ADVERTISEMENT

ಕಿರುಚಿತ್ರದಲ್ಲಿ ಬಿಂಬಿಸಿದ ಸಾಮಾಜಿಕ ಕಾಳಜಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 4:20 IST
Last Updated 17 ನವೆಂಬರ್ 2012, 4:20 IST

ಹುಬ್ಬಳ್ಳಿ: ಕಾಲೇಜು ಕ್ಯಾಂಟೀನ್‌ನಲ್ಲಿ ತಟ್ಟೆಯಲ್ಲಿ ಉಳಿಸಿ ಹಾಳು ಮಾಡುವ ಪಲಾವ್ ಅವರ ಸಾಮಾಜಿಕ ಕಾಳಜಿಯನ್ನು ಎಚ್ಚರಗೊಳಿಸುತ್ತದೆ. ಅದಕ್ಕೆ ಮೂರ್ತ ರೂಪ ಸಿಕ್ಕಿದಾಗ ನೂರಾರು ಮಕ್ಕಳ ಹೊಟ್ಟೆ ತುಂಬಲು ನೆರವಾಗುತ್ತದೆ.

ಆಹಾರವನ್ನು ಎಸೆಯುವವರು ಹಾಗೂ ಒಪ್ಪೊತ್ತಿನ ಊಟಕ್ಕೂ ಪರದಾಡುವ ಜನರ ನಡುವೆ ಕೊಂಡಿಯಾಗುವ ಯುವ ಸಮುದಾಯವನ್ನು ಕಿರುಚಿತ್ರದ ರೂಪದಲ್ಲಿ ಪರಿಚಯಿಸಿದ್ದು ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು.

ಕಾಲೇಜಿನ ಎರಡನೇ ವರ್ಷದ ಹತ್ತು ವಿದ್ಯಾರ್ಥಿಗಳು ಜೊತೆಗೂಡಿ ನಿರ್ಮಿಸಿದ ಈಟ್ ಟುಗೆದರ್ ಚಿತ್ರವನ್ನು ಶುಕ್ರವಾರ ಕಾಲೇಜಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಾಪಕರು, ಸಹಪಾಠಿಗಳು ಹಾಗೂ ಶಾಲಾ ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಲಾಯಿತು.

ಚಿತ್ರದ ಅವಧಿ ಕೇವಲ ಹತ್ತು ನಿಮಿಷ. ಆದರೆ ಇದರ ಹಿಂದಿನ ಕಾಳಜಿ ದೊಡ್ಡದು. ಇದನ್ನು ಸಾಕ್ಷಾತ್ಕಾರಗೊಳಿಸಲು ಈ ವಿದ್ಯಾರ್ಥಿಗಳ ತಂಡ ಸುಮಾರು ಮೂರು ತಿಂಗಳು ಶ್ರಮ ಹಾಕಿದೆ. ಕಾಲೇಜಿನ ಕ್ಯಾಂಟೀನ್, ಸಮೀಪದ ಕಟ್ಟೀಮನಿ ಶಾಲೆ, ಕೊಳಚೆ ಪ್ರದೇಶ ಮುಂತಾದ `ಲೊಕೇಷನ್~ಗಳಲ್ಲಿ ಓಡಾಡಿ ಚಿತ್ರವನ್ನು ನಿರ್ಮಿಸಿದೆ. ಇವರ ಕಾರ್ಯಕ್ಕೆ ವಿದ್ಯಾರ್ಥಿಯೊಬ್ಬರ ಅಮ್ಮ  ಜಯಶ್ರೀ ಹಬೀಬ `ನಿರ್ಮಾಪಕರ~ ಸ್ಥಾನದಲ್ಲಿ ನಿಂತು ಪ್ರೋತ್ಸಾಹ ನೀಡಿದ್ದಾರೆ.

ವಿಷಯವೊಂದರಲ್ಲಿ ಫೇಲಾಗುವ ವಿದ್ಯಾರ್ಥಿ ಬೇಸರದಲ್ಲಿ ಅಳುವ ಮಗುವಿನ ಚಿತ್ರ ಬರೆಯುತ್ತಾನೆ. ಚಿತ್ರ ಸರಿಯಾಗಿ ಮೂಡದ ಕಾರಣ ಇಂಟರ್‌ನೆಟ್‌ನಲ್ಲಿ ಸೂಕ್ತ ಚಿತ್ರವನ್ನು ಹುಡುಕಾಡುತ್ತಾನೆ. ಅಳುವ ಮಗು ಎಂದು ಟೈಪ್ ಮಾಡಿ ಎಂಟರ್ ಹೊಡೆಯುವ ಅವನಿಗೆ ಹಸಿವೆಯಿಂದ ಕಂಗೆಟ್ಟು ಸೊರಗಿದ ಮಕ್ಕಳ ಸಾಲು ಸಾಲು ಚಿತ್ರಗಳು ಸಿಗುತ್ತವೆ.

ತಟ್ಟೆಯಲ್ಲಿ ಆಹಾರ ಬಿಡುವ ಚಿತ್ರಣ ಕೂಡ ಅವನ ಮನಸ್ಸಿನಲ್ಲಿ ಹಾದುಹೋಗುತ್ತದೆ. ಇದಕ್ಕಾಗಿ ಕ್ಯಾಂಟೀನ್‌ನಲ್ಲಿ ನೀಡುವ ಪಲಾವ್ ಪ್ರಮಾಣವನ್ನು ಕಡಿಮೆ ಮಾಡಿ `ಹೆಚ್ಚಾದ ಆಹಾರವನ್ನು ಪರರಿಗೆ ಹಂಚಿ~ ಸೂತ್ರದಡಿ ಕೊಳಚೆ ಪ್ರದೇಶಗಳಿಗೆ ಆಹಾರದ ಪೊಟ್ಟಣಗಳನ್ನು ಸಾಗಿಸುತ್ತಾನೆ. ಇದಕ್ಕೆ ಆತನ ಸಹಪಾಠಿಗಳು ಸಾಥ್ ನೀಡುತ್ತಾರೆ.

ಇಂಥ ಕಥೆಗೆ ಚಿತ್ರಕಥೆಯ ರೂಪ ಕೊಟ್ಟು, ನಿರ್ದೇಶನದ ಜವಾಬ್ದಾರಿಯನ್ನು ಕೂಡ ನಿಭಾಯಿಸಿದ್ದು ಆಕಾಶ ಆರ್. ಎಲಿಗಾರ. ಡಿಜಿಟಲ್ ಎಸ್‌ಎಲ್‌ಆರ್ ಕೆಮರಾ ಬಳಸಿ ಎಡಿಟಿಂಗ್, ಡಬ್ಬಿಂಗ್ ಇತ್ಯಾದಿ ಎಲ್ಲ ತಾಂತ್ರಿಕ ಅಂಶಗಳನ್ನು ಕೂಡ ಕಾಲೇಜು ಕ್ಯಾಂಪಸ್‌ನಲ್ಲೇ ಪೂರೈಸಿದ ವಿದ್ಯಾರ್ಥಿಗಳು ಚಿತ್ರವನ್ನು ಅಂತರರಾಷ್ಟ್ರೀಯ ಕಿರುಚಿತ್ರ ಮೇಳಕ್ಕೆ ಕಳುಹಿಸುವ ಸಿದ್ಧತೆಯಲ್ಲಿದ್ದಾರೆ.

ಪ್ರತೀಕ, ಅಮೇಯ, ಮನೋಜ ಹಾಗೂ ರಕ್ಷಿತ್ ಛಾಯಾಗ್ರಹಣ ಮಾಡಿದ್ದು ಸೌರಭ್ ಜಿ.ಎಸ್. ಸಂಗೀತ ನೀಡಿದ್ದಾರೆ. ಶ್ರೀನಿವಾಸ ಹಬೀಬ, ಸಂದೀಪ ಮೊಟಗಿ, ಸಂಕೇತ ಠಿಕಾರೆ, ಶಶಾಂಕ ಎಲ್ ಮುಂತಾದವರು ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.