ADVERTISEMENT

ಅಂಗಡಿಗಳಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

ರೂ.25 ಸಾವಿರ ಪರಿಹಾರಕ್ಕೆ ಪಾಲಿಕೆ ತುರ್ತು ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:57 IST
Last Updated 5 ಡಿಸೆಂಬರ್ 2012, 6:57 IST

ಧಾರವಾಡ: ಇಲ್ಲಿಯ ಸೂಪರ್ ಮಾರ್ಕೆಟ್‌ನಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಬೆಂಕಿ ದುರಂತದಲ್ಲಿ 34 ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಸುಮಾರು ರೂ.85 ಲಕ್ಷ  ಹಾನಿ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಈ ದುರಂತ ಸಂಭವಿಸಿದ್ದು, ಬಟ್ಟೆ ಅಂಗಡಿ, ಸೇರಿದಂತೆ ತರಕಾರಿ ಮತ್ತಿತರ ಅಂಗಡಿಗಳು ಸುಟ್ಟಿವೆ. ಅಂಗಡಿಗಳ ಪಕ್ಕದಲ್ಲಿಯೇ ವಿದ್ಯುತ್ ಕಂಬಗಳಿದ್ದು, ಅವುಗಳಿಗೆ ಸರಿಯಾದ ರೀತಿಯಲ್ಲಿ ವೈರಿಂಗ್ ಮಾಡದೇ ಇದ್ದುದರಿಂದ ಈ ಅನಾಹುತ ಸಂಭವಿಸಿದೆ ಎಂದು ಅಂಗಡಿಕಾರರು ಆರೋಪಿಸಿದ್ದಾರೆ.

ಮಾರುಕಟ್ಟೆ ಪಕ್ಕದಲ್ಲಿಯೇ ಸೋಮವಾರ ರಾತ್ರಿ ಕವ್ವಾಲಿ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿ ಸೇರಿದ್ದ ಜನರು ಸುಮಾರು 2.30 ಗಂಟೆಗೆ ಬೆಂಕಿ ಹೊತ್ತಿರುವುದನ್ನು ಗಮನಿಸಿ ನಂದಿಸಲು ಮುಂದಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗೂ ಸುದ್ದಿ ತಿಳಿಸಿದ್ದಾರೆ.

ವ್ಯಾಪಕವಾಗಿ ಹರಡಿಕೊಂಡಿದ್ದ ಬೆಂಕಿ ಸುತ್ತಮುತ್ತಲಿನ ಅಂಗಡಿಗಳಿಗೆ ಹರಡಿಕೊಳ್ಳುತ್ತಿದ್ದಂತೆಯೇ ಅಂಗಡಿಯಲ್ಲಿದ್ದ ಸಾಮಾನುಗಳನ್ನು ಹೊರಹಾಕಿ, ಹೆಚ್ಚಿನ ಅನಾಹುತ ಆಗುವುದನ್ನು ಸಿಬ್ಬಂದಿ ಹಾಗೂ ಸಾರ್ವಜನಿಕರು ತಡೆಗಟ್ಟಿದರು.

ಶಾಸಕರಾದ ಸೀಮಾ ಮಸೂತಿ, ಚಂದ್ರಕಾಂತ ಬೆಲ್ಲದ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಪೊಲೀಸ್ ಆಯುಕ್ತ ಪದ್ಮನಯನ, ಮೇಯರ್ ಡಾ.ಪಾಂಡುರಂಗ ಪಾಟೀಲ, ಉಪಮೇಯರ್ ಭಾರತಿ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಶಾಸಕಿ ಸೀಮಾ ಮಸೂತಿ ಮತ್ತು ಚಂದ್ರಕಾಂತ ಬೆಲ್ಲದ ಅಂಗಡಿಕಾರರಿಗೆ ಭರವಸೆ ನೀಡಿದರು.

ಪಾಲಿಕೆ ತುರ್ತು ಸಭೆ
ಬೆಂಕಿ ದುರಂತದಲ್ಲಿ ಅಂಗಡಿ ಕಳೆದುಕೊಂಡವರಿಗೆ ತಲಾ ರೂ.25,000 ಪರಿಹಾರ ನೀಡಲು ಮಂಗಳವಾರ ಇಲ್ಲಿ ನಡೆದ ಮಹಾನಗರ ಪಾಲಿಕೆ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.

“ಪಾಲಿಕೆಯಿಂದ ನಿರಕ್ಷೇಪಣಾ ಪತ್ರ ಪಡೆಯದೇ ಕಾನೂನುಬಾಹಿರವಾಗಿ ಅಂಗಡಿಗಳನ್ನು ಆರಂಭಿಸಿದ್ದು, ಪಾಲಿಕೆಯು ಮಾನವೀಯತೆಯ ದೃಷ್ಟಿಯಿಂದ ಪರಿಹಾರ ನೀಡಲು ನಿರ್ಧರಿಸಿದೆ” ಎಂದು ಮೇಯರ್ ಡಾ.ಪಾಂಡುರಂಗ ಪಾಟೀಲ ಹೇಳಿದರು.

“ಅಂಗಡಿಗಳಲ್ಲಿ ತ್ಯಾಜ್ಯ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿದ್ದುದರಿಂದ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಹರಡಲು ಕಾರಣವಾಗಿದೆ. ಅಂಗಡಿಕಾರರು ಪ್ರತಿ ದಿನ ತ್ಯಾಜ್ಯ ವಸ್ತುಗಳನ್ನು ಪಾಲಿಕೆಯ ಡಬ್ಬಗಳಲ್ಲಿ ಎಸೆಯಬೇಕು” ಎಂದು ಪಾಟೀಲ ಹೇಳಿದರು.
ಅಂಗಡಿಗಳಲ್ಲಿರುವ ತ್ಯಾಜ್ಯ ವಸ್ತುಗಳನ್ನು ಹೊರಹಾಕುವಂತೆ ಕ್ರಮ ತೆಗೆದುಕೊಳ್ಳಬೇಕು ಮತ್ತು ತ್ಯಾಜ್ಯ ಸಂಗ್ರಹಿಸಿಟ್ಟಿರುವವರಿಗೆ ದಂಡ ವಿಧಿಸಬೇಕೆಂದು ಮೇಯರ್  ಸೂಚಿಸಿದರು.

“ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದ್ದು, ಶೀಘ್ರವೇ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ” ಎಂದು ಮೇಯರ್ ಈ ಸಂದರ್ಭದಲ್ಲಿ ತಿಳಿಸಿದರು.

“ಬೆಂಕಿ ದುರಂತಕ್ಕೆ ಬಲಿಯಾಗಿರುವ ಅಂಗಡಿಗಳು ಕಚ್ಚಾ ಶೆಡ್ ಹೊಂದಿದ್ದು, ಪ್ರತಿ ಅಂಗಡಿಗೆ ರೂ.15,000 ನೀಡಬೇಕೆಂಬ ನಿಯಮವಿದೆ. ಆದ್ದರಿಂದ ನಿಯಮಾವಳಿಗಳ ಚೌಕಟ್ಟಿನಲ್ಲಿ ಪರಿಹಾರ ನಿರ್ಧರಿಸಬೇಕು” ಎಂದು ಪಾಲಿಕೆಯ ಆಯುಕ್ತ ವೈ.ಎಸ್.ಪಾಟೀಲ ಹೇಳಿದರು.

“ಪಾಲಿಕೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ನೀಡಬೇಕು” ಎಂದು ಕಾಂಗ್ರೆಸ್ಸಿನ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದರು. ವೈಯಕ್ತಿಕವಾಗಿ 5000 ರೂ. ನೀಡುವಂತೆ ಬಿಜೆಪಿಯ ಶಾಂತಪ್ಪ ದೇವಕ್ಕಿ ಮನವಿ ಮಾಡಿಕೊಂಡರಾದರೂ ಯಾರೂ ಸರಿಯಾಗಿ ಸ್ಪಂದಿಸಲಿಲ್ಲ.

“ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಾಣದಲ್ಲಿನ ವಿಳಂಬವೇ ಮಾರುಕಟ್ಟಯಲ್ಲಿನ ಬೆಂಕಿ ದುರಂತಗಳಿಗೆ ಮೂಲ ಕಾರಣ” ಎಂದು ಕಾಂಗ್ರೆಸ್ಸಿನ ಯಾಸೀನ್ ಹಾವೇರಿಪೇಟ್ ಹೇಳಿದರು. ಪಾಲಿಕೆ ಮತ್ತು ಸ್ಥಳೀಯ ಶಾಸಕರು ಈ ನಿಟ್ಟಿನಲ್ಲಿ ಗಮನ ಹರಿಸಿ, ಹೊಸ ಮಾರುಕಟ್ಟೆ ಸಂಕೀರ್ಣ ಶೀಘ್ರ ನಿರ್ಮಾಣವಾಗುಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.

“ಮಾರುಕಟ್ಟೆಯಲ್ಲಿ ಹಲವಾರು ಅನಧಿಕೃತ ಕಟ್ಟಡಗಳಿದ್ದು, ಈ ಕುರಿತು ತನಿಖೆಯಾಗಬೇಕು” ಎಂದು ಬಿಜೆಪಿಯ ಶಿವಾನಂದ ಮುತ್ತಣ್ಣವರ ಆಗ್ರಹಿಸಿದರು. ತನಿಖಾ ವರದಿ ಸಲ್ಲಿಕೆಯ ನಂತರವೇ ಪರಿಹಾರ ವಿತರಿಸಬೇಕು ಎಂದು ಮುತ್ತಣ್ಣವರ ಹೇಳಿದಾಗ ಮೇಯರ್ ಅವರು ಮುತ್ತಣ್ಣವರ ಅವರ ಬೇಡಿಕೆಯನ್ನು ತಿರಸ್ಕರಿಸಿದರು ಅಲ್ಲದೇ ಇತರ ಸದಸ್ಯರು ಮುತ್ತಣ್ಣವರ ಹೇಳಿಕೆಗೆ ವಿರೋಧಿಸಿದಾಗ ಮುತ್ತಣ್ಣವರ ಸಭಾತ್ಯಾಗ ಮಾಡಿದರು.

ಅಕ್ರಮ ಅಂಗಡಿಗಳು: ಮಹಾನಗರ ಪಾಲಿಕೆ ಅಧಿಕಾರಿಗಳ ಪ್ರಕಾರ ಇವೆಲ್ಲವೂ ಅನಧಿಕೃತ ಅಂಗಡಿಗಳು! ಈ ಅಂಗಡಿಗಳನ್ನು ಪ್ರಾರಂಭಿಸಲು ಪಾಲಿಕೆಯು ಯಾವುದೆ ಅನುಮತಿ ನೀಡಿಲ್ಲ ಹಾಗೂ ಯಾವುದೇ ಲೈಸೆನ್ಸ್ ಪಡೆಯದೇ ಈ ಅಂಗಡಿಗಳನ್ನು ಪ್ರಾರಂಭಿಸಲಾಗಿದೆ.

ಇಲ್ಲಿ ಪ್ರತಿ ದಿನ ವ್ಯಾಪಾರ ಮಾಡಲು 5 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಸುಮಾರು 20 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿರುವವರು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಲ್ಲ ಅಂಗಡಿಕಾರರು ಸೂಪರ್ ಮಾರ್ಕೆಟ್ ಪ್ರದೇಶವನ್ನು ಅತಿಕ್ರಮಿಸಿ ಅಂಗಡಿ ನಿರ್ಮಿಸಿದ್ದು, ಇಲ್ಲಿ ದ್ವಿಚಕ್ರ ವಾಹನ ಅಥವಾ ಅಗ್ನಿಶಾಮಕ ವಾಹನ ಹೋಗಲು ಸಹ ರಸ್ತೆ ಇಲ್ಲದಂತಾಗಿದೆ. ಬೆಂಕಿಗೆ ಬಲಿಯಾಗಿರುವ ಎಲ್ಲ 34 ಅಂಗಡಿಗಳಿಗೆ ವಿದ್ಯುತ್ ಸಂಪರ್ಕವಿದೆ. ಈ ಅಂಗಡಿಗಳು ಅಕ್ರಮ ಎಂದು ಪಾಲಿಕೆ ಹೇಳುತ್ತಿದೆ.

ಆದರೆ ಈ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟವರಾರು ಎಂಬ ಪ್ರಶ್ನೆ ಈಗ ಎದುರಾಗಿದೆ. ಈ ಅಕ್ರಮ ಅಂಗಡಿಗಳಿಗೆ ವಿದ್ಯುತ್ ದೊರಕಿಸುವಲ್ಲಿ ಸ್ಥಳೀಯ ಮುಖಂಡರ ಕೈವಾಡವಿದೆ ಎಂಬುದು ಜನರ ಆರೋಪ. ಆದರೆ ಪಾಲಿಕೆ ಅಧಿಕಾರಿಗಳು ಈ ಅಕ್ರಮ ಅಂಗಡಿಗಳ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂಬ ಪ್ರಶ್ನೆ ಎದುರಾಗಿದೆ. “

ಪಾಲಿಕೆ ಸೂಪರ್ ಮಾರ್ಕೆಟ್‌ನಲ್ಲಿ ಅಂಗಡಿ ನಿರ್ಮಾಣಕ್ಕೆ 480 ಜನರಿಗೆ ಪರವಾನಿಗೆ ನೀಡಿತ್ತು. ಈಗ ಅಲ್ಲಿ 900ಕ್ಕೂ ಹೆಚ್ಚು ಅಂಗಡಿಗಳಿವೆ. ಈ ಕುರಿತು ತನಿಖೆಯಾಗಬೇಕು. ಮುಂದೆ ಇಂಥ ಬೆಂಕಿ ದುರಂತ ನಡೆಯದಂತೆ ನೋಡಿಕೊಳ್ಳಬೇಕು” ಎಂದು ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.