ADVERTISEMENT

ಅಂಗವಿಕಲರ ಪಾಲಿನ ಅಪದ್ಭಾಂದವ ಮಂಜಪ್ಪ

ಇ.ಎಸ್.ಸುಧೀಂದ್ರ ಪ್ರಸಾದ್
Published 4 ಡಿಸೆಂಬರ್ 2017, 8:42 IST
Last Updated 4 ಡಿಸೆಂಬರ್ 2017, 8:42 IST
ಮಂಜಪ್ಪ ಹುಬ್ಬಳ್ಳಿ
ಮಂಜಪ್ಪ ಹುಬ್ಬಳ್ಳಿ   

ಧಾರವಾಡ: ಅಂಗವಿಕಲರಿಗೆ ಸರ್ಕಾರದಿಂದ ದೊರಕುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಜೊತೆಗೆ ಅವುಗಳನ್ನು ಒದಗಿಸುವ ಕಾಯಕದಲ್ಲಿ ತಮ್ಮನ್ನೇ ತಾವು ಅರ್ಪಿಸಿಕೊಂಡವರು ಕುಂದಗೋಳ ತಾಲ್ಲೂಕಿನ ದೇವನೂರು ಗ್ರಾಮದ ಮಂಜಪ್ಪ ಹುಬ್ಬಳ್ಳಿ.

ಪಿಯುಸಿವರೆಗೂ ವ್ಯಾಸಂಗ ಮಾಡಿರುವ ಮಂಜಪ್ಪ, ಪೋಲಿಯೊದಿಂದ ಬಾಲ್ಯದಲ್ಲೇ ಬಲಗಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಆದರೆ, ಅವರಲ್ಲಿರುವ ಸೇವಾ ಮನೋಭಾವ ಅವರನ್ನು ಹಲವು ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುವಂತೆ ಮಾಡಿದೆ. ಹೀಗಾಗಿ ಜನಮುಖಿ ಹಾಗೂ ಎಕ್ವಿಪ್‌ ಇಂಡಿಯಾದಂಥ ಸಂಸ್ಥೆಯಲ್ಲಿ ಕೆಲಸ ಮಾಡುವಂತೆ ಇವರನ್ನು ಪ್ರೇರೇಪಿಸಿತು. ನಂತರ ತನ್ನ ತಾಲ್ಲೂಕಿನಲ್ಲಿರುವ ಸೌಲಭ್ಯ ವಂಚಿತರಿಗೆ ನೆರವಾಗುವ ಉದ್ದೇಶದಿಂದ ಕಳೆದ ಕೆಲವು ವರ್ಷಗಳಿಂದ ದೇವನೂರಿನಲ್ಲೇ ನೆಲೆಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ಅಂಗವಿಕಲರ ಮಕ್ಕಳನ್ನು ಶಾಲೆಗೆ ಸೇರಿಸುವುದು, ಅಂಗವಿಕಲರ ಮಕ್ಕಳು ಓದು ಮುಂದುವರೆಯಲು ವಿವಿಧ ಇಲಾಖೆಗಳ ಸೌಲಭ್ಯಗಳು ಲಭ್ಯವಾಗುವಂತೆ ಜವಾಬ್ದಾರಿ ತೆಗೆದುಕೊಳ್ಳುವುದು, ಪೋಷಣಭಾಗ್ಯ ದೊರಕಿಸಿಕೊಡುವುದು, ಗಾಲಿ ಕುರ್ಚಿ ಕೊಡಿಸುವುದು, ಬುದ್ಧಿಮಾಂದ್ಯ ಮಕ್ಕಳಿಗೆ ಎಂಆರ್‌ ಕಿಟ್ ಸೌಲಭ್ಯ ನೀಡುವುದು, ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಿಕೊಡುವುಲ್ಲಿ ಮಂಜಪ್ಪ ನೆರವಾಗುತ್ತಿದ್ದಾರೆ.

ADVERTISEMENT

ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಸೌಲಭ್ಯ ಕೊಡಿಸುವುದು, ಮಾಸಾಶನ, ವಿದ್ಯಾರ್ಥಿ ವೇತನ ಕೊಡಿಸುವ ಜೊತೆಗೆ ಅಗತ್ಯ ಇರುವವರಿಗೆ ಸರ್ಕಾರ ಅಥವಾ ದಾನಿಗಳಿಂದ ಸೌಲಭ್ಯ ಕೊಡಿಸುವುದು ಇವರಿಗೆ ರೂಢಿ. ಇದುವರೆಗೆ ಕುಂದಗೋಳ ತಾಲ್ಲೂಕಿನ 200ಕ್ಕೂ ಅಧಿಕ ಜನರಿಗೆ ಮಂಜಪ್ಪ ನೆರವಾಗಿದ್ದಾರೆ.

‘ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ನನ್ನಂತೆ ಈ ಸಮಾಜದಲ್ಲಿ ಹಲವರು ಇದ್ದಾರೆ. ಅವರಿಗೆ ನೆರವಾಗುವುದೇ ನನ್ನ ಉದ್ದೇಶ. ಇದಕ್ಕಾಗಿ ನಾನು ಯಾರಿಂದಲೂ ಯಾವುದೇ ಫಲಾಪೇಕ್ಷೆ ಬೇಡುತ್ತಿಲ್ಲ. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನಾನೂ ಪಡೆಯುತ್ತಿದ್ದೇನೆ. ಸಿಗದವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ಇದರಿಂದ ನನಗೆ ಸಂತೃಪ್ತಿ ಇದೆ’ ಎಂದು ಮಂಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.