ADVERTISEMENT

ದಾವಣಗೆರೆ | ಮಹಿಳಾ ಪ್ರತಿಭೆ ತುಳಿಯುವ ಪ್ರವೃತ್ತಿ ಹೆಚ್ಚಳ

ಬಯಲು ರಂಗಮಂದಿರದಲ್ಲಿ ವೃತ್ತಿ ರಂಗಭೂಮಿ ರಂಗಾಯಣದಿಂದ ‘ಪ್ರತಿಗಂಧರ್ವ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:44 IST
Last Updated 16 ನವೆಂಬರ್ 2025, 5:44 IST
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ವೃತ್ತಿ ರಂಗಭೂಮಿ ರಂಗಾಯಣ ಆಯೋಜಿಸಿದ್ದ ‘ಪ್ರತಿಗಂಧರ್ವ’ ನಾಟಕ ಪ್ರದರ್ಶನವನ್ನು ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿದರು 
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ವೃತ್ತಿ ರಂಗಭೂಮಿ ರಂಗಾಯಣ ಆಯೋಜಿಸಿದ್ದ ‘ಪ್ರತಿಗಂಧರ್ವ’ ನಾಟಕ ಪ್ರದರ್ಶನವನ್ನು ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿದರು    

ದಾವಣಗೆರೆ: ‘ಹೆಣ್ಣು ಏನೇ ಸಾಧನೆ ಮಾಡಿದರೂ ಅದನ್ನು ಒಪ್ಪಿಕೊಳ್ಳುವ, ಮೆಚ್ಚುಗೆ ಸೂಚಿಸುವ ಗುಣ ಕಡಿಮೆಯಾಗುತ್ತಿದೆ. ಹಾಗಾದರೆ ಪುರುಷರು ಏನು ಸಾಧಿಸಿದ್ದಾರೆ ಎಂದು ಮಹಿಳೆಯರು ಕೇಳಬಹುದಲ್ಲವೇ’ ಎಂದು ಹಿರಿಯ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಪ್ರಶ್ನಿಸಿದರು. 

ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಶನಿವಾರ ವೃತ್ತಿ ರಂಗಭೂಮಿ ರಂಗಾಯಣದಿಂದ ನಡೆದ ‘ಪ್ರತಿಗಂಧರ್ವ’ ನಾಟಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 

‘ಹೆಣ್ಣಿನ ಪ್ರತಿಭೆ ತುಳಿಯುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಪುರುಷ ಪ್ರಾಧಾನ್ಯ ಕಡಿಮೆಯಾಗಿ ಆಕೆಯನ್ನೂ ಸಮಾನವಾಗಿ ನೋಡುವ ಭಾವನೆ ಎಲ್ಲರಲ್ಲೂ ಬೆಳೆಯಬೇಕು’ ಎಂದು ಹೇಳಿದರು. 

ADVERTISEMENT

‘ಪ್ರತಿ ಗಂಧರ್ವ’ ಎಂದು ಹೇಳುವಾಗ ಹೆಣ್ಣಿನ ಸ್ವಂತಿಕೆಯನ್ನು ಕಳೆದಂತೆ ಆಗುತ್ತದೆ. ಇದು ನೋವಿನ ಸಂಗತಿ. ಗೋಹರ್‌ಬಾಯಿ ಕರ್ನಾಟಕಿ ಅವರು ಹಾಡಿದ ಮೂಲ ಹಾಡುಗಳ ಧ್ವನಿಮುದ್ರಣವನ್ನು ಈ ನಾಟಕದಲ್ಲಿ ಬಳಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟರು. 

‘ಅಮೀರ್‌ಬಾಯಿ ಕರ್ನಾಟಕಿ ಅವರ ಬಗ್ಗೆ ಓದಿದಾಗ ಅವರು ನನಗೆ ಹತ್ತಿರದವರು ಎನಿಸಿತು. ಅವರನ್ನು ಕುರಿತು ನಾಟಕ ಬರೆಸಬೇಕು ಎಂಬ ಆಸೆ ಇತ್ತು, ಆ ದಿನ ಕೂಡಿ ಬರಲಿಲ್ಲ. ಲೇಖಕ ರಹಮತ್ ತರೀಕೆರೆ ಅವರದು ವಿಶಿಷ್ಟ ಬರವಣಿಗೆ’ ಎಂದು ಹೇಳಿದರು. 

‘ಅಮೀರ್‌ಬಾಯಿ ಹಾಗೂ ಗೋಹರ್‌ಬಾಯಿ ಸಹೋದರಿಯರು ರಂಗಭೂಮಿ ಪ್ರವೇಶಿಸಿ ಒಂದು ಶತಮಾನ ತುಂಬಿದೆ. ಆ ಸಹೋದರಿಯರು ಧರ್ಮ, ಕಲೆ ಹಾಗೂ ಪ್ರೇಮದ ಸೀಮೋಲ್ಲಂಘನೆ ಮಾಡಿದರು’ ಎಂದು ಲೇಖಕ ಪ್ರೊ. ರಹಮತ್ ತರೀಕೆರೆ ಹೇಳಿದರು. 

‘ದಾವಣಗೆರೆ ಒಂದು ಕಾಲದಲ್ಲಿ ನೂರಾರು ನಾಟಕ ಕಂಪನಿಗಳಿಗೆ ಆಶ್ರಯ ನೀಡಿದ ನೆಲ. ಇಲ್ಲಿನ ಮಂಡಕ್ಕಿ- ಮಿರ್ಚಿಯ ಘಮಲು ಈ ನಾಟಕದಲ್ಲಿದೆ. ರಹಮತ್ ತರೀಕೆರೆ ಅವರು ಸಂಶೋಧನೆ ಮಾಡಿದ್ದರಿಂದಾಗಿ ಈ ನಾಟಕ ರಚಿಸುವುದು ಸಾಧ್ಯವಾಯಿತು’ ಎಂದು ನಾಟಕಕಾರ ರಾಜಪ್ಪ ದಳವಾಯಿ ಹೇಳಿದರು. 

ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕ ಮಾತನಾಡಿದರು. ರಂಗ ನಿರ್ದೇಶಕ ಮಾಲತೇಶ ಬಡಿಗೇರ ಇದ್ದರು. ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು. ಎಸ್.ಎಸ್. ಸಿದ್ಧರಾಜು ನಿರೂಪಿಸಿದರು. 

ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ನಡೆದ ‘ಪ್ರತಿಗಂಧರ್ವ’ ನಾಟಕದ ದೃಶ್ಯ ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

ಅಮೀರ್‌ಬಾಯಿ ಅವರ ಕುರಿತು ಬರೆದ ಪುಸ್ತಕ ರಂಗರೂಪ ಪಡೆದು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಮುಂದೆ ಪ್ರದರ್ಶನಗೊಳ್ಳುತ್ತಿರುವುದು ಸಂತೋಷ ತಂದಿದೆ. ಕೃತಿಯ ರಚನೆಗಾಗಿ ಮಹಾರಾಷ್ಟ್ರ ಭಾಗದಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ದೆ

-ಪ್ರೊ. ರಹಮತ್ ತರೀಕೆರೆ ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.