ADVERTISEMENT

ದಾವಣಗೆರೆ | ಎಚ್‌ಐವಿ: ತಗ್ಗಿದ ಪಾಸಿಟಿವಿಟಿ ದರ

ರಾಜ್ಯದಲ್ಲಿ 23,15,909 ಜನರಿಗೆ ಪರೀಕ್ಷೆ; 7,720 ಜನರಲ್ಲಿ ಸೋಂಕು ಪತ್ತೆ

ರಾಮಮೂರ್ತಿ ಪಿ.
Published 1 ಡಿಸೆಂಬರ್ 2024, 4:40 IST
Last Updated 1 ಡಿಸೆಂಬರ್ 2024, 4:40 IST
ಎಚ್‌ಐವಿ ಬಗ್ಗೆ ಅರಿವು ಮೂಡಿಸಲು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಕಟಣೆ
ಎಚ್‌ಐವಿ ಬಗ್ಗೆ ಅರಿವು ಮೂಡಿಸಲು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಕಟಣೆ   

ದಾವಣಗೆರೆ: ರಾಜ್ಯದಲ್ಲಿ ಎಚ್‌ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಪಾಸಿಟಿವಿಟಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತೀ ಕಡಿಮೆ ದರ ವರದಿಯಾಗಿದೆ.

2020–21ರಲ್ಲಿ ಸಾಮಾನ್ಯ ಜನರಲ್ಲಿ ಶೇ 0.58 ಹಾಗೂ ಗರ್ಭಿಣಿಯರಲ್ಲಿ ಶೇ 0.05 ರಷ್ಟಿದ್ದ ಪ್ರಮಾಣ 2024–25ರಲ್ಲಿ (ಅಕ್ಟೋಬರ್‌ವರೆಗೆ) ಕ್ರಮವಾಗಿ ಶೇ 0.33 ಹಾಗೂ ಶೇ 0.03ಕ್ಕೆ ಇಳಿಕೆ ಕಂಡಿದೆ.

ಸಾಮಾನ್ಯ ಜನರಲ್ಲಿ 2021–22ರಲ್ಲಿ ಶೇ 0.48, 2022–23ರಲ್ಲಿ ಶೇ 0.39, 2023–24ರಲ್ಲಿ ಶೇ 0.33 ರಷ್ಟು ಪಾಸಿಟಿವಿಟಿ ದರ ಇತ್ತು. ಗರ್ಭಿಣಿಯರಲ್ಲಿ 2020-21ರಿಂದ 2023–24ರ ವರೆಗೆ ಶೇ 0.04 ರಷ್ಟಿತ್ತು.

ADVERTISEMENT

‘ಶಾಲಾ–ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿಗಳು ಸೇರಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿರುವುದು ಹಾಗೂ ವಿವಿಧ ಸಮೂಹ ಮಾಧ್ಯಮಗಳಲ್ಲಿ ನಿರಂತರವಾಗಿ ಜಾಗೃತಿ ನಡೆಸುತ್ತಿರುವುದರಿಂದ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಇದು ಆಶಾದಾಯಕ ಬೆಳವಣಿಗೆ’ ಎಂದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ (ಕೆಸ್ಯಾಪ್ಸ್‌) ಅಧಿಕಾರಿಗಳು ಹೇಳುತ್ತಾರೆ. 

ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚು: ರಾಜ್ಯದಲ್ಲಿ 2024ರ ಜನವರಿಯಿಂದ ಅಕ್ಟೋಬರ್‌ವರೆಗೆ 23,15,909 ಜನರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ 7,720 ಜನರಲ್ಲಿ ಎಚ್‌ಐವಿ ದೃಢಪಟ್ಟಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಹೆಚ್ಚು (492 ಪ್ರಕರಣ: ಶೇ 0.76) ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಕಡಿಮೆ (56 ಪ್ರಕರಣ: ಶೇ 0.09) ವರದಿಯಾಗಿದೆ.

ಇದೇ ಅವಧಿಯಲ್ಲಿ 7,11,510 ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ನಡೆಸಿದ್ದು, 247 ಜನರಲ್ಲಿ ಸೋಂಕು ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು (11 ಪ್ರಕರಣ: ಶೇ 0.11) ಕಂಡುಬಂದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೂನ್ಯವಿದೆ. 

ಡಿಜಿಟಲ್‌ ವೇದಿಕೆಯಲ್ಲಿ ಜಾಗೃತಿ: ಎಚ್‌ಐವಿ ಹರಡದಂತೆ ತಡೆಗಟ್ಟಲು ಕೆಸ್ಯಾಪ್ಸ್‌ ಅಧಿಕಾರಿಗಳು ಸಾಂಪ್ರದಾಯಿಕ ಮಾಧ್ಯಮಗಳೊಂದಿಗೆ ಡಿಜಿಟಲ್‌ ಮಾಧ್ಯಮವನ್ನೂ ಬಳಸಿಕೊಳ್ಳುತ್ತಿದ್ದಾರೆ.  

ಕೆಸ್ಯಾಪ್ಸ್‌ನ ಮಾಹಿತಿ ಶಿಕ್ಷಣ ಸಂವಹನ ವಿಭಾಗದಿಂದ ಬೀದಿನಾಟಕ, ಜಾಗೃತಿ ಜಾಥಾ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆಗಳಲ್ಲಿ ಪ್ರಕಟಣೆ ಮತ್ತು ಕರಪತ್ರಗಳ ಮೂಲಕ ಅರಿವು ಮೂಡಿಸುವುದರ ಜೊತೆಗೆ ಫೇಸ್‌ಬುಕ್‌, ಯೂಟ್ಯೂಬ್‌, ಎಕ್ಸ್‌, ಇನ್‌ಸ್ಟಾಗ್ರಾಂ, ಶೇರ್‌ಚಾಟ್‌, ಮೋಜ್‌ನಂತಹ ಸಾಮಾಜಿಕ ಜಾಲತಾಣಗಳೊಂದಿಗೆ ಡೇಟಿಂಗ್‌ ಆ್ಯಪ್ಸ್‌ ಹಾಗೂ ವೆಬ್‌ಸೈಟ್‌ಗಳಲ್ಲೂ ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿಡಿಯೊ, ಆಡಿಯೊಗಳನ್ನು ಈ ಖಾತೆಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ಡೇಟಿಂಗ್‌ ಆ್ಯಪ್‌ಗಳನ್ನು ಗುರುತಿಸಿದ್ದು, ಇವುಗಳನ್ನು ತೆರೆದ ಕೂಡಲೇ ಎಚ್‌ಐವಿ ಬಗ್ಗೆ ಅರಿವು ಮೂಡಿಸುವಂತಹ ಸಂದೇಶ ಬಿತ್ತರವಾಗಲಿದೆ. ಸುರಕ್ಷಿತ ಲೈಂಗಿಕ ಸಂಪರ್ಕ, ಎಚ್‌ಐವಿ ಪರೀಕ್ಷೆ, ಉಚಿತ ಚಿಕಿತ್ಸೆ, ಸಹಾಯವಾಣಿ, ಕೌನ್ಸೆಲಿಂಗ್‌ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. 

ಹದಿಹರೆಯದವರನ್ನೇ ಗುರಿಯಾಗಿಸಿಕೊಂಡು ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಚ್‌ಐವಿ ಪರೀಕ್ಷೆ ಉಚಿತ ಚಿಕಿತ್ಸೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿರುವುದರಿಂದ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ.
-ನಾಗರಾಜ ಎನ್‌.ಎಂ., ಯೋಜನಾ ನಿರ್ದೇಶಕ ಕೆಸ್ಯಾಪ್ಸ್‌
ಸಾಮಾಜಿಕ ಜಾಲತಾಣಗಳು ಯುವಜನತೆಯ ಬದುಕಿನ ಭಾಗವಾಗಿವೆ. ಹೀಗಾಗಿ ಈ ವೇದಿಕೆಗಳಲ್ಲೇ ಪೋಸ್ಟ್‌ಗಳನ್ನು ಹಾಕುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ಇರುವವರಿಗೆ ಕೌನ್ಸೆಲಿಂಗ್‌ ಕೂಡ ನೀಡಲಾಗುತ್ತಿದೆ.
-ಗೋವಿಂದರಾಜು ಟಿ., ಉಪನಿರ್ದೇಶಕ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಕೆಸ್ಯಾಪ್ಸ್‌

ಇಂದು ವಿಶ್ವ ಏಡ್ಸ್‌ ದಿನ

ಎಚ್‌ಐವಿ/ಏಡ್ಸ್‌ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್‌ ದಿನ ಆಚರಿಸಲಾಗುತ್ತಿದೆ. ‘ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ: ನನ್ನ ಆರೋಗ್ಯ ನನ್ನ ಹಕ್ಕು!’ ಈ ವರ್ಷದ ಘೋಷವಾಕ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.