ದಾವಣಗೆರೆ: ಪರಿಸರ ಉಳಿವಿಗೆ ಅರಣ್ಯ ಸಂರಕ್ಷಣೆಯ ಕೂಗು ದಶಕಗಳಿಂದ ಇದೆ. ಅಭಿವೃದ್ಧಿ ಹೆಸರಿನಲ್ಲಿ ಮನುಷ್ಯ ಅರಣ್ಯ ನಾಶಕ್ಕೆ ಮುಂದಾಗಿದ್ದು, ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಅರಣ್ಯ ಸಂಪತ್ತು ರಕ್ಷಣೆಗೆ ಹಲವು ಯೋಜನೆಗಳನ್ನು ರೂಪಿಸುತ್ತಿದ್ದರೂ ಅದರಲ್ಲಿ ಸಾರ್ವಜನಿಕ ಸಹಭಾಗಿತ್ವ ಕಡಿಮೆ.
‘ಪರಿಸರ ಸಂರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂಬ ಧ್ಯೇಯದೊಂದಿಗೆ ಮತ್ತೆ ಅರಣ್ಯ ದಿನ ಬಂದಿದೆ. ಜೀವ ವೈವಿಧ್ಯದ ಸಂರಕ್ಷಣೆಯ ಧ್ಯೇಯದಿಂದ ಮಾರ್ಚ್ 21ರಂದು ‘ವಿಶ್ವ ಅರಣ್ಯ ದಿನ’ ಆಚರಿಸಲಾಗುತ್ತಿದೆ.
ರಾಷ್ಟ್ರೀಯ ಅರಣ್ಯ ನೀತಿಯ ಮಾರ್ಗಸೂಚಿ ಪ್ರಕಾರ ಒಟ್ಟು ಭೌಗೋಳಿಕ ಪ್ರದೇಶದ ಶೇ 33ರಷ್ಟು ಅರಣ್ಯ ಇರಬೇಕು. 2021ರ ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಜಿಲ್ಲೆಯಲ್ಲಿ ಶೇ 12.1ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ.
ಕೊಂಡುಕುರಿ ಧಾಮ:
ಜಗಳೂರು ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿನ ಕೊಂಡುಕುರಿ ವನ್ಯಜೀವಿಧಾಮ, ದೇಶದ ಏಕೈಕ ಕೊಂಡುಕುರಿ ಧಾಮ. ಶತಮಾನಗಳಿಂದ ನೆಲೆ ಕಂಡುಕೊಂಡಿರುವ ನಾಲ್ಕುಕೊಂಬುಗಳ ಕೊಂಡುಕುರಿ (ಫೋರ್ ಹಾರ್ನ್ಡ್ ಆಂಟಿಲೋಪ್) ಆವಾಸ ಸ್ಥಾನ ಇದು. ಈ ವನ್ಯಧಾಮ 7,723 ಹೆಕ್ಟೇರ್ ಅರಣ್ಯ ಪ್ರದೇಶ ಒಳಗೊಂಡಿದೆ.
ಸಾಮಾಜಿಕ ಅರಣ್ಯ ಪ್ರದೇಶವನ್ನು ವಿಸ್ತರಿಸುವ ಹಾಗೂ ಜನರಲ್ಲಿ ಪರಿಸರ ಕಾಳಜಿ ಮೆರೆಯುವ ಉದ್ದೇಶದಿಂದ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗ ಹಲವು ಕ್ರಮಗಳನ್ನು ಹಮ್ಮಿಕೊಂಡಿದೆ.
ಸಾಮಾಜಿಕ ಅರಣ್ಯ ವಿಭಾಗದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಸಾಮಾಜಿಕ ಅರಣ್ಯ ಯೋಜನೆ, ಕೃಷಿ ವಿಕಾಸ್ ಯೋಜನೆ, ಹಸಿರು ಕರ್ನಾಟಕ ಯೋಜನೆ, ಬೀಜದುಂಡೆ ಯೋಜನೆ (ಆರ್‌ಎಸ್‌ಬಿಡಿ) ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಅರಣ್ಯ ವಲಯವನ್ನು ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ರೈತರ ಜಮೀನಿನ ಬದುಗಳಲ್ಲಿ ಸಸಿ ನೆಡುವುದು, ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನ ಹಾಗೂ ಖಾಲಿ ಜಾಗಗಳು, ರಸ್ತೆ, ಕಾಲುವೆ ಬದಿ, ವಸತಿ ಶಾಲೆಗಳು, ಶಾಲೆಗಳು, ವಿದ್ಯಾರ್ಥಿನಿಲಯಗಳು, ಗೋಮಾಳ ಸೇರಿದಂತೆ ಸ್ಥಳಾವಕಾಶದ ಲಭ್ಯತೆ ಅಧರಿಸಿ ಸಸಿ ನೆಡಲಾಗುತ್ತದೆ.
‘ದೇಶ ಕಟ್ಟುವುದರಲ್ಲಿ ಪರಿಸರ ಸಂರಕ್ಷಣೆಯೂ ಸೇರುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ಅರಣ್ಯ ವಿಭಾಗ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಆದರೆ, ಗಿಡಗಳ ಪೋಷಣೆ, ನಿರ್ವಹಣೆಯೇ ದೊಡ್ಡ ಸವಾಲು. ಪರಿಸರಕ್ಕೆ ಕೊಡುಗೆ ನೀಡುವಲ್ಲಿ ಜನರ ಸಹಭಾಗಿತ್ವ ಅಗತ್ಯ’ ಎಂದು ದಾವಣಗೆರೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಗೋಪ್ಯನಾಯ್ಕ ಮನವಿ ಮಾಡುತ್ತಾರೆ.
‘ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಈಗ ಆಸಕ್ತಿ ಕಡಿಮೆಯಾಗಿದೆ. ಪರಿಸರ ವೇದಿಕೆ, ಸಂಘ–ಸಂಸ್ಥೆಗಳಿಂದ ಪರಿಸರ ಸಂರಕ್ಷಣೆಯ ಭಾಗವಾಗಿ ಸಸಿಗಳಿಗೆ ಬೇಡಿಕೆ ಇದೆ. ರೈತರು, ಜನರು ಕೈಜೋಡಿಸಿದರೆ ಸ್ವಚ್ಛ ಪರಿಸರ ಸಾಧ್ಯ’ ಎಂದು ಅವರು ಹೇಳುತ್ತಾರೆ.
‘ದೂಳುಮುಕ್ತ ನಗರ ಯೋಜನೆಯಡಿ ಜಿಲ್ಲೆಯಲ್ಲಿ 2025–26ನೇ ಸಾಲಿನಲ್ಲಿ ₹ 20 ಲಕ್ಷ ಅನುದಾನ ಬಂದಿದ್ದು, 20,000 ಸಸಿಗಳನ್ನು ತಯಾರಿ ಮಾಡಿದ್ದು, ಮೇ ತಿಂಗಳ ಹೊತ್ತಿಗೆ ನೆಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ವೈಯಕ್ತಿಕ ಆಸಕ್ತಿಯಿಂದ ಅರಣ್ಯ ಸಂಪತ್ತು ಬೆಳೆಸಲು ಹಲವು ಕಾರ್ಯಕ್ರಮ ರೂಪಿಸಿದ್ದೇನೆ’ ಎಂದು ಸಂತಸ ಹಂಚಿಕೊಂಡರು.
‘ಮಹಾನಗರ ಪಾಲಿಕೆಯ ಅನುದಾನ, ಸಸಿಗಳ ನಿರ್ವಹಣೆ, ಸಾಮಾಜಿಕ ಅರಣ್ಯೀಕರಣ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಲಾಗಿದೆ. ಮುಂದಿನ ಮಳೆಗಾಲಕ್ಕೆ ಈ ವರ್ಷದ ಮಾರ್ಚ್‌ನಲ್ಲಿಯೇ ತಯಾರಿ ಮಾಡಿಕೊಳ್ಳುತ್ತೇವೆ. ಸಂಘ–ಸಂಸ್ಥೆಗಳು, ರೈತರ ಬೇಡಿಕೆ ಆಧರಿಸಿ ಗಿಡ ನೀಡುವ ತಯಾರಿ ಮಾಡುತ್ತೇವೆ’ ಎಂದರು.
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ರೈತರ ಜಮೀನಿನ ಬದಿ ಗಿಡ ನೆಡಲು ಒತ್ತು ನೀಡಲಾಗಿದೆ. ಕಾಡು ಮಾವು, ನೇರಳೆ, ಅರಳಿ, ಹತ್ತಿ, ಬಸರಿ, ಹೊಂಗೆ, ಟಬುಬಿಯಾ (5 ಬಗೆಯ) ಜಾತಿಯ ಗಿಡಗಳನ್ನು ನೆಡಲಾಗುತ್ತದೆ.
‘ನರೇಗಾ ಅಡಿ ಸಸಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ರೈತರಿಗೆ ಸಹಾಯಧನ ಸಿಗುತ್ತದೆ. ಈ ಬಾರಿ ರೈತರಿಗೆ 65,000 ಸಸಿಗಳು ಹಾಗೂ ಇಲಾಖೆಯಿಂದ 55,000 ಸಸಿಗಳನ್ನು ವಿತರಿಸಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಇಲಾಖೆಯ ಯೋಜನೆಯ ಬಗ್ಗೆ ವಿವರಿಸಿದರು.
‘ಒಂದು ವರ್ಷಕ್ಕೆ ಎಲ್ಲ ಯೋಜನೆ ಸೇರಿ ಸರ್ಕಾರದಿಂದ ₹ 7 ಕೋಟಿಯಿಂದ ₹ 8 ಕೋಟಿ ಅನುದಾನ ಬರುತ್ತದೆ. ಬಜೆಟ್ ಆಧರಿಸಿ ಇದು ಹೆಚ್ಚಬಹುದು. ಗಿಡಗಳ ಪೋಷಣೆ, ನಿರ್ವಹಣೆಗಾಗಿ ವರ್ಷಕ್ಕೆ ₹ 3.5 ಕೋಟಿ ವ್ಯಯಿಸಲಾಗುತ್ತದೆ. 2025ರ ಮಳೆಗಾಲಕ್ಕೆ ಒಟ್ಟು 1,55,996 ಸಸಿ ನೆಡುವ ಗುರಿ ಹೊಂದಲಾಗಿದೆ. ಕಳೆದ ವರ್ಷ 1,02,000 ಸಸಿ ವಿತರಣೆ ಮಾಡಲಾಗಿದೆ. 2025–26ರಲ್ಲಿ ಎಲ್ಲ ಯೋಜನೆ ಸೇರಿ ಮಳೆಗಾಲದಲ್ಲಿ 703 ಹೆಕ್ಟೇರ್/ ಕಿ.ಮೀ. ಪ್ರದೇಶದಲ್ಲಿ ಸಸಿ ನೆಟ್ಟು ನಿರ್ವಹಣೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ನಮ್ಮ ಅರಣ್ಯ ಎಂಬ ಭಾವನೆ ಜನರಲ್ಲಿ ಮೂಡಿದಾಗ ಪರಿಸರದ ಉಳಿವು ಸಾಧ್ಯ. ಅಂತಹ ಕಾಳಜಿ ಎಲ್ಲರಲ್ಲೂ ಬರಬೇಕುಜಿ. ಗೋಪ್ಯನಾಯ್ಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ವಿಭಾಗ
ಅರಣ್ಯ ಮತ್ತು ಆಹಾರ
ಇಂದು ಮಾರ್ಚ್ 21. ರಾತ್ರಿ ಮತ್ತು ಹಗಲು ಸಮನಾಗಿರುವ ದಿನ. ಭೂಮಿಯ ಮೇಲೆ ಜೀವ ಸಂಕುಲದ ಉಳಿವು ಹಾಗೂ ಜೀವ ವೈವಿಧ್ಯತೆ ಸಂರಕ್ಷಣೆಯಲ್ಲಿ ಅರಣ್ಯಗಳ ಪಾತ್ರದ ಬಗ್ಗೆ ಅರಿವು ಮೂಡಿಸುವ ಧ್ಯೇಯದಿಂದ ಇದೇ ದಿನವನ್ನು ವಿಶ್ವ ಅರಣ್ಯ ದಿನವಾಗಿ ಆಚರಿಸಲಾಗುತ್ತಿದೆ. 2012ರಿಂದ ಪ್ರತಿ ವರ್ಷ ವಿಶ್ವ ಅರಣ್ಯ ದಿನ ಆಚರಿಸುತ್ತಿದ್ದು ಈ ಬಾರಿ (2025) ‘ಅರಣ್ಯ ಮತ್ತು ಆಹಾರ’ ಎನ್ನುವ ಧ್ಯೆಯ ವಾಕ್ಯ ವಿಶ್ವ ಅರಣ್ಯ ದಿನವನ್ನು ಮುನ್ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.