ದಾವಣಗೆರೆ: ‘ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ’ ಎಂಬ ಮಾತನ್ನು ರುಜುವಾತು ಪಡಿಸಿದ್ದಾರೆ ಜಿಲ್ಲೆಯ ಬಸವಾಪಟ್ಟಣ ಗ್ರಾಮದ ಎನ್.ಕವಿತಾ ಹಾಗೂ ಕೆ.ನೇತ್ರಾವತಿ ಗೆಳತಿಯರು.
ಈ ಗೆಳತಿಯರು ಬಸವಾಪಟ್ಟಣ ಬಳಿಯ ಸಾಗರಪೇಟೆಯಲ್ಲಿ ಜೂಟ್ (ಸೆಣಬು) ಬ್ಯಾಗ್ ತಯಾರಿಕೆ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಸ್ವಾವಲಂಬಿ ಬದುಕಿನೊಂದಿಗೆ ಪರಿಸರ ರಕ್ಷಣೆಗೂ ಕೊಡುಗೆ ನೀಡುತ್ತಿದ್ದಾರೆ.
ಸಂಜೀವಿನಿ– ಎನ್‌ಆರ್‌ಎಲ್‌ಎಂ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ) ಬಸವಾಪಟ್ಟಣ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಡಿ 48 ಸ್ವ–ಸಹಾಯ ಸಂಘಗಳಿದ್ದು, 545 ಸದಸ್ಯೆಯರಿದ್ದಾರೆ. ಈ ಒಕ್ಕೂಟದಲ್ಲಿ ಕವಿತಾ ಕೃಷಿ ಸಖಿಯಾಗಿಯೂ, ನೇತ್ರಾವತಿ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರೊಟ್ಟಿಗೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಮತ್ತು ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಆಶಯದೊಂದಿಗೆ ಸ್ವಯಂ ಉದ್ಯೋಗ ಕೈಗೊಂಡಿದ್ದಾರೆ.
ಸೆಣಬಿನ ಬ್ಯಾಗುಗಳು ಪರಿಸರಸ್ನೇಹಿ ಆಗಿರುವುದರಿಂದ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ತಮ್ಮ ಅಳಿಲು ಸೇವೆ ಇರಲೆಂದು ಈ ಇಬ್ಬರೂ ಸ್ನೇಹಿತೆಯರು ಜೂಟ್ ಬ್ಯಾಗ್ ಉದ್ಯಮ ಆರಂಭಿಸಲು ತೀರ್ಮಾನಿಸಿದರು. ಅದಕ್ಕಾಗಿ ಕೆನರಾ ಬ್ಯಾಂಕ್ ಸ್ವ– ಉದ್ಯೋಗ ತರಬೇತಿ ಸಂಸ್ಥೆ ರೂಟ್ ಸೆಟ್ ಮೂಲಕ ತರಬೇತಿ ಪಡೆದುಕೊಂಡರು. ನಂತರ ಗ್ರಾಮದ 20 ಮಹಿಳೆಯರಿಗೆ ತರಬೇತಿ ನೀಡಿದರು. ಒಕ್ಕೂಟದಿಂದ ₹ 3 ಲಕ್ಷ ಸಾಲ ಪಡೆದು, ತಮ್ಮ ಒಡವೆಗಳನ್ನು ಅಡವಿರಿಸಿ ಒಟ್ಟು ₹ 10 ಲಕ್ಷ ಬಂಡವಾಳದಲ್ಲಿ 2019ರಲ್ಲಿ ಶ್ರೀ ದುರ್ಗಾ ಸಂಜೀವಿನಿ ಜೂಟ್ ಬ್ಯಾಗ್ ವರ್ಕ್ಸ್ ಆರಂಭಿಸಿದರು.
ಆರಂಭದಲ್ಲಿ ಮಾರುಕಟ್ಟೆ ಸಮಸ್ಯೆ ಬಹುವಾಗಿ ಕಾಡಿತು. ಮಳಿಗೆ ಬಾಡಿಗೆ ಕಟ್ಟಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಆಗ ಉದ್ಯಮವೊಂದನ್ನೇ ನೆಚ್ಚಿಕೊಂಡರೆ ಆಗುವುದಿಲ್ಲವೆಂದು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲು ಆರಂಭಿಸಿದರು. ಸುಮಾರು 10 ತಂಡಗಳಲ್ಲಿ ನೂರಾರು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿದ ಹೆಗ್ಗಳಿಕೆ ಇವರಿಗಿದೆ. ಉದ್ಯಮಕ್ಕೆ ಪೂರಕವಾಗಿ ಫ್ಯಾನ್ಸಿ ಸ್ಟೋರ್, ಕಂಪ್ಯೂಟರ್ ಎಂಬ್ರಾಯಿಡರಿ ಕೆಲಸವನ್ನೂ ಆರಂಭಿಸಿದರು.
ಆ ಮಧ್ಯೆ ರಾಜ್ಯ ಸರ್ಕಾರವು ಸ್ವಾವಲಂಬನೆ ಕಾರ್ಯಕ್ರಮದಡಿ ಉದ್ಯಮ ನಡೆಸುವವರಿಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ) ವತಿಯಿಂದ ತರಬೇತಿ ಕೊಡಿಸಲು ಅರ್ಜಿ ಆಹ್ವಾನಿಸಿತ್ತು. ರಾಜ್ಯದಿಂದ ಒಟ್ಟು 40,848 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 150 ಬಗೆಯ ಉದ್ಯಮಗಳನ್ನು ಆಯ್ಕೆ ಮಾಡಿ ಉತ್ಪನ್ನದ ಬ್ರ್ಯಾಂಡಿಂಗ್, ಲೇಬಲಿಂಗ್ ಇತ್ಯಾದಿ ಕುರಿತು ತರಬೇತಿ ನೀಡಲಾಯಿತು. ಸಣ್ಣ ಗುಂಪು ಉದ್ಯಮ ವಿಭಾಗದಲ್ಲಿ ಕವಿತಾ ಮತ್ತು ನೇತ್ರಾವತಿ ಅವರು ಪ್ರಥಮ ಸ್ಥಾನ ಪಡೆದುಕೊಂಡರು. ಆ ಮೂಲಕ ₹ 7.50 ಲಕ್ಷ ಬಡ್ಡಿರಹಿತ ಸಾಲ ಸೌಲಭ್ಯ ಸಿಕ್ಕಿದ್ದು ಉದ್ದಿಮೆಗೆ ಆಸರೆಯಾಯಿತು.
‘ಉದ್ದಿಮೆ ಅಭಿವೃದ್ಧಿಪಡಿಸಲು ಹಗಲು–ರಾತ್ರಿ ಎನ್ನದೇ ಶ್ರಮಪಟ್ಟಿದ್ದೇವೆ. ಹೆಣ್ಣುಮಕ್ಕಳು ಎಲ್ಲಿಗೆಂದರೆ ಅಲ್ಲಿಗೆ ಹೊತ್ತು–ಗೊತ್ತಿಲ್ಲದೆ ತಿರುಗಾಡುತ್ತಾರೆ. ಇವರೇನು ಮಾಡಿಯಾರು’ ಎಂದು ಕೆಲವರು ಚುಚ್ಚು ಮಾತುಗಳನ್ನು ಆಡಿದರು. ಇದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಲಿಲ್ಲ. ಕುಟುಂಬದವರು ಸುಮ್ಮನಿದ್ದು ಬಿಡಿ ಎಂದರು. ಆದರೆ, ಏನೇ ಕಷ್ಟ ಬಂದರೂ ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆಯಬಾರದು ಎಂದುಕೊಂಡು ಮುಂದುವರಿದೆವು. ಫಲವಾಗಿ ಇಂದು ಉದ್ಯಮ ಚೆನ್ನಾಗಿ ನಡೆಯುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಕವಿತಾ ಹಾಗೂ ನೇತ್ರಾವತಿ.
‘100 ಮೀಟರ್‌ನ ಜೂಟ್ ರೋಲ್‌ಗಳನ್ನು ಬೆಂಗಳೂರಿನಿಂದ ತರಿಸುತ್ತೇವೆ. ಆರ್ಡರ್ ಬಂದಿರುವ ಅಳತೆಗೆ ಅನುಗುಣವಾಗಿ ಕಟ್ ಮಾಡಿ ಕೊಡುತ್ತೇವೆ. ಮಳಿಗೆಯಲ್ಲಿ ಜಾಗದ ಕೊರತೆಯ ಕಾರಣ 6–8 ಮಹಿಳೆಯರು ತಮ್ಮ ಮನೆಗಳಲ್ಲಿಯೇ ಬ್ಯಾಗುಗಳನ್ನು ಹೊಲೆದು ತಂದುಕೊಡುತ್ತಾರೆ. ವಿತ್ ಪ್ರಿಂಟ್‌ಗೆ ₹ 160, ವಿತೌಟ್ ಪ್ರಿಂಟ್‌ಗೆ ₹ 180 ದರ ನಿಗದಿಪಡಿಸಿದ್ದು, ಕನಿಷ್ಠ 50ರಿಂದ 2000ವರೆಗೂ ಆರ್ಡರ್ ಬರುತ್ತದೆ. ಜೀನ್ಸ್, ಕ್ಯಾನ್‌ವಾಸ್ ಇತರೆ ಬಟ್ಟೆಯನ್ನೂ ಸೇರಿಸಿ ಬ್ಯಾಗುಗಳನ್ನು ಹೊಲೆದುಕೊಡುತ್ತೇವೆ. ವಾರ್ಷಿಕ 4.50 ಲಕ್ಷದಿಂದ ₹ 6 ಲಕ್ಷದವರೆಗೂ ಆದಾಯ ಗಳಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.
‘ಬಸವಾಪಟ್ಟಣದಲ್ಲಿ ಬಾಡಿಗೆ ದುಬಾರಿಯಾದ್ದರಿಂದ ಸಾಗರಪೇಟೆಯಲ್ಲಿ ಮಳಿಗೆ ಆರಂಭಿಸಿದ್ದೆವು. ಈಗಿನ ಮಳಿಗೆಯಲ್ಲಿ ಸ್ಥಳಾವಕಾಶದ ಕೊರತೆಯ ಕಾರಣ ಮಹಿಳೆಯರು ಕಟಿಂಗ್‌ಗಳನ್ನು ಮನೆಗೆ ಒಯ್ದು ಹೊಲೆದು ತಂದುಕೊಡುತ್ತಿದ್ದಾರೆ. ಮನೆ ಕೆಲಸದ ನಡುವೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಆಗುತ್ತಿಲ್ಲ. ಇದೀಗ ಬಸವಾಪಟ್ಟಣದಲ್ಲಿಯೇ ಗ್ರಾಮ ಪಂಚಾಯಿತಿ ಭವನ ನಿರ್ಮಾಣವಾಗುತ್ತಿದ್ದು, ಇಲ್ಲಿಗೆ ಉದ್ಯಮವನ್ನು ಸ್ಥಳಾಂತರಿಸಿದಾಗ ಹೆಚ್ಚಿನ ಸ್ಥಳಾವಕಾಶ ಸಿಗಲಿದೆ. ಗ್ರಾಮಮಟ್ಟದಲ್ಲಿ ಎಲ್ಲಿಯೂ ಗಾರ್ಮೆಂಟ್ಸ್‌ಗಳಿಲ್ಲ. ನಮ್ಮ ಉದ್ಯಮವನ್ನು ಗಾರ್ಮೆಂಟ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಇದ್ದು, ಇನ್ನೂ ಹೆಚ್ಚಿನ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗಲಿದೆ. ಜೂಟ್ ಬ್ಯಾಗ್ ಉದ್ಯಮದಲ್ಲಿ ರಾಜ್ಯದ ಹೆಸರನ್ನೂ ಮುಂಚೂಣಿಗೆ ತರುವ ಕನಸಿದೆ’ ಎನ್ನುವ ವಿವರಣೆ ಅವರದು.
ಜಿಲ್ಲೆಯ ವಿವಿಧೆಡೆ ಸಂಜೀವಿನಿ ಒಕ್ಕೂಟದ ಮಹಿಳೆಯರು ತಯಾರಿಸುವ ಉತ್ಪನ್ನಗಳ ಮಾರಾಟ ಮಳಿಗೆಗಳಿದ್ದು ಜೂಟ್ ಬ್ಯಾಗುಗಳನ್ನು ಸರಬರಾಜು ಮಾಡುತ್ತೇವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ನಡೆಯುವ ಮಾರಾಟ ಮೇಳಗಳಿಗೂ ಬ್ಯಾಗುಗಳನ್ನು ಕೊಂಡೊಯ್ಯುತ್ತೇವೆ. ದಾವಣಗೆರೆ ಹರಿಹರದ ವಿವಿಧ ಬ್ಯಾಂಕುಗಳು ಚನ್ನಗಿರಿಯ ತಮ್ಕೋಸ್ ವಸತಿಶಾಲೆಗಳು ಲಯನ್ಸ್ ಕ್ಲಬ್ ಮುಂತಾದ ಸಂಘ–ಸಂಸ್ಥೆಗಳು ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ನೀಡಲು ಜೂಟ್ ಬ್ಯಾಗ್ ಮಾಡಿಸಿಕೊಳ್ಳುತ್ತಾರೆ. ಆಯಾ ಸಂಸ್ಥೆಯ ಹೆಸರು ಮತ್ತು ಕಾರ್ಯಕ್ರಮದ ವಿವರವನ್ನು ಬ್ಯಾಗ್ ಮೇಲೆ ಪ್ರಿಂಟ್ ಹಾಕಿ ಕೊಡುತ್ತೇವೆ. ನಾಮಕರಣ ಮದುವೆ ಇತ್ಯಾದಿ ಶುಭ ಸಮಾರಂಭಗಳಲ್ಲಿ ತಾಂಬೂಲ ನೀಡಲು ಜೂಟ್ ಬ್ಯಾಗುಗಳನ್ನು ತಯಾರಿಸಿಕೊಡುತ್ತಿದ್ದೇವೆ. ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಚರ್ಚೆ ಜಾಗೃತಿ ನಿರಂತರವಾಗಿ ನಡೆಯುತ್ತಿದ್ದು ಬರುವ ದಿನಗಳಲ್ಲಿ ನಮ್ಮ ಬ್ಯಾಗುಗಳಿಗೆ ಇನ್ನೂ ಹೆಚ್ಚು ಬೇಡಿಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಕವಿತಾ ಮತ್ತು ನೇತ್ರಾವತಿ.
ಸಂಪರ್ಕ ಸಂಖ್ಯೆ: 8884548803
ಗ್ರಾಮೀಣ ಭಾಗದ ಮಹಿಳೆಯರು ತಮ್ಮಲ್ಲಿರುವ ಕೌಶಲವನ್ನು ಬಳಸಿಕೊಂಡು ವಿವಿಧ ಉದ್ಯೋಗಗಳಲ್ಲಿ ತೊಡಗಿ ಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಯಗಳ ಸದುಪಯೋಗ ಪಡೆದುಕೊಳ್ಳಬೇಕುಕೌಸರ್ ರೇಷ್ಮಾ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯಿತಿ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.