ADVERTISEMENT

ವರ್ಷವಾದರೂ ಹೆದರಿಕೆ ಹೋಗಿಲ್ಲ: ಉಮಾ ಎಸ್‌.ಕೆ.

ಬಾಲಕೃಷ್ಣ ಪಿ.ಎಚ್‌
Published 4 ಮೇ 2021, 4:58 IST
Last Updated 4 ಮೇ 2021, 4:58 IST
ಉಮಾ ಎಸ್‌.ಕೆ.
ಉಮಾ ಎಸ್‌.ಕೆ.   

ದಾವಣಗೆರೆ: ‘ಕೊರೊನಾ ಮೊದಲ ಅಲೆ ಬಂದಾಗ ಭಯವಾಗಿತ್ತು. ಆದರೆ ರೋಗಿಗಳು ಪರದಾಡುವುದನ್ನು ನೋಡಿಯೂ ಸುಮ್ಮನಿರಲು ಆಗಲ್ಲ. ಹಾಗಾಗಿ ಆ ಭಯದ ನಡುವೆಯೇ ಕೆಲಸ ಮಾಡಿದ್ದೆ. ಈಗ ಎರಡನೇ ಅಲೆ ಬಂದಿದೆ. ಆ ಭಯ ಮಾತ್ರ ಇನ್ನೂ ಹೋಗಿಲ್ಲ’ ಎಂದು ಐಸಿಯು, ಎಂಐಸಿಯುನಲ್ಲಿ ಶುಶ್ರೂಷಕ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್‌ ಉಮಾ ಎಸ್‌.ಕೆ. ಹೇಳಿದ್ದಾರೆ.

‘ಪ್ರಜಾವಾಣಿ’ ಜತೆಗೆ ತಮ್ಮ ಅನುಭವ ಹಂಚಿಕೊಂಡರು. ಮೊದಲು 60 ವರ್ಷದ ಮೇಲಿನವರು, ಬಳಿಕ 45 ವರ್ಷ ದಾಟಿದವರು ಲಸಿಕೆ ಹಾಕಿಸಿಕೊಂಡು ಬಚಾವಾದರು. ಅವರಿಗೆ ಕೊರೊನಾ ಬಂದರೂ ಅಪಾಯ ಅಷ್ಟಾಗಿ ಇಲ್ಲ. ಲಸಿಕೆ ಹಾಕಿಸಿಕೊಳ್ಳದೇ ಇರುವವರೇ ಈಗ ಸಮಸ್ಯೆ ಎದುರಿಸುತ್ತಿದ್ದಾರೆ. ಗಂಭೀರ ಸ್ಥಿತಿಗೆ ಹೋಗುತ್ತಿರುವವರಲ್ಲಿ ಅಂಥವರ ಸಂಖ್ಯೆಯೇ ಜಾಸ್ತಿ ಇದೆ. 45 ವರ್ಷದೊಳಗಿನವರು ಮೊದಲು ಮೆಡಿಕಲ್‌ನಲ್ಲಿ ಔಷಧ ತೆಗೆದುಕೊಂಡು ಸಮಸ್ಯೆ ಗಂಭೀರ ಆದ ಮೇಲೆ ಬರುತ್ತಿದ್ದಾರೆ. ಅಷ್ಟು ಹೊತ್ತಿಗೆ ಶ್ವಾಸಕೋಶಕ್ಕೆ ಡ್ಯಾಮೇಜ್‌ ಆಗಿರುತ್ತದೆ. ಉಸಿರಾಟದ ಏರಿಳಿತ ಕಡಿಮೆಯಾಗಿರುತ್ತದೆ ಎಂದು ವಿವರಿಸಿದರು.

‘ಕಳೆದ ವರ್ಷ ಜುಲೈಯಲ್ಲಿ ನನಗೆ ಕೊರೊನಾ ಬಂದಿತ್ತು. ಬಳಿಕ ಪತಿಗೆ, ಮಗಳಿಗೆ, ಮಗನಿಗೆ ಎಲ್ಲರಿಗೂ ಬಂದಿತ್ತು. ನಾನು 10 ದಿನ ಬೆಡ್‌ನಲ್ಲೇ ಇದ್ದೆ. ಬಳಿಕ ಚೇತರಿಸಿಕೊಂಡೆ. ಈಗ ರೋಗಿಗಳನ್ನು ಕಂಡಾಗ ಅಂಥ ಸ್ಥಿತಿ ನನಗೂ ಬಂದರೆ ನೋಡಿಕೊಳ್ಳುವವರು ಯಾರು ಎಂಬ ಭಯ ಕಾಡುತ್ತಿರುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಎಚ್‌ಐವಿ, ಚಿಕೂನ್‌ಗುನ್ಯ, ಎಚ್‌1ಎನ್‌1 ಹೀಗೆ ಅನೇಕ ಕಾಯಿಲೆಗಳು ಬಂದಾಗ ಆ ರೋಗಿಗಳನ್ನು ಮುಟ್ಟಲೂ ಹೆದರುವ ಸ್ಥಿತಿಗಳಿದ್ದವು. ಬಳಿಕ ಬದಲಾಯಿತು. ಅದರಂತೆ ಕೊರೊನಾ ಕೂಡ ಒಂದು ಕಾಯಿಲೆ. ಅದಕ್ಕೆ ಸರಿಯಾದ ಚಿಕಿತ್ಸೆ ಮತ್ತು ಆಮ್ಲಜನಕ ವ್ಯವಸ್ಥೆ ಇರಬೇಕು. ಸದ್ಯ ನಮ್ಮಲ್ಲಿ ಸಮಸ್ಯೆ ಇಲ್ಲ. ಮುಂದೆ ಸಮಸ್ಯೆಯಾಗದಂತೆ ಮಾಡಲು ಎಲ್ಲ ಚೌಟ್ರಿಗಳು, ವಸತಿನಿಲಯಗಳಲ್ಲಿ ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಿದರೆ ಮುಂದೆ ಸಮಸ್ಯೆಯಾಗುವುದನ್ನು ತಪ್ಪಿಸಬಹುದು ಎಂಬುದು ಅವರ ಸಲಹೆ.

‘ಕೊರೊನಾ ವಾರಿಯರ್‌ಗಳಾಗಿ ಆರೋಗ್ಯ ಇಲಾಖೆಯ ನಾವು ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ. ದಿನಕ್ಕೆ ಆರೂವರೆಯಿಂದ ಏಳು ಗಂಟೆ ಪಿಪಿಇ ಕಿಟ್‌ ಹಾಕಿಕೊಂಡು ಇರುತ್ತೇವೆ. ಅದಕ್ಕೆ ಸರಿಯಾಗಿ ಸರ್ಕಾರದಿಂದ ಉತ್ತೇಜನ ಸಿಗುತ್ತಿಲ್ಲ. ನಮ್ಮನ್ನು ಗುರುತಿಸುತ್ತಿಲ್ಲ. ಹಳೇ ವೇತನದಲ್ಲಿಯೇ ಕೆಲಸ ಮಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.