ಧಾರವಾಡ: `ಕರ್ನಾಟಕದ ಜಾನಪದ ಕಲೆಗಳು ವಿಶೇಷವಾಗಿ ಧಾರವಾಡದ ಜಗ್ಗಲಿಗೆ ವಾದನ ವಿಶ್ವದ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಗತ್ತಿನ ಅನೇಕ ಕಲಾ ಆರಾಧಕರಿಗೆ ಕರ್ನಾಟಕ ಜಾನಪದವು ಕಲೆಗಳ ಕಣಜವಾಗಿವೆ~ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಜಾನಪದ ಪರಿಷತ್ತು ಭಾನುವಾರ ಆಯೋಜಿಸಿದ್ದ `ಜನಪದ ಕ್ಷೇತ್ರದ ಸವಾಲುಗಳು-ಪರಿಹಾರಗಳು~ ಎಂಬ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿ, ನಾಡಿನ ಜನಪದ ಸಂಪತ್ತು ಅಪಾರವಾದ ಶ್ರೀಮಂತಿಕೆಯಿಂದ ಕೂಡಿದೆ. ನಮ್ಮ ಒಟ್ಟು ಸಂಸ್ಕೃತಿ ಜನಪದದ ಭಾಗವಾಗಿದೆ ಎಂದರು.
ಬಳಿಕ ಪರಿಷತ್ತಿನ ವತಿಯಿಂದ ಬಾನಂದೂರು ಅವರನ್ನು ಸನ್ಮಾನಿಸಲಾಯಿತು.
ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶ್ರೀಶೈಲ ಹುದ್ದಾರ, `ನಮ್ಮ ದೇಶಿ ನೆಲವನ್ನು ಅರ್ಥಮಾಡಿಕೊಂಡಾಗ ನಮ್ಮ ಸಂಸ್ಕೃತಿ ಅರಿವು ಆಗುತ್ತದೆ. ಇಂದು ಜಾನಪದ ಕ್ಷೇತ್ರ ಹತ್ತುಹಲವು ಬಿಕ್ಕಟ್ಟು ಎದುರಿಸುತ್ತಿದೆ. ವಿದ್ವಾಂಸರು ಕಲಾವಿದರು ಒಂದಾಗಿ ಕಾರ್ಯಮಾಡಬೇಕಾದ ಅವಶ್ಯಕತೆ ಇದೆ~ ಎಂದರು.
ಕರ್ನಾಟಕ ವಿವಿ ಜಾನಪದ ವಿಭಾಗದ ಪ್ರಾಧ್ಯಾಪಕ ಡಾ.ವಿ.ಎಲ್.ಪಾಟೀಲ, ಜನಪದ ಕ್ಷೇತ್ರದಲ್ಲಿ ಅಪಾರವಾದ ಕೆಲಸ ಮಾಡುವ ಅಗತ್ಯವಿದೆ. ಹಾಡು ಬದುಕು ಒಂದಾಗಿ ಕಥೆ ಹೇಳುವ ಕೇಳುವ ವ್ಯವಧಾನ ಈಗ ಇಲ್ಲವಾಗಿದೆ. ಜಾನಪದ ನಮ್ಮ ಸೃಜನಶೀಲತೆ ಹೆಚ್ಚಿಸುವ ಉತ್ತಮ ಮಾಧ್ಯಮವಾಗಿದೆ ಎಂದರು.
ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್.ಚೆನ್ನೂರ, ಜಾನಪದ ವಿದ್ವಾಂಸ ಡಾ.ರಾಮು ಮೂಲಗಿ, ನವಲಗುಂದ ತಾಲ್ಲೂಕು ಅಧ್ಯಕ್ಷ ಎ.ಬಿ.ಕೊಪ್ಪದ, ಕಲಘಟಗಿ ಅಧ್ಯಕ್ಷ ಎಂ.ಆರ್.ತೋಟಗಂಟಿ, ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷ ಡಾ.ಮಹೇಶ ಹೊರಕೇರಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಧನವಂತ ಹಾಜವಗೋಳ ಮಾ
ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಿ.ಎಸ್.ಗೊರವರ `ಚೆಲ್ಲಿದರು ಮಲ್ಲಿಗೆಯ~ ಹಾಡು ಹಾಡಿದರು. ಇಮಾಮ ಸಾಬ ವಲ್ಲೆಪ್ಪನವರು ಡೊಳ್ಳಿನಸ್ತುತಿ ಪದ್ಯ ಹೇಳಿದರು. ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಶಂಭು ಹೆಗಡಾಳ ಸ್ವಾಗತಿಸಿದರು. ಖಜಾಂಚಿ ಶಿವಶರಣ ಕಲಬಶೆಟ್ಟರ ಯೋಜನೆ ವಿವರಿಸಿದರು. ಗೌರವ ಕಾರ್ಯದರ್ಶಿ ಬಸವರಾಜ ಮ್ಯಾಗೇರಿ ಜಿಲ್ಲೆಯಲ್ಲಿ ಜಾನಪದ ಪರಿಷತ್ತಿನ ಸಂಘಟನೆ ಕುರಿತು ತಿಳಿಸಿದರು.
`ಸರ್ಕಾರದ ಸಹಾಯ ಬೇಕು~
ಧಾರವಾಡ: ನಾಡಿನಲ್ಲಿ ಜಾನಪದ ಕಲೆ ಉಳಿಯಬೇಕು ಎಂದರೆ ಕಲಾವಿದ ಮುಖ್ಯ. ಆದರೆ ಕಲಾವಿದ ಉಳಿಯಬೇಕಾದರೆ ಸರ್ಕಾರದ ಸಮರ್ಥ ಸಹಕಾರ ಅಗತ್ಯವಿದೆ ಎಂದು ಪಾಲಿಕೆ ಮೇಯರ್ ಡಾ.ಪಾಂಡುರಂಗ ಪಾಟೀಲ ಹೇಳಿದರು.
ಇಲ್ಲಿಯ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಜಿಲ್ಲಾ ಕಸಾಪ ಹಾಗೂ ನೃಪತುಂಗ ಸಾಹಿತ್ಯ ವೇದಿಕೆಯು ಭಾನುವಾರ ಆಯೋಜಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಕಲಾವಿದ ತಾನು ರಚಿಸಿದ ಕಲೆಗೆ ಆರಾಧಕನಾಗಿರುತ್ತಾನೆ. ಆ ಕಲೆಯ ಮೂಲಕ ಸಿಕ್ಕಿದ್ದನ್ನು ಪಡೆದುಕೊಂಡು ತೃಪ್ತಿಪಡುತ್ತಾನೆ. ರಂಗಕರ್ಮಿಯಾಗಲಿ, ನಾಟಕಕಾರನಾಗಲಿ ಅವರಿಗೆ ಸರ್ಕಾರ ಮಾಸಾಶನ ನೀಡುತ್ತಿದ್ದು, ಇದರಿಂದ ಕಲಾವಿದನನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ಕಲಾವಿದನಿಗೂ ಒಂದು ಆಶ್ರಯ ಮನೆಯನ್ನು ನಿರ್ಮಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ~ ಎಂದರು.
ಸನ್ಮಾನ ಸ್ವೀಕರಿಸಿದ ಡಾ.ಬಾನಂದೂರು ಕೆಂಪಯ್ಯ, `ಇತ್ತೀಚೆಗೆ ಬಂದ ಭಕ್ತಿ ಸಂಗೀತ ಸುಗಮ ಸಂಗೀತ ಸೇರಿದಂತೆ ಎಲ್ಲ ಸಂಗೀತಗಳಿಗೆ ಜಾನಪದ ಸಂಸ್ಕೃತಿ ಮೂಲ ಕಲೆಯಾಗಿದೆ~ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್. ಬಿ. ವಾಲೀಕಾರ, `ಕಲಾವಿದರನ್ನು ಗುರುತಿಸಿ ಅವರು ಗೌರವಯುತವಾಗಿ ಬದುಕುವಂತೆ ಮಾಡಲು ಚಿಂತನೆ ಮಾಡಬೇಕಿದೆ~ ಎಂದು ಸಲಹೆ ನೀಡಿದರು. ಸಾಹಿತಿ ಮೋಹನ ನಾಗಮ್ಮನವರ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಎಫ್.ಎಚ್.ಜಕ್ಕಪ್ಪನವರ, ಬಬಲಾದಿ ಸಿದ್ಧರಾಮೇಶ್ವರ ಸ್ವಾಮೀಜಿ ಇದ್ದರು. ಡಾ.ವೈ.ಎಂ.ಭಜಂತ್ರಿ ನಿರೂಪಿಸಿದರು. ಎಸ್.ಐ.ನೇಕಾರ ವಂದಿಸಿದರು.
ಸೈಕಲ್ ವಿತರಣೆ
ಧಾರವಾಡ: ತಾಲ್ಲೂಕಿನ ಅಮ್ಮಿನಭಾವಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಉಚಿತ ಸೈಕಲ್‌ಗಳನ್ನು ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ವೀಣಾ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಬಸಮ್ಮಾ ಪ್ಯಾಟಿ, ತಾ.ಪಂ.ಸದಸ್ಯೆ ಸುಮಿತ್ರಾ ಗೋಸಲ, ಸುನೀಲ ಗುಡಿ, ಗ್ರಾ.ಪಂ.ಉಪಾಧ್ಯಕ್ಷ ಮಲ್ಲಿಕಾರ್ಜುನ ಹುಂಬಿ, ಜಾಕೀರ ಯಲಿಗಾರ, ಮುರುಗೇಶ ಧನಶೆಟ್ಟಿ, ಬಸವಣ್ಣೆಪ್ಪ ಪೂಜಾರ, ಎಸ್‌ಡಿಎಂಸಿ ಅಧ್ಯಕ್ಷ ಗೂಡುಸಾಬ್ ಸತ್ತೂರ ಈ ಸಂದರ್ಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.