ADVERTISEMENT

ಈ ಗ್ರಾಮದಲ್ಲಿ ಬರ ಪರಿಹಾರ ಮರೀಚಿಕೆ

ವೆಂಕಟೇಶ್ ಜಿ.ಎಚ್
Published 5 ಆಗಸ್ಟ್ 2012, 10:00 IST
Last Updated 5 ಆಗಸ್ಟ್ 2012, 10:00 IST

ಹುಬ್ಬಳ್ಳಿ: ಮನಶ್ಯಾರಿಗೆ ಅನ್ನ, ನೀರು ಇಲ್ಲ, ಇನ್ನ ದನಕ್ಕೆ ಎಲ್ಲಿಂದ ತರೋದ್ರಿ, ಬೆಣ್ಣಿ ಹಳ್ಳ ಬತ್ತೈತಿ, ತಲೆಗೊಂದು ಕೊಡಾ ಎಣಿಸಿ ನೀರು ಕೊಡ್ತಾರೆ, ಅದ್ರಾಗ ಪಶು-ಪಕ್ಷಿಗೂ ಕುಡುಸ್ಬೇಕ್ರಿ, ಸರ್ಕಾರ ಗೋಶಾಲೆ ಮಾಡಿದ್ರ ಉಪಕಾರ ಆಗ್ತೈತಿ...

ತಾಲ್ಲೂಕಿನ ಕೊನೆಯ ಗ್ರಾಮವಾದ ನಾಗರಹಳ್ಳಿಯ ಬತ್ತಿದ ಕೆರೆ ಅಂಗಳದಲ್ಲಿ ಅಲ್ಲಲ್ಲಿ ಕುಡಿಯೊಡೆದಿದ್ದ ಹಸಿರು ಹುಲ್ಲು ಕಿತ್ತು ಬುಟ್ಟಿಗೆ ತುಂಬಿಕೊಳ್ಳುತ್ತಿದ್ದ ನೀಲವ್ವ ಬರದ್ವಾಡ `ಪ್ರಜಾವಾಣಿ~ಯೊಂದಿಗೆ ದುಗುಡ ತೋಡಿಕೊಂಡರು.
ನಾಗರಹಳ್ಳಿಯನ್ನು ಬಳಸಿಕೊಂಡು ಹೋಗಿರುವ ಬೆಣ್ಣೆಹಳ್ಳ ಸಂಪೂರ್ಣ ಬತ್ತಿ ಹೋಗಿದೆ. ಊರ ಕೆರೆ, ನೀರು ಕಾಣದೆ ಬಾಯಿ ತೆರೆದಿರುವುದು ಗ್ರಾಮಸ್ಥರ ಸಂಕಷ್ಟ ಹೆಚ್ಚಿಸಿದೆ. ಕುಡಿಯಲು ನೀರು, ಮೇವು ಹೊಂಚಲಾಗದೆ ಕಳೆದೊಂದು ತಿಂಗಳ ಅವಧಿಯಲ್ಲಿಯೇ ಗ್ರಾಮದಲ್ಲಿ 12 ದನಗಳನ್ನು ಸಮೀಪದ ನೂಲ್ವಿ ಪೇಟೆಗೆ ಮಾರಾಟಕ್ಕೆ ಕೊಂಡೊಯ್ದಿರುವುದು ನೀಲವ್ವನ ಕಳವಳ ಹೆಚ್ಚಿಸಿತ್ತು.

ಸಿಎಂ ಭೇಟಿ: ಬರದ ಬೇಗೆಯಿಂದ ತತ್ತರಿಸಿರುವ ನಾಗರಹಳ್ಳಿಗೆ ಇದೇ ತಾ.6ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭೇಟಿ ನೀಡಿ ಬರ ಪರಿಹಾರ ಕಾಮಗಾರಿ ಪರಿಶೀಲಿಸಲಿದ್ದಾರೆ.

ಗ್ರಾಮದಲ್ಲಿ 1400 ಜನಸಂಖ್ಯೆ ಇದ್ದು, ಕಳೆದೊಂದು ವರ್ಷದಿಂದ ಜಿಲ್ಲಾಡಳಿತ ಹುಬ್ಬಳ್ಳಿಯಿಂದ ಟ್ಯಾಂಕರ್ ಮೂಲಕ ಕುಡಿಯಲು ನೀರು ಪೂರೈಸುತ್ತಿದೆ.  ಹಿಂಗಾರು ವಿಫಲಗೊಂಡಿದ್ದರಿಂದ ಕಳೆದ ಹಂಗಾಮಿನಲ್ಲಿಯೂ ಬಿತ್ತನೆ ಕಾರ್ಯ ನಡೆದಿರಲಿಲ್ಲ. ಈ ಬಾರಿಯೂ ಅದೇ ಪರಿಸ್ಥಿತಿ ಮುಂದುವರೆದಿದೆ. ವರ್ಷದಿಂದ ಹೊಲದಲ್ಲಿ ಪೀಕು ಇಲ್ಲ. ಇದರಿಂದ ಕೆಲಸ ಅರಸಿ ಗ್ರಾಮದ ಬಹುತೇಕ ಯುವಕರು ಗೋವಾ ಹಾಗೂ ಮಂಗಳೂರಿಗೆ ಗುಳೇ ಹೋಗಿದ್ದಾರೆ.

ಬರ ಪರಿಹಾರಕ್ಕೆ ಎಂದು ಉದ್ಯೋಗ ಖಾತರಿ ಯೋಜನೆಯಡಿ ತಿಂಗಳ ಹಿಂದೆ  ಗ್ರಾಮದಲ್ಲಿ ಆರಂಭವಾಗಿದ್ದ ಬದು ನಿರ್ಮಾಣ ಕಾಮಗಾರಿ ಈಗ ಸ್ಥಗಿತಗೊಂಡಿದೆ.

`ಹಾಲಿ ಇದ್ದ ಎಂಜಿನಿಯರ್ ವರ್ಗವಾಗಿರುವುದರಿಂದ ಬಿಲ್ ನೀಡಿಲ್ಲ. ಅದೇ ಕಾರಣಕ್ಕೆ ತಾಲ್ಲೂಕು ಪಂಚಾಯಿತಿಯಿಂದ ಹಣ ಬಿಡುಗಡೆ ಮಾಡಿಲ್ಲ. ಕಾರ್ಮಿಕರಿಗೆ ಕೂಲಿ ಪಾವತಿಸದೆ ಕಾಮಗಾರಿ ಅರ್ಧಕ್ಕೆ ನಿಂತಿದೆ~ಎಂದು ನಾಗರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಶೋಕಗೌಡ ಪಾಟೀಲ ಹೇಳುತ್ತಾರೆ.
`ಉದ್ಯೋಗ ಖಾತರಿಯಡಿ ಆಯಾ ದಿನವೇ ಕಾಮಗಾರಿಯ ಕೂಲಿ ಪಾವತಿಸಿದರೆ ನಾವು ಬದುಕಬಹುದು. ತಿಂಗಳಿಗೊಮ್ಮೆ ಕೊಟ್ಟರೆ ಉಪಯೋಗವಿಲ್ಲ, ಗುಳೇ ಅನಿವಾರ್ಯ~ ಎಂದು ಗ್ರಾಮದ ಹನುಮಂತನಗೌಡ ಅಳಲು ತೋಡಿಕೊಳ್ಳುತ್ತಾರೆ.

ದೊರೆಯದ ಸ್ಪಂದನೆ: ನಾಗರಹಳ್ಳಿಯಿಂದ ಆರು ಕಿ.ಮೀ ದೂರದ ಶಿರಗುಪ್ಪಿಯಲ್ಲಿ ಜಿಲ್ಲಾಡಳಿತದಿಂದ ಆರಂಭಿಸಿರುವ ಮೇವು ಬ್ಯಾಂಕಿಗೆ ರೈತರಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ.

ಮೇವು ಬ್ಯಾಂಕ್ ಆರಂಭಗೊಂಡು ಎರಡು ತಿಂಗಳು ಕಳೆದರೂ ಕೇವಲ ಏಳು ಮಂದಿ ರೈತರು ಮಾತ್ರ ಇಲ್ಲಿಂದ ಮೇವು ಕೊಂಡೊಯ್ದಿದ್ದಾರೆ. ಪ್ರತಿ ಕಿಲೋ ಮೇವಿಗೆ ಮೂರು ರೂಪಾಯಿ ಕೊಟ್ಟು ಖರೀದಿಸಬೇಕಿರುವುದರಿಂದ ನಿತ್ಯ ನೂರಾರು ರೂಪಾಯಿ ವ್ಯಯಿಸಿ ಮೇವು ಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ.

ಇಲ್ಲಿ ವಿತರಣೆಯಾಗುತ್ತಿರುವ ಮೇವಿನ ಗುಣಮಟ್ಟದ ಬಗ್ಗೆ ರೈತರಿಂದ ಆಕ್ಷೇಪ ವ್ಯಕ್ತವಾಗಿದೆ. ರಾಯಚೂರು ಜಿಲ್ಲೆ ಸಿಂಧನೂರಿನಿಂದ ತರಿಸಿದ್ದ ಮೇವು ಕಳಪೆಯಾಗಿದ್ದರಿಂದ ರೈತರ ವಿರೋಧಕ್ಕೆ ಮಣಿದು ವಾಪಸ್ ಕಳುಹಿಸಲಾಗಿದೆ. ಮೇವು ಬ್ಯಾಂಕಿಗೆ ಬೀಗ ಹಾಕಲಾಗಿದೆ.

`ಮೇವಿನ ಬ್ಯಾಂಕ್ ಬದಲಿಗೆ ಗೋಶಾಲೆ ಆರಂಭಿಸಿದರೆ ದನಗಳಿಗೆ ಮೇವಿನೊಂದಿಗೆ, ನೀರು ದೊರೆಯಲಿದೆ. ಇದರಿಂದ ರಾಸುಗಳು ಕಟುಕರ ಪಾಲಾಗುವುದು ತಪ್ಪಲಿದೆ~ ಎಂದು ನಾಗರಹಳ್ಳಿಯ ಜಯಪಾಲ ದೊಡ್ಡಮನಿ  ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.