ADVERTISEMENT

ಅಧಿಕಾರಿಗಳೇ ಶುಲ್ಕ ಭರಿಸಲಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 9:55 IST
Last Updated 7 ಫೆಬ್ರುವರಿ 2011, 9:55 IST

ಹುಬ್ಬಳ್ಳಿ: ಉತ್ತಮ ಸಾಧನೆಯನ್ನು ತೋರದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು  ಐಎಸ್‌ಒ ಪ್ರಮಾಣಪತ್ರಕ್ಕೆ ಹಾಗೂ ಅದಕ್ಕೆ ಸಂಬಂಧಿಸಿದ ಲೆಕ್ಕ ಪರಿಶೋಧನೆಗೆ ತಗುಲಿದ ವೆಚ್ಚವನ್ನು ಭರಿಸಬೇಕು ಎಂದು ವೈದ್ಯ ಡಾ. ಎಂ.ಸಿ.ಸಿಂಧೂರ ಅವರು ಅರ್ಜಿ ಹಾಕಿದ್ದಾರೆ.ರಾಜ್ಯ ಸರ್ಕಾರ ಉತ್ತಮ ನಗರಾಡಳಿತ ಸಂಸ್ಥೆಗಳಿಗೆ ಬಹುಮಾನವನ್ನು ಈಚೆಗಷ್ಟೇ ನೀಡಿದೆ. ಐಎಸ್‌ಒ ಪ್ರಮಾಣಿತ ನಮ್ಮ ಪಾಲಿಕೆಗೆ ಬಹುಮಾನ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಐಎಸ್‌ಒ ಪ್ರಮಾಣ ಪತ್ರ ಪಡೆಯುವುದಕ್ಕಾಗಿ ತಗಲಿದ ವೆಚ್ಚವನ್ನು ಅಧಿಕಾರಿಗಳೇ ತುಂಬಿಕೊಡಬೇಕು. ಅಧಿಕಾರಿಗಳೇ ಇದಕ್ಕೆ ಹೊಣೆ ಎಂದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಪೋಲಾದಂತೆ ಆಗಿದೆ ಹಾಗೂ ಸಾರ್ವಜನಿಕರ ಮೇಲೆ ತೆರಿಗೆ ಭಾರ ಬಿದ್ದಿದೆ ಎಂಬುದು ವೈದ್ಯರ ವಾದ.

‘ಸ್ಥಳೀಯ ಸಂಸ್ಥೆಗಳಿಗೆ ಬಹುಮಾನ ಘೋಷಣೆಯಾದ ನಂತರ ಅವಳಿನಗರದ ಜನತೆಗೆ ತೀವ್ರ ನಿರಾಸೆಯಾಗಿದೆ. ಪಾಲಿಕೆಗೆ ಒಂದೇ ಒಂದು ಬಹುಮಾನವೂ ಬಂದಿಲ್ಲ. 2007-08ರಲ್ಲಿ ಸುಮಾರು 5.94 ಲಕ್ಷ ರೂಪಾಯಿ ವೆಚ್ಚದಲ್ಲಿ ಐಎಸ್‌ಒ ಪ್ರಮಾಣ ಪತ್ರವನ್ನು ಪಡೆಯಲಾಗಿತ್ತು. ಸಾರ್ವಜನಿಕ ಆಡಳಿತವನ್ನು ಎಲ್ಲ ನಿಟ್ಟಿನಲ್ಲೂ ಸುಧಾರಿಸುವುದು ಪ್ರಮಾಣ ಪತ್ರಕ್ಕೆ ಪೂರಕವಾಗಿ ಮಾಡಲಾದ ಘೋಷಣೆ. ನೋವಿನ ಸಂಗತಿ ಎಂದರೆ ಐಎಸ್‌ಒ ಪ್ರಮಾಣಿತ ಪಾಲಿಕೆಗೆ ಸರ್ಕಾರ ನೀಡಿದ ಒಂದೇ ಒಂದು ಪ್ರಶಸ್ತಿಯೂ ಬರಲಿಲ್ಲ’ ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆಯ ಶುಲ್ಕ ರೂಪದಲ್ಲಿ ಖರ್ಚಾಗಿತ್ತು ಎಂದು ಅವರು ಹೇಳಿದ್ದಾರೆ.

ಪ್ರಮಾಣ ಪತ್ರವನ್ನು ನವೀಕರಿಸುವುದಕ್ಕಾಗಿ ಲೆಕ್ಕ ಪರಿಶೋಧನೆ ನಡೆದು ಇದಕ್ಕಾಗಿ ಮತ್ತೆ 1.42 ಲಕ್ಷ ರೂಪಾಯಿಗಳ ವೆಚ್ಚ ತಗುಲಿತ್ತು. ಕರ್ನಾಟಕ ಸ್ಥಳೀಯ ಸಂಸ್ಥೆ ಕಾಯ್ದೆಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಾದ ಪಾಲಿಕೆಗೆ ಐಎಸ್‌ಒ ಪ್ರಮಾಣ ಪತ್ರ ಪಡೆಯಲೇಬೇಕೆಂಬ ಕಟ್ಟಳೆ ಇರಲಿಲ್ಲ. ಪ್ರಮಾಣ ಪತ್ರ ಪಡೆದ ನಂತರ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಪಾಲಿಕೆ ನಿರ್ವಹಿಸಿಲ್ಲ. ಇದಕ್ಕೆ ಅಧಿಕಾರಿಗಳೇ ಹೊಣೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶುಚಿತ್ವ ಕಾಪಾಡುವುದೂ ಸೇರಿದಂತೆ ಅನೇಕ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಪಾಲಿಕೆ ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಮಾಣಿತ ಸ್ಥಳೀಯ ಆಡಳಿತದ ವೈಖರಿ ಇದು ಎಂದು ಅವರು ವಿಷಾದಿಸಿದ್ದಾರೆ.ಐಎಸ್‌ಒ ಪ್ರಮಾಣ ಪತ್ರ ಪಡೆಯುವಾಗ ಸರ್ವಾಂಗೀಣ ಅಭಿವೃದ್ಧಿಯ ಕುರಿತು ನೀಡಿದ ಭರವಸೆ ಪೂರ್ಣ ಹುಸಿಯಾಗಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.