ADVERTISEMENT

ಅಂಗವಿಕಲ ಮಕ್ಕಳ ಅಹವಾಲು ಸ್ವೀಕಾರ

ಜೂ. 30ರೊಳಗೆ ಸರ್ಕಾರಕ್ಕೆ ವರದಿ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 6:32 IST
Last Updated 6 ಜೂನ್ 2018, 6:32 IST

ಧಾರವಾಡ: ಅಂಗವಿಕಲ ಮಕ್ಕಳ ಸಮಸ್ಯೆಗಳ ನಿವಾರಣೆ ಸಲುವಾಗಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯದ ಐದು ಭಾಗಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಮುಂದಾಗಿದ್ದು, ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಇದರ ಮೊದಲ ಸಭೆ ಜರುಗಿತು.

ಸಭೆ ಕುರಿತು ಮಾಹಿತಿ ನೀಡಿದ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ, ‘18 ವರ್ಷದೊಳಗಿನ ಅಂಗವಿಕಲ ಮಕ್ಕಳಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳು ದೊರಕುತ್ತಿಲ್ಲ. ಜತೆಗೆ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಬಹಳಷ್ಟು ಹಕ್ಕುಗಳು ಹಾಗೂ ಸೌಲಭ್ಯಗಳಿಂದ ಅವರು ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರವಾಸ ಮಾಡಿ ನೈಜ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಉದ್ದೇಶದಿಂದ ಸಭೆ ನಡೆಸಲಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಶಾಲೆಗಳಲ್ಲಿ ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ಪಠ್ಯಕ್ರಮ, ಈ ಮಕ್ಕಳಿಗೆ ಪ್ರತ್ಯೇಕ ನುರಿತ ಶಿಕ್ಷಕರು, ಅಂಗವಿಕಲ ಮಕ್ಕಳೊಂದಿಗೆ ಓಡಾಡಲು ಪಾಲಕರಿಗೂ ಉಚಿತ ಬಸ್‌ ಪಾಸ್‌ ಸೌಲಭ್ಯ ಇತ್ಯಾದಿ ಸೌಲಭ್ಯಗಳಿಗೆ ಬೇಡಿಕೆ ಇಟ್ಟಿದ್ದಾರೆ. ಜತೆಗೆ ಅಂಗವಿಕಲ ಮಕ್ಕಳಿಗೆ ಶಿಕ್ಷಣ ನೀಡುವ ಏಕೈಕ ಶಾಲೆ ಮಂಗಳೂರಿನಲ್ಲಿದೆ. ಇಂಥ ಶಾಲೆ ರಾಜ್ಯದ ಇತರ ಭಾಗಗಳಿಗೂ ಅಗತ್ಯವಿದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡ ವರದಿಯನ್ನು ಜೂನ್ 30ರೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.

ADVERTISEMENT

‘ಹೈದರಾಬಾದ್ ಕರ್ನಾಟಕ, ಮೈಸೂರು, ಬೆಂಗಳೂರು ಹಾಗೂ ದಾವಣಗೆರೆ ವಿಭಾಗಗಳಲ್ಲ್ಲೂ ಈ ಸಭೆಗಳು ಜರುಗಲಿವೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 4 ಲಕ್ಷ ಅಂಗವಿಕಲ ಮಕ್ಕಳು ಇದ್ದಾರೆ ಎಂಬ ಮಾಹಿತಿ ಇದೆ. ಆದರೆ ಇಲಾಖೆಗಳ ಮಾಹಿತಿಗೂ, ಆಯೋಗ ಖುದ್ದು ನಡೆಸಿದ ಸಮೀಕ್ಷೆಯ ಅಂಕಿಸಂಖ್ಯೆಗೂ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಆಯೋಗವೇ ನೇರವಾಗಿ ಇಂಥ ಸಭೆಗಳ ಮೂಲಕ ಮಾಹಿತಿ ಕಲೆಹಾಕುತ್ತಿದೆ. ಆ ಮೂಲಕ ಅಂಗವಿಕಲ ಮಕ್ಕಳಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಉದ್ದೇಶ ಹೊಂದಿದೆ’ ಎಂದು ಕೃಪಾ ತಿಳಿಸಿದರು.

‘ಬೈಲಹೊಂಗಲದ ಶಿವಾನಂದ ಚಿಕ್ಕೋಡ ಎಂಬ ಬಾಲಕನಿಗೆ ಸರ್ಕಾರದಿಂದ ಬರುವ ಮಾಸಾಶನವನ್ನು ಆತನ ತಂದೆಯೇ ಕಬಳಿಸುತ್ತಿರುವ ಕುರಿತು ಶಾಲೆಯ ಶಿಕ್ಷಕರು ಆಯೋಗಕ್ಕೆ ಪತ್ರ ಬರೆದಿದ್ದಾರೆ. ಅಂಗವಿಕಲನಾಗಿರುವ ಈತನಿಗೆ ಮನೆಯಲ್ಲಿ ಯಾವುದೇ ಸೌಲಭ್ಯಗಳನ್ನೂ ನೀಡದೆ ಕಡೆಗಣಿಸಲಾಗುತ್ತಿದೆ. ಹೀಗಾಗಿ ಬಾಲಕನಿಗೆ ಸಲ್ಲಬೇಕಾದ ಮಾಸಾಶನ ನೇರವಾಗಿ ಆತನ ಖಾತೆಗೇ ಸಂದಾಯವಾಗುವಂತೆ ಮಾಡಿ ಎಂಬ ಅಹವಾಲು ಬಂದಿದೆ. ಇಂಥ ದೂರುಗಳ ಕುರಿತು ಆಯೋಗ ಗಂಭೀರವಾದ ಕ್ರಮ ಕೈಗೊಳ್ಳಲಿದೆ’ ಎಂದು ಕೃಪಾ ಆಳ್ವಾ ತಿಳಿಸಿದರು.

ಬೆಳಗಾವಿ ವಿಭಾಗ ವ್ಯಾಪ್ತಿಯ ಅಂಗವಿಕಲ ಮಕ್ಕಳು, ಪೋಷಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಸಭೆಯಲ್ಲಿ 150ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಸಭೆಯಲ್ಲಿ 60ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.