ADVERTISEMENT

‘ಕಾಮೆಡ್‌ ಕೆ ವೆಬ್‌ಸೈಟ್‌ ಗಮನಿಸುತ್ತಿರಿ’

ಕಾಮೆಡ್‌ ಕೆ ಅಧಿಕಾರಿ ಶಾಂತಾರಾಮ ನಾಯಕ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 8:56 IST
Last Updated 3 ಜೂನ್ 2018, 8:56 IST

ಹುಬ್ಬಳ್ಳಿ: ಕಾಮೆಡ್–ಕೆ ಅಧೀನದಲ್ಲಿರುವ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟು ಪಡೆಯಲು ಬಯಸುವ ವಿದ್ಯಾರ್ಥಿಗಳು ಪ್ರಕ್ರಿಯೆ ಮುಗಿಯುವವರೆಗೂ ನಿರಂತರವಾಗಿ www.comedk.org ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಬೇಕು ಎಂದು ಕಾಮೆಡ್‌–ಕೆ ಅಧಿಕಾರಿ ಶಾಂತಾರಾಮ ನಾಯಕ್ ಮನವಿ ಮಾಡಿದರು.

ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ನಡೆದ ‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳದಲ್ಲಿ ಮಾತನಾಡಿದ ಅವರು, ‘ಆಗಿಂದಾಗ ಕಾಮೆಡ್‌ ಕೆ ಪರೀಕ್ಷೆ, ಆಯ್ಕೆ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸುತ್ತೋಲೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿರುತ್ತಾರೆ. ದಿನಕ್ಕೆ ಒಂದು ಬಾರಿ ನೋಡಿದರೆ ಸಾಲದು. ಏಕೆಂದರೆ, ನೋಡಿದ ಬಳಿಕ ಮತ್ತಷ್ಟು ಮಾಹಿತಿಗಳು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿರುತ್ತದೆ. ಹೀಗಾಗಿ ಆಗಿಂದಾಗ ಭೇಟಿ ನೀಡುವುದರಿಂದ ಅಗತ್ಯ ಮಾಹಿತಿಗಳು ಸಿಗುತ್ತವೆ’ ಎಂದರು.

‘ರ‍್ಯಾಂಕಿಂಗ್‌ ಆಧರಿಸಿ ಸೀಟುಗಳು ಹಂಚಿಕೆಯಾಗುತ್ತವೆ. ಕೆಲ ಕಾಲೇಜುಗಳಲ್ಲಿ ಸೌಲಭ್ಯಕ್ಕೆ ತಕ್ಕಂತೆ ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಾರೆ. ಈ ಬಗ್ಗೆ ವಿದ್ಯಾರ್ಥಿಗಳು ಮಾಹಿತಿಯನ್ನು ಹೊಂದಿರಬೇಕು’ ಎಂದು ಹೇಳಿದರು.

ADVERTISEMENT

‘ಪ್ರವೇಶ ಪರೀಕ್ಷೆ ಪತ್ರ, ಎಸ್ಸೆಸ್ಸೆಲ್ಸಿ ಅಂಕ ಪಟ್ಟಿ, ಮೀಸಲಾತಿ ಪ್ರಮಾಣಪತ್ರ ಸೇರಿದಂತೆ ಎಲ್ಲ ಮೂಲ ಪ್ರಮಾಣಪತ್ರ ಹಾಗೂ ಒಂದು ಸೆಟ್‌ ಜೆರಾಕ್ಸ್‌ ಪ್ರಮಾಣಪತ್ರಗಳನ್ನು ಪರಿಶೀಲನೆಗಾಗಿ ಬೆಂಗಳೂರಿನ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿರುವ ನೋಡಲ್‌ ಕೇಂದ್ರಕ್ಕೆ ತರಬೇಕು’ ಎಂದರು.

‘ಕಳೆದ ವರ್ಷದ ಕಟ್‌ ಆಫ್‌ ರ‍್ಯಾಂಕಿಂಗ್ ಗಮನದಲ್ಲಿರಿಸಿಕೊಂಡು ಈ ಬಾರಿ ಎಷ್ಟು ರ‍್ಯಾಂಕಿಂಗ್‌ ಪಡೆದವರಿಗೆ ಯಾವ ಕಾಲೇಜಿನಲ್ಲಿ ಸೀಟು ಸಿಗಬಹುದು ಎಂಬುದರ ಅಂದಾಜು ಮಾಡಬಹುದು. ಆದರೆ, ಇದೇ ಅಂತಿಮವಲ್ಲ’ ಎಂದರು. ನಂತರ ವಿದ್ಯಾರ್ಥಿಗಳು, ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.