ADVERTISEMENT

ಇಂಗಳಗಿಯಲ್ಲಿ ಗಲಭೆ: ನಾಲ್ವರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 6:20 IST
Last Updated 17 ಸೆಪ್ಟೆಂಬರ್ 2011, 6:20 IST

ಕುಂದಗೋಳ: ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ಹೊರಟ  ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಈ ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡ ಸಾವಕ್ಕ ಫಕ್ಕೀರಪ್ಪ ದೊಡಮನಿ, ನೀಲಪ್ಪ ಬಸಪ್ಪ ಬಳಗಲಿ, ನಿಂಗಪ್ಪ ಯಲ್ಲಪ್ಪ ಕಾಳಿ, ನಿಂಗಪ್ಪ ಫಕ್ಕೀರಪ್ಪ ದೊಡಮನಿ ಅವರನ್ನು  ಚಿಕಿತ್ಸೆಗಾಗಿ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಗಪ್ಪ ಯಲ್ಲಪ್ಪ ಕಾಳಿ ದೂರು ನೀಡಿದ್ದು, ಶುಕ್ರವಾರ ಚಂದ್ರಹಾಸ ಕೋಟೆಣ್ಣವರ, ಉಮಾಕಾಂತ ಶಿಗ್ಗಾಂವ ಹಾಗೂ ಪ್ರಕಾಶ ಮುಲ್ಕಿಪಾಟೀಲ ಎಂಬುವವರನ್ನು ಬಂಧಿಸಲಾಗಿದೆ.

ಹಿನ್ನೆಲೆ: ಫಿರ್ಯಾದುದಾರ ನಿಂಗಪ್ಪ ಕಾಳಿ ಅವರ ಮಾವ ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಗ್ರಾಮದ ಚಂದ್ರಹಾಸ ವಿಠಲಪ್ಪ ಕೋಟೆಣ್ಣವರ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದರು. ಆಗ ಫಿರ್ಯಾದುದಾರನ ಗುಂಪಿನವರು ಜಾತಿ ನಿಂದನೆ ಆರೋಪ ಹೊರಿಸಿ ಕೋಟೆಣ್ಣವರಿಗೆ ಚುನಾವಣೆಯಲ್ಲಿ ನಿಲ್ಲದಂತೆ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.

ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಫಿರ್ಯಾದುದಾರನ ಗುಂಪಿನವರು ಹೊರಟಿದ್ದಾಗ ಚಂದ್ರಹಾಸ ಮತ್ತು ಅವರ ಗುಂಪಿನವರು ಹಲ್ಲೆ ಮಾಡಿ ದ್ವೇಷ ಸಾಧಿಸಿದ್ದಾರೆ. ಇದರಿಂದ ಕಾಳಿ ಅವರ ಗುಂಪು ಮತ್ತೆ ವಾಗ್ವಾದಕ್ಕೆ ನಿಂತಿತು ಎನ್ನಲಾಗಿದೆ. ನಂತರ  ಚಂದ್ರಹಾಸ ಗುಂಪಿನ ಹದಿನೈದು ಜನರ ಗುಂಪು, ಕಾಳಿ ಅವರ ಗುಂಪಿನವರ ಮನೆಗಳಿಗೆ ತೆರಳಿ ಮನಬಂದಂತೆ ಥಳಿಸಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಕೆಲ ಮಹಿಳೆಯರೂ ಗಾಯಗೊಂಡಿದ್ದು, ಕೆಲವರ ತಾಳಿ, ಬಂಗಾರದ ಬಳೆಗಳನ್ನು ಸಹ ಎಳೆದಾಡಿದ್ದಾರೆ ಎಂದು ಫಕ್ಕೀರವ್ವ ಮಾರಡಗಿ, ನೀಲವ್ವ ದೊಡ್ಡಮನಿ ದೂರಿದ್ದಾರೆ. 

ಭೇಟಿ:  ಸ್ಥಳಕ್ಕೆ ಎಸ್.ಪಿ. ಆರ್. ದಿಲೀಪ್, ಡಿವೈಎಸ್ಪಿ ಎ.ಬಿ. ಬಸರಿ, ಸಿಪಿಐ ಜಿ.ಜಿ. ಮರಿಬಾಶೆಟ್ಟಿ, ಪಿಎಸ್‌ಐ. ಎಂ.ಎನ್. ದೇಶನೂರ, ಪ್ರವೀಣಕುಮಾರ ಯಲಿಗಾರ ಮತ್ತಿತರರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಈಗ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಜನರು ಆತಂಕ ಸ್ಥಿತಿಯಲ್ಲಿ ಇದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.