ADVERTISEMENT

ಕುಸ್ಮಾ ವಿರುದ್ಧ ನೌಕರರ ಆಕ್ರೋ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 6:15 IST
Last Updated 17 ಜುಲೈ 2012, 6:15 IST

ಹುಬ್ಬಳ್ಳಿ: ಶಿಕ್ಷಣ ಹಕ್ಕು ಅನುಷ್ಠಾನದ ವಿರುದ್ಧ ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ (ಕುಸ್ಮಾ) ನೀಡಿದ ಶಾಲಾ ಬಂದ್ ಕರೆಗೆ ಧಾರವಾಡ ಜಿಲ್ಲಾ ಅನುದಾನರಹಿತ ಇಂಗ್ಲಿಷ್ ಮಾಧ್ಯಮ ಶಾಲೆಗಳ ನೌಕರರ ಕಲ್ಯಾಣ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹವಾಗಿದ್ದು, ಈ ಕಾನೂನಿನ ಅನುಷ್ಠಾನವು ಅಗತ್ಯವಾಗಿ ಆಗಬೇಕು ಎಂದು ಅದು ಪ್ರತಿಪಾದಿಸಿದೆ. ಮಕ್ಕಳ ಭವಿಷ್ಯವನ್ನು ಕಡೆಗಣಿಸಿ ಕುಸ್ಮಾ ಶಾಲಾ ಬಂದ್‌ಗೆ ಕರೆ ನೀಡಿದ್ದು ಖಂಡನಾರ್ಹ ಎಂದೂ ಅಭಿಪ್ರಾಯಪಟ್ಟಿದೆ.

ಕೋರ್ಟ್ ತೀರ್ಪಿನಂತೆ ಖಾಸಗಿ ಅನುದಾನರಹಿತ ಶಾಲೆಗಳು ಶೇ 25ರಷ್ಟು ಸೀಟುಗಳನ್ನು ಬಡ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು. ಕುಸ್ಮಾ ನಿರ್ಧಾರದಂತೆ ಶಾಲೆಗಳನ್ನು ಬಂದ್ ಮಾಡದೆ ಎಲ್ಲ ಶಿಕ್ಷಕರು ಹಾಜರಾಗಿ ಪಾಠಗಳನ್ನು ಮಾಡಬೇಕು. ಈಗಾಗಲೇ ಶಿಕ್ಷಕರಿಗೆ ಸೇವಾ ಭದ್ರತೆ ಹಾಗೂ ಇತರ ಸೌಲಭ್ಯಗಳು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಬಂದ್‌ಗೆ ಬೆಂಬಲಿಸಬಾರದು ಎಂಬ ತೀರ್ಮಾನವನ್ನೂ ಕೈಗೊಳ್ಳಲಾಗಿದೆ.

ಈಗಾಗಲೇ ರಾಜ್ಯಾದ್ಯಂತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಹೊಸ ಪ್ರವೇಶಗಳಿಗೆ ವಿದ್ಯಾರ್ಥಿಗಳಿಂದ ಅಪಾರ ಪ್ರಮಾಣದ ಡೊನೇಶನ್ ಹಾಗೂ ಇತರ ಧನ ಪಡೆಯಲಾಗಿದೆ. ಬಡವರು ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಶೇ 25ರಷ್ಟು ಪ್ರಮಾಣದ ಸೀಟುಗಳನ್ನು ಕೊಟ್ಟರೆ ನಷ್ಟವೇನೂ ಆಗುವುದಿಲ್ಲ. ಆಡಳಿತ ಮಂಡಳಿ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಲಾಗಿದೆ.

ಕುಸ್ಮಾ ಶಿಕ್ಷಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಶಿಕ್ಷಕರಿಗೆ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ನೀಡುವಲ್ಲಿಯೂ ವಿಫಲವಾಗಿದೆ. ಡೊನೇಶನ್ ಹಾವಳಿ ಮತ್ತು ಶಿಕ್ಷಣದ ವ್ಯಾಪಾರೀಕರಣಕ್ಕೆ ಕುಸ್ಮಾ ಸಂಘಟನೆಯೇ ಕಾರಣ ಎಂದೂ ಆರೋಪಿಸಲಾಗಿದೆ. ಈ ಸಂಬಂಧ ನಡೆದ ತುರ್ತು ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಆರ್. ರಂಜನ, ಸಿ.ಜಿ. ಅಂಗಡಿ, ಲಕ್ಷ್ಮಣ ಅಂಬಿಗೇರ, ಅಶೋಕ ತುಬಾಕ ಮತ್ತಿತರರು ಪಾಲ್ಗೊಂಡಿದ್ದರು.

ಈ ಮಧ್ಯೆ `ಪ್ರತಿಶತ 25ರಷ್ಟು ಸೀಟುಗಳನ್ನು ಮೀಸಲಾತಿ ಆಧಾರದಲ್ಲಿ ತುಂಬದ ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗುವುದು~ ಎನ್ನುವ ನಿಯಮ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳನ್ನು ಕೆರಳುವಂತೆ ಮಾಡಿದ್ದು, ಹುಬ್ಬಳ್ಳಿಯ 30 ಹಾಗೂ ಧಾರವಾಡದ ಒಂದು ಶಾಲೆ ಸೋಮವಾರ ತೆರೆಯಲಿಲ್ಲ. `ಯಾವುದೇ ಪೂರ್ವ ತಯಾರಿ ಇಲ್ಲದೆ ಶಾಲಾ ಆಡಳಿತ ಮಂಡಳಿಗಳನ್ನು ವಿಶ್ವಾಸಕ್ಕೂ ತೆಗೆದುಕೊಳ್ಳದೆ ಈ ನಿಯಮ ಜಾರಿಮಾಡಲು ಹೊರಟಿದ್ದಕ್ಕೆ ನಮ್ಮ ವಿರೋಧವಿದೆ~ ಎಂದು ಕುಸ್ಮಾ ಮುಖಂಡರು ಹೇಳಿದ್ದಾರೆ.

ಹುಬ್ಬಳ್ಳಿಯ ಬಹುತೇಕ ಅನುದಾನರಹಿತ ಶಾಲೆಗಳು ಬಂದ್ ಆಗಿದ್ದವು. ಅವಳಿನಗರವನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವ ಊರಿನಲ್ಲೂ ಶಾಲೆಗಳು ಬಂದ್ ಆಗಿದ್ದರ ವಿಷಯವಾಗಿ ವರದಿ ಬಂದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

`ಸಚಿವರು ಸೋಮವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ಮಂಗಳವಾರದಿಂದ ಎಂದಿನಂತೆ ಶಾಲೆಗಳು ಕಾರ್ಯ ನಿರ್ವಹಿಸುವ ನಂಬಿಕೆ ಇದೆ~ ಎಂದು ಅವರು ಹೇಳಿದರು. ಭಾನುವಾರದ ಬೆನ್ನಿಗೆ ಅನಿರೀಕ್ಷಿತವಾಗಿ ಸಿಕ್ಕ ಮತ್ತೊಂದು ರಜೆಯಿಂದ ವಿದ್ಯಾರ್ಥಿಗಳು ಖುಷಿಯಲ್ಲಿದ್ದರೆ, ಪಾಲಕರು ಶಾಲೆಗಳನ್ನು ಬಂದ್ ಮಾಡಿದ ವಿಷಯವಾಗಿ ಆತಂಕಗೊಂಡಿದ್ದರು. `ಏಳು ದಿನಗಳ ಕಾಲ ಈ ಬಲವಂತದ ರಜೆ ಹೀಗೇ ಮುಂದುವರಿದರೆ ಹೇಗೆ~ ಎನ್ನುವ ಚಿಂತೆ ಅವರಲ್ಲಿ ಮನೆ ಮಾಡಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.