ADVERTISEMENT

ಬೆಳೆ ಪರಿಹಾರ: ವಾರದ ಗಡುವು

ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಖಡಕ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 11:43 IST
Last Updated 28 ನವೆಂಬರ್ 2019, 11:43 IST
ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌
ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌   

ಮಡಿಕೇರಿ: ‘ವಸತಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡದಿದ್ದಲ್ಲಿ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ಬೆಳೆ ಪರಿಹಾರದ ವಿವರದ ಪ್ರಗತಿ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು ಅವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಬಾಕಿ ಉಳಿದಿರುವ ಬೆಳೆ ಪರಿಹಾರವನ್ನು ಒಂದು ವಾರದ ಒಳಗೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಜಿಲ್ಲೆಯ ವಿವಿಧೆಡೆ ತೋಟಗಾರಿಕೆ ಇಲಾಖೆಗೆ ಅವಶ್ಯವಿರುವ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಿ ಹಾಗೂ ಭಾಗಮಂಡಲದಲ್ಲಿ ಕೃಷಿ ಇಲಾಖೆಗೆ ಅವಶ್ಯವಿರುವ ಜಾಗವನ್ನು ಕೃಷಿ ಇಲಾಖೆಯ ಹೆಸರಿಗೆ ಅರ್‌ಟಿಸಿ ಮಂಜೂರು ಮಾಡಲು ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರುಂಧತಿ, ಜಿಲ್ಲೆಯಲ್ಲಿನ 83 ಅಂಗನವಾಡಿಗಳಿಗೆ ಸ್ವಂತ ನಿವೇಶನದ ಅವಶ್ಯಕತೆಯಿದ್ದು, ಇದರಲ್ಲಿ 30 ಅಂಗನವಾಡಿಗಳಿಗೆ ನಿವೇಶನ ಗುರುತಿಸಿದ್ದು, ಬಾಕಿ ಉಳಿದಿರುವ 53 ಅಂಗನವಾಡಿಗಳಿಗೆ ಜಾಗದ ಅವಶ್ಯಕತೆ ಇರುವುದಾಗಿ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸರ್ಕಾರಿ ನಿವೇಶನ ಲಭ್ಯವಿರದ ಕಡೆ ಕಂದಾಯ ಅಧಿಕಾರಿಗಳು ಹಿಂಬರಹ ನೀಡಬೇಕು. ಅರಣ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಇರುವಂತಹ ಅಂಗನವಾಡಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸ್ಥಳ ಪರೀಶಿಲನೆ ನಡೆಸಿ ಸರ್ಕಾರಿ ನಿವೇಶನ ಲಭ್ಯವಿಲ್ಲದಲ್ಲಿ ಖಾಸಗಿ ನಿವೇಶನ ಖರೀದಿ ಹಾಗೂ ದಾನಿಗಳು ಮುಂದೆ ಬಂದಲ್ಲಿ ಅಂತಹವರಿಂದ ನಿವೇಶನ ಪಡೆದು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ವಿರಾಜಪೇಟೆ ನ್ಯಾಯಾಲಯಕ್ಕೆ ಮಂಜೂರಾಗಿರುವ ಜಾಗವನ್ನು ಆರ್‌ಟಿಸಿಯಲ್ಲಿ ನೋಂದಾಯಿಸಿ ಹಸ್ತಾಂತರಿಸಲು ಸೂಕ್ತ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸ್ಮಶಾನ, ವಿದ್ಯಾರ್ಥಿ ನಿಲಯಗಳು, ಸಮುದಾಯ ಭವನಗಳು ಹಾಗೂ ಕಸ ವಿಲೇವಾರಿಗೆ ಅಗತ್ಯವಿರುವ ಜಾಗವನ್ನು ಆದ್ಯತೆ ಮೇರೆಗೆ ಗುರುತಿಸಿ ಸರ್ವೆ ಮಾಡಿ ಸಂಬಂಧಪಟ್ಟ ಇಲಾಖೆಗಳ ಸುರ್ಪದಿಗೆ ನೀಡುವಂತೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಭೂದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್‌, ತಹಶೀಲ್ದಾರ್ ಗೋವಿಂದರಾಜು, ಮಹೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.