ್ಮಾಣ ಹಂತದ ಮನೆಯಲ್ಲಿ ತಂಗಮ್ಮ ಮಲಗಿದ್ದರು. ಈ ವೇಳೆ ಮನೆಗೆ ಕರಡಿ ನುಗ್ಗಿದ್ದು, ಅದನ್ನು ಓಡಿಸಲು ಮುಂದಾದಾಗ ದಾಳಿಗೆ ಯತ್ನಿಸಿದೆ.
‘ಖಾಲಿ ಬಾಟಲಿಯೊಳಗೆ ಸಣ್ಣ ಸಣ್ಣ ಕಲ್ಲುಗಳನ್ನು ಹಾಕಿ ಬಂದೂಕಿನಿಂದ ಹಾರಿಸಿದ ಗುಂಡಿನ ಸದ್ದಿನಂತೆ ಶಬ್ಧ ಮಾಡಿದ್ದರಿಂದ ಬೆದರಿದ ಕರಡಿ ಓಡಿ ಹೋಯಿತು. ನನ್ನ ಪ್ರಾಣ ಉಳಿಯಿತು’ ಎಂದು ತಂಗಮ್ಮ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಪುರುವಂತರ ಪರಮೇಶ್ವರಪ್ಪ ಮತ್ತು ಪಿ.ಜಿ.ಗೌಡ ಅವರು ಅರಣ್ಯ ಇಲಾಖೆಯ ಕಿಶೋರಕುಮಾರ ಮತ್ತು ಭರ್ಕತ್ ಅಲಿ ಅವರ ಗಮನಕ್ಕೆ ತಂದಿದ್ದಾರೆ. ವನಪಾಲಕರಾದ ತಿಪ್ಪೇಶ, ಪ್ರಶಾಂತ, ಶಿವರಾಜ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.
‘ಈ ಹಿಂದೆ ಕರಡಿಯನ್ನು ಕಂಡಿದ್ದಾಗ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದೆ. ಕರಡಿ ಇಲ್ಲಿಯೇ ಕಬ್ಬಿನ ಗದ್ದೆಯೊಳಗೆ ಸೇರಿಕೊಂಡಿದೆ’ ಎಂದು ಪುರುವಂತರ ಪರಮೇಶ್ವರಪ್ಪ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.