ದಾವಣಗೆರೆ: ಪ್ರತಿ ವರ್ಷ ಜನವರಿ 30 ರಂದು ‘ವಿಶ್ವ ಕುಷ್ಠರೋಗ ದಿನ’ ಅಥವಾ ‘ಕುಷ್ಠರೋಗ ನಿರ್ಮೂಲನಾ ದಿನ’ವನ್ನು ವಿಶಿಷ್ಟ ಧ್ಯೇಯದೊಂದಿಗೆ ಆಚರಿಸಲಾಗುತ್ತದೆ. ‘ಒಗ್ಗೂಡಿಸಿ, ಕಾರ್ಯಪ್ರವೃತ್ತರಾಗಿ, ನಿರ್ಮೂಲನೆ ಮಾಡಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಕುಷ್ಠರೋಗ ಬಹಳ ಹಿಂದಿನಿಂದಲೂ ಮಾನವ ಕುಲವನ್ನು ಕಾಡುತ್ತಿದೆ. ಇದು ದೀರ್ಘಕಾಲದ ರೋಗವಾಗಿದ್ದು, ‘ಮೈಕೋಬ್ಯಾಕ್ಟೀರಿಯಂ ಲೆಪ್ರೇ’ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಚರ್ಮ, ಬಾಹ್ಯ ನರಗಳು, ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಲೋಳೆಪೊರೆ ಮತ್ತು ಕಣ್ಣುಗಳ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ.
ಈ ರೋಗವು ಗುಣಪಡಿಸಬಹುದಾದದ್ದು. ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿದರೆ ಇದರಿಂದ ಉಂಟಾಗುವ ಅಂಗವೈಕಲ್ಯವನ್ನೂ ತಡೆಯಬಹುದು. ಕುಷ್ಠರೋಗ ನಿಯಂತ್ರಣದಲ್ಲಿ ಭಾರತ ಪ್ರಗತಿ ಸಾಧಿಸಿದ್ದರೂ ಪ್ರತಿ ವರ್ಷ ಶೇ 60ರಷ್ಟು ಹೊಸ ಪ್ರಕರಣಗಳು ವರದಿ ಆಗುತ್ತಲೇ ಇವೆ. ಹೀಗಾಗಿ ಪ್ರಕರಣಗಳನ್ನು ಶೀಘ್ರವೇ ಪತ್ತೆಮಾಡಿ, ಸಮರ್ಪಕ ಔಷಧೋಪಚಾರ ನೀಡಬೇಕಾದ ಅಗತ್ಯವಿದೆ.
ರೋಗ ಹೇಗೆ ಹರಡುತ್ತದೆ?
ರೋಗಿ ಕೆಮ್ಮಿದಾಗ ಹಾಗೂ ಸೀನಿದಾಗ ಮೂಗು ಮತ್ತು ಬಾಯಿಯಿಂದ ಹೊರಹೊಮ್ಮುವ ಹನಿಗಳ ಮೂಲಕ ಇದು ಬೇರೊಬ್ಬರಿಗೆ ಹರಡಬಹುದು ಎಂದು ಹೇಳಲಾಗಿದೆ. ಕುಷ್ಠರೋಗಿಯೊಂದಿಗೆ ದೀರ್ಘಾವಧಿ ಅಥವಾ ನಿಕಟ ಸಂಪರ್ಕವಿರುವವರಿಗೆ ಅಪಾಯ ಅಧಿಕ. ಟುಬರ್ಕ್ಯುಲಾಯ್ಡ್, ಬಾರ್ಡರ್ ಲೈನ್ ಟುಬರ್ಕ್ಯುಲಾಯ್ಡ್‌ನಂತಹ ವಿಧದ ಕುಷ್ಠರೋಗಿಗಳಲ್ಲಿ ಬ್ಯಾಕ್ಟೀರಿಯಾದ ಸಂಖ್ಯೆ ಕಡಿಮೆ ಇರುತ್ತದೆ. ಇವರಿಂದ ಇತರರಿಗೆ ಸೋಂಕು ಹರಡುವುದಿಲ್ಲ.
ಗ್ರಾಮೀಣ ಪ್ರದೇಶದ ಜನ ಕುಷ್ಠರೋಗಿಗಳಿಗೆ ಪಾರಂಪರಿಕ ವೈದ್ಯ ಪದ್ಧತಿಯಡಿ ಚಿಕಿತ್ಸೆ ನೀಡುವುದು ಸಾಮಾನ್ಯ ಎಂಬಂತಾಗಿದೆ. ಈ ಪದ್ಧತಿಯು ರೋಗ ನಿವಾರಣೆಗೆ ಪರಿಣಾಮಕಾರಿಯೇ ಎಂಬುದು ಎಲ್ಲೂ ಸಾಬೀತಾಗಿಲ್ಲ.
ಕುಷ್ಠರೋಗದ ಯಾವುದಾದರೂ ಲಕ್ಷಣ ಕಂಡುಬಂದರೆ ತಕ್ಷಣವೇ ಚರ್ಮರೋಗ ತಜ್ಞರನ್ನು ಸಂಪರ್ಕಿಸಬೇಕು. ಅವರು ರೋಗ ನಿರ್ಣಯ ಮಾಡಿ, ಸರಿಯಾದ ಚಿಕಿತ್ಸೆ ನೀಡುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಪಡೆಯುವ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಕುಷ್ಠರೋಗಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ. ಆದ್ದರಿಂದ ಚಿಕಿತ್ಸೆ ಪಡೆಯಲು ಯಾರೂ ವಿಳಂಬ ಮಾಡಬಾರದು.
ರೋಗಕ್ಕೆ ಸಂಬಂಧಿಸಿದ ಮಿಥ್ಯೆಗಳು
* ಕುಷ್ಠರೋಗ ಒಂದು ಸಾಂಕ್ರಾಮಿಕ ರೋಗ. ಆದರೆ ರೋಗಿಗಳು ತಾವು ಮಾಡಿದ ಪಾಪದ ಫಲವಾಗಿ ದೇವರು ಈ ಶಿಕ್ಷೆ ನೀಡಿದ್ದಾನೆ ಎಂದು ಭಾವಿಸುತ್ತಾರೆ.
* ಹಳ್ಳಿಗಳಲ್ಲಿ ಜನ ಕುಷ್ಠರೋಗಿಗಳನ್ನು ಅಸ್ಪೃಶ್ಯರಂತೆ ಕಾಣುತ್ತಾರೆ. ಅವರೊಡನೆ ಸಂಪರ್ಕ ಹೊಂದುವುದು ಅಶುಭ ಎಂಬ ನಂಬಿಕೆ ಪ್ರಚಲಿತದಲ್ಲಿದೆ.
* ರೋಗಿಯ ಕೈಕುಲುಕುವುದರಿಂದ, ತಬ್ಬಿಕೊಳ್ಳುವುದರಿಂದ, ಅವರೊಂದಿಗೆ ಊಟ ಹಂಚಿಕೊಳ್ಳುವುದರಿಂದ ಅಥವಾ ಪರಸ್ಪರ ಪಕ್ಕದಲ್ಲಿ ಕುಳಿತುಕೊಳ್ಳುವುದರಿಂದ ರೋಗ ಹರಡುತ್ತದೆ ಎಂಬ ಭಾವನೆ.
ರೋಗದ ಲಕ್ಷಣಗಳೇನು?
* ಚರ್ಮದ ಮೇಲೆ ತಿಳಿ-ಬಿಳಿ ಹಾಗೂ ತಾಮ್ರ ವರ್ಣದ ಮಚ್ಚೆಗಳಿರುವುದು. ಆ ಭಾಗದಲ್ಲಿ ಸ್ಪರ್ಶ ಜ್ಞಾನ ಇಲ್ಲದಿರುವುದು.
* ಕೈ ಮತ್ತು ಕಾಲುಗಳು ಜೋವು ಹಿಡಿಯುವುದು.
* ಕಾಲಿಂದ ಚಪ್ಪಲಿ ಪದೇ ಪದೇ ಜಾರುವುದು ಮತ್ತು ನರಗಳಲ್ಲಿ ನೋವು ಬರುವುದು.
* ಹೊಳಪಿನಿಂದ ಕೂಡಿದ ದಪ್ಪನೆಯ ಚರ್ಮ ಮತ್ತು ಚರ್ಮದ ಮೇಲೆ ಸಣ್ಣ ಗಂಟುಗಳು ಮೂಡುವುದು. ಇವುಗಳು ಮುಖ್ಯವಾಗಿ ಕಿವಿಯ ಹಾಲೆ, ಮುಖ ಮತ್ತು ಕೈ ಕಾಲುಗಳ ಮೇಲೆ ಕಾಣಬಹುದು.
* ಕೈ, ಪಾದ ಮತ್ತು ಕಣ್ಣುಗಳಲ್ಲಿ ಬಲಹೀನತೆ. ಅಂಗೈ- ಅಂಗಾಲುಗಳಲ್ಲಿ ಹುಣ್ಣು ಕಾಣಿಸಿಕೊಳ್ಳುವುದು.
* ಕೆಲವು ರೋಗಿಗಳಲ್ಲಿ ಮಚ್ಚೆಗಳು ಇದ್ದಕ್ಕಿದ್ದಂತೆ ಕೆಂಪಾಗಿ, ಬಾವು ಬರುವುದು ಮತ್ತು ನೋವು ಉಂಟಾಗುವುದು. ಕೈ ಕಾಲುಗಳ ಕೆಲವು ನರಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುವುದು.
ರೋಗಿ ಪಾಲಿಸಬೇಕಾದ ಕ್ರಮಗಳು
* ನಿಯಮಿತವಾಗಿ ಎಂ.ಡಿ.ಟಿ ಔಷಧ ಪಡೆಯುವುದು. ಕ್ಲೋಫಾಜಿಮೈನ್, ರಿಫಾಂಪಿಸಿನ್ ಹಾಗೂ ಡ್ಯಾಪ್ಸೋನ್ ಒಳಗೊಂಡ ಚಿಕಿತ್ಸೆ ಪಡೆಯುವುದು ಉತ್ತಮ.
* ಪಾದ ಮತ್ತು ಕೈಗಳಲ್ಲಿ ಹೊಸ ಗಾಯಗಳು ಆಗಿವೆಯೇ ಇಲ್ಲವೇ ಎಂಬುದನ್ನು ದಿನಕ್ಕೆ ಕನಿಷ್ಠ 2 ಬಾರಿ ಪರೀಕ್ಷಿಸಿಕೊಳ್ಳಬೇಕು.
* ಸ್ನಾನ ಮಾಡಿದ ಬಳಿಕ ಒಣ ತ್ವಚೆಯ ಮೇಲೆ ಕ್ರೀಮ್ ಅಥವಾ ಲೋಷನ್ ಹಚ್ಚಬೇಕು.
* ಸಂವೇದನೆ ಕಳೆದುಕೊಂಡ ಪಾದಗಳಲ್ಲಿ ಗಾಯ ಆಗದಂತೆ ತಡೆಯಲು ಎಂ.ಸಿ.ಆರ್ ಚಪ್ಪಲಿ ಬಳಸಬೇಕು.
* ಕೈಗಳು ಸಂವೇದನೆ ಕಳೆದುಕೊಂಡಿದ್ದರೆ ಬರಿಗೈಯಲ್ಲಿ ಬಿಸಿ ವಸ್ತುಗಳನ್ನು ಮುಟ್ಟಬಾರದು.
* ನಿಯಮಿತವಾಗಿ ವ್ಯಾಯಾಮ ಮತ್ತು ಫಿಸಿಯೋಥೆರಪಿ ಮಾಡಬೇಕು.
* ವೈದ್ಯರ ಸಲಹೆ ಪಡೆದ ಬಳಿಕವೇ ಮಾತ್ರೆ ನುಂಗುವುದನ್ನು ನಿಲ್ಲಿಸಬೇಕು.
* ಎಂಡಿಟಿ ಮಾತ್ರೆಯಿಂದ ಏನಾದರೂ ತೊಂದರೆ ಆದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
–ಲೇಖಕರು, ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ಚರ್ಮರೋಗ ವಿಭಾಗದ ಮುಖ್ಯಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.