ADVERTISEMENT

ಸಿರುಗುಪ್ಪ: ಎಕ್ಸ್‌–ರೇ ಯಂತ್ರಕ್ಕೆ ಗ್ರಹಣ, ಪರದಾಟ

ಸಿರುಗುಪ್ಪ ತಾಲ್ಲೂಕು ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 4:46 IST
Last Updated 11 ಸೆಪ್ಟೆಂಬರ್ 2024, 4:46 IST
ಸಿರುಗುಪ್ಪ ನಗರದ ಸಾರ್ವಜನಿಕ ಆಸ್ಪತ್ರೆಗೆ ನಿತ್ಯವೂ ಚಿಕಿತ್ಸೆಗೆ ಭೇಟಿ ನೀಡುವ ರೋಗಿಗಳು
ಸಿರುಗುಪ್ಪ ನಗರದ ಸಾರ್ವಜನಿಕ ಆಸ್ಪತ್ರೆಗೆ ನಿತ್ಯವೂ ಚಿಕಿತ್ಸೆಗೆ ಭೇಟಿ ನೀಡುವ ರೋಗಿಗಳು   

ಸಿರುಗುಪ್ಪ: ನಗರದ ನೂರು ಹಾಸಿಗೆಗಳ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಷ–ಕಿರಣ (ಎಕ್ಸ್ ರೇ) ಯಂತ್ರ ಕೆಲ ದಿನಗಳಿಂದ ಸ್ಥಗಿತವಾಗಿರುವುದರಿಂದ ಪರೀಕ್ಷೆಗಾಗಿ ರೋಗಿಗಳು ಪರದಾಡುವಂತಾಗಿದೆ.

ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ತೆಕ್ಕಲಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ಎಕ್ಸ್ ರೇ ಯಂತ್ರ ತಾಂತ್ರಿಕ ಸಮಸ್ಯೆಯಿಂದ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ರೋಗಿಗಳು ಖಾಸಗಿ ಕೇಂದ್ರಗಳನ್ನು ಅವಲಂಬಿಸುವಂತಾಗಿದೆ.

ತೆಕ್ಕಲಕೋಟೆಯ ಸಮುದಾಯ ಆರೋಗ್ಯ ಕೇಂದ್ರದ ಎಕ್ಸ್ ರೇ ಯಂತ್ರ ಕೆಟ್ಟು ತಿಂಗಳು ಕಳೆದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ತೆಕ್ಕಲಕೋಟೆ ಸೇರಿದಂತೆ ಸುತ್ತಲಿನ ಹಳ್ಳಿಗಳ ಸಾರ್ವಜನಿಕರು ಎಕ್ಸ್ ರೇಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಬರುವುದು ಅನಿವಾರ್ಯವಾಗಿದೆ. ಪ್ರತಿ ದಿನ 70ಕ್ಕೂ ಹೆಚ್ಚು ರೋಗಿಗಳು ಎಕ್ಸ್ ರೇಗಾಗಿ ಕಾಯು ವಂತಾಗಿದೆ.

ADVERTISEMENT

‘ಕೆಲ ದಿನಗಳಿಂದ ಪಕ್ಕೆಲುಬು ನೋಯುತ್ತಿದೆ ಸಾರ್, ಡಾಕ್ಟ್ರು ಎಕ್ಸ್ ರೇ ತೆಗೆಸಲು ಹೇಳಿದ್ದಾರೆ. ಇಲ್ಲಿ ಬಂದರೆ ಮಷಿನ್ ಕೆಲ್ಸ ಮಾಡ್ತಾ ಇಲ್ಲ ಅಂತ ಹೇಳ್ತಾ ಇದ್ದಾರೆ’ ಎಂದು ರೋಗಿ ವೀರೇಶ ಅಳಲು ತೋಡಿಕೊಂಡರು.

‘ಆಸ್ಪತ್ರೆಯಲ್ಲಿ ಸರ್ಕಾರಿ ದರದಲ್ಲಿ ಎಕ್ಸ್ ರೇ ಮಾಡಲಾಗುತ್ತದೆ. ಯಂತ್ರ ಸರಿಇಲ್ಲದ ಕಾರಣ ಖಾಸಗಿ ಕೇಂದ್ರದಲ್ಲಿ ₹400 ನೀಡಬೇಕು. ಬಡವರು ಅಷ್ಟೊಂದು ಹಣ ಎಲ್ಲಿಂದ ತರಬೇಕು’ ಎಂದು ರೋಗಿ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ಕ್ಷಕಿರಣ ತಜ್ಞ ಡಾ. ಅಮೃತ್, ‘ಎಕ್ಸ್ ರೇ ಯಂತ್ರ ಸುಸ್ಥಿತಿಯಲ್ಲಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಕಾರ್ಯಾಚರಿಸುತ್ತಿಲ್ಲ. ವಿದ್ಯುತ್ ಪ್ರವಾಹ(ವೋಲ್ಟೇಜ್) ಹೆಚ್ಚು-ಕಡಿಮೆ ಆಗುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ’ ಎಂದರು.

ಸಿರುಗುಪ್ಪ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಕೆಲಸ ಮಾಡದ ಕ್ಷ-ಕಿರಣ ಯಂತ್ರ
ಕ್ಷ-ಕಿರಣ ಯಂತ್ರದ ಸಮಸ್ಯೆ ಪರಿಹರಿಸಲು ಒಂದುವಾರ ಕಾಲಾವಕಾಶ ಬೇಕಿದ್ದು ತಾಂತ್ರಿಕ ಸಮಸ್ಯೆ ಪರಿಹರಿಸಲಾಗುವುದು
ಡಾ. ವೀರೇಂದ್ರ ಕುಮಾರ್ ತಾಲ್ಲೂಕು ವೈದ್ಯಾಧಿಕಾರಿ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.