ADVERTISEMENT

ಕಲ್ಲಿದ್ದಲು ಪೂರೈಸದ ಕೇಂದ್ರ: ಜೋಶಿ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:38 IST
Last Updated 24 ಏಪ್ರಿಲ್ 2013, 6:38 IST

ಧಾರವಾಡ: `ಕೇಂದ್ರ ಸರ್ಕಾರ ರಾಜ್ಯದೊಂದಿಗಿನ ತನ್ನ ಅಸಹಕಾರವನ್ನು ಮುಂದುವರೆಸಿದ್ದು, 67 ಲಕ್ಷ ಕುಟುಂಬಗಳಿಗೆ ನೀಡಬೇಕಿದ್ದ ಅಕ್ಕಿ, ಗೋಧಿ ಪಡಿತರವನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಗತ್ಯವಿರುವ ಕಲ್ಲಿದ್ದನ್ನೂ ಪೂರೈಕೆ ಮಾಡುತ್ತಿಲ್ಲ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಮಂಗಳವಾರ ಇಲ್ಲಿ ಟೀಕಿಸಿದರು.

`ಕೇಂದ್ರವು ಎಲ್ಲ ರಾಜ್ಯಗಳಿಗೂ ಸಮಾನ ಸಹಕಾರ, ನೆರವು ನೀಡುವ ಮೂಲಕ ಮಹಾತಾಯಿಯಂತೆ ವರ್ತಿಸಬೇಕು. ಆದರೆ ಪ್ರತಿಯೊಂದರಲ್ಲೂ ರಾಜಕೀಯ ಮಾಡುತ್ತಿರುವ ಕೇಂದ್ರವು ಕರ್ನಾಟಕಕ್ಕೆ ಕಲ್ಲಿದ್ದಲು ಹಾಗೂ ಪಡಿತರ ನೀಡಿಕೆಯಲ್ಲಿ ಮಲತಾಯಿ ಧೋರಣೆ ತೋರಿದೆ. ಈ ನೀತಿಯನ್ನು ಪ್ರಶ್ನಿಸಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ಚುನಾವಣಾ ಆಯೋಗಕ್ಕೂ ಈ ಸಂಬಂಧ ಪತ್ರ ಬರೆದಿದ್ದೇವೆ.

ಸೌಲಭ್ಯವನ್ನು ನೀಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾದರೆ, ನೀಡಿದ ಸೌಲಭ್ಯವನ್ನೂ ವಾಪಸ್ ಪಡೆಯುವುದೂ ನೀತಿ ಸಂಹಿತೆಯ ಉಲ್ಲಂಘನೆಯೇ ಆಗಿದೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದರು.

`ಕೇಂದ್ರದ ಅಧೀನದಲ್ಲಿರುವ ಕಲ್ಲಿದ್ದಲು ಗಣಿಗಳಿಂದ ರಾಜ್ಯಕ್ಕೆ ಅಗತ್ಯವಿರುವ ಕಲ್ಲಿದ್ದಲು ನೀಡುವ ಬದಲು ಏನೇನೊ ಕಾರಣ ಹೇಳುತ್ತಿದೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ವಿತರಿಸಬೇಕಿದ್ದ 29 ಸಾವಿರ ಮೆಟ್ರಿಕ್ ಟನ್ ಅಕ್ಕಿ ಹಾಗೂ 11 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಬಿಡುಗಡೆ ಮಾಡುವ ಬದಲು ಹಿಂತೆಗೆದುಕೊಂಡಿದೆ. ಈ ಬಗ್ಗೆ ಕೇಳಿದರೆ ಜೂನ್‌ನಲ್ಲಿ ಸರಿ ಮಾಡಲಾಗುವುದು ಎನ್ನುತ್ತಾರೆ. ಅಲ್ಲಿಯವರೆಗೆ ಜನರು ಏನು ಮಾಡಬೇಕು' ಎಂದು ಪ್ರಶ್ನಿಸಿದರು.

ಅಡ್ವಾಣಿ ಸಂತ: ಜೀವಮಾನದುದ್ದಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತ ಬಂದ ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾಣಿ ಅವರು ಸಂತರಿದ್ದಂತೆ. ಅವರ ಬಗ್ಗೆ ಧನಂಜಯಕುಮಾರ್ ಅತ್ಯಂತ ವೈಯಕ್ತಿಕ ಮಟ್ಟಕ್ಕಿಳಿದು ಮಾತನಾಡಿದ್ದಾರೆ. ಈ ಬಗ್ಗೆ ನಾವು ಮಾತನಾಡುವ ಬದಲು ಯಡಿಯೂರಪ್ಪ ಅವರೇ ಹೇಳಬೇಕು ಎಂದ ಅವರು, ಜಗದೀಶ ಶೆಟ್ಟರ್ ಹಾಗೂ ಅವರ ಕುಟುಂಬದವರು, ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಹಣ ಗಳಿಸಿದ್ದಾರೆ ಎಂದು ಯಡಿಯೂರಪ್ಪ ಬಾಯಿಮಾತಲ್ಲಿ ಹೇಳುವ ಬದಲು ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.