ADVERTISEMENT

ಕಾರಿನಲ್ಲಿ ಸಾಗಿಸುತ್ತಿದ್ದ ರೂ 16.09 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:35 IST
Last Updated 20 ಏಪ್ರಿಲ್ 2013, 10:35 IST

ಹುಬ್ಬಳ್ಳಿ: ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದರೆನ್ನಲಾದ 16.09 ಲಕ್ಷ ಹಣವನ್ನು ಕಾರವಾರ ರಸ್ತೆಯ ಚಾಟ್ನಿ ಕಾಂಪ್ಲೆಕ್ಸ್ ಬಳಿಯಿಂದ ಗುರುವಾರ ರಾತ್ರಿ ವಶಪಡಿಸಿಕೊಂಡಿರುವ, ಹಳೇಹುಬ್ಬಳ್ಳಿ ಪೊಲೀಸರು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

ಯಶವಂತ ಆನಂದ, ವಾಸು ಪೂಜಾರಿ ಮತ್ತು ಪ್ರಮೋದ ಸುವರ್ಣ ಬಂಧಿತರು. ಎಲ್ಲರೂ ಉಡುಪಿಯ ಜಿಲ್ಲೆ ಮಲ್ಪೆ ನಿವಾಸಿಗಳಾಗಿದ್ದು ಮೀನು ವ್ಯಾಪಾರಿಗಳು.

ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದ ಅನಾಮಧೇಯ ಕರೆ ಮಾಹಿತಿ ಆಧರಿಸಿ, ಚುನಾವಣಾ ಕರ್ತವ್ಯಕ್ಕಾಗಿ ನೇಮಿಸಿದ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹಳೇಹುಬ್ಬಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಸಚಿನ್ ಚಲವಾದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್‌ನಲ್ಲಿ ಎಸ್.ಎನ್.ಗಣಾಚಾರಿ, ಪಿ.ಡಿ.ಗಾಳೆಮ್ಮನವರ, ವಿ.ಎಂ.ಹಿರೇಮಠ, ಎಂ.ಆರ್ ಗಿರಡ್ಡಿ ಇದ್ದರು.

ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಸ್‌ಗೆ ಸೂಚನೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಅಧಿಕೃತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೊರತು ಪಡಿಸಿ ಉಳಿದ ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಬೇಕು. ತಪ್ಪಿದಲ್ಲಿ  ಬಂಡಾಯ ಅಭ್ಯರ್ಥಿ ಹಾಗೂ ಬೆಂಬಲಿಸಿದ ಕಾರ್ಯರ್ತರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು  ಜಿಲ್ಲಾ ಘಟಕದ ಅಧ್ಯಕ್ಷರು ಆದೇಶಿಸಿದ್ದಾಗಿ ಪಕ್ಷದ ವಕ್ತಾರ ವೇದವ್ಯಾಸ ಕೌಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.