ADVERTISEMENT

ಕ್ಯಾಬಿನೆಟ್ ದರ್ಜೆಗೆ ಚ್ಯುತಿ: ಶೆಟ್ಟರ ವಿಷಾದ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 5:45 IST
Last Updated 17 ಅಕ್ಟೋಬರ್ 2011, 5:45 IST

ಹುಬ್ಬಳ್ಳಿ: `ಕಳೆದ ಎರಡು ಸರ್ಕಾರಗಳಿಂದ ಕ್ಯಾಬಿನೆಟ್ ದರ್ಜೆಗೆ ಚ್ಯುತಿ ಬಂದಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ವಿಷಾದ ವ್ಯಕ್ತಪಡಿಸಿದರು.

ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಸ್ಮರಣಾರ್ಥ ನಗರದಲ್ಲಿ ಭಾನುವಾರ ಏರ್ಪಡಿಸ ಲಾಗಿದ್ದ `ಸ್ಟಾರ್ ಆಫ್ ನಾರ್ತ್ ಕರ್ನಾಟಕ~ ಎಂಬ ರಾಜ್ಯಮಟ್ಟದ ನೃತ್ಯ ಮತ್ತು ಗಾಯನ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವಿದ್ದಾಗ ಎಲ್ಲ ಸಚಿವರೂ ಕ್ಯಾಬಿನೆಟ್ ದರ್ಜೆಯವರಂತೆ ವರ್ತಿಸುತ್ತಿದ್ದರು. ಎಲ್ಲ ಸಚಿವರು ಎಲ್ಲ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಇದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಸರ್ಕಾರದಲ್ಲೂ ಮುಂದುವರಿಯಿತು. ಆದರೆ ರಾಜಕಾರಣಕ್ಕೆ ಘನತೆ ತಂದವರು ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ~ ಎಂದು ಅವರು ಬಣ್ಣಿಸಿದರು.

`ರಾಜಕಾರಣದಲ್ಲೂ ವೈಚಾರಿಕತೆಯ ವ್ಯಕ್ತಿತ್ವ ರೂಢಿಸಿಕೊಂಡಿದ್ದ ಎಂ.ಪಿ. ಪ್ರಕಾಶ ಅವರು, ವಿಧಾನಸಭೆಯಲ್ಲಿ ಮಾತನಾಡುವಾಗ ಚಿಂತಕರ ಹಾಗೂ ಸಾಹಿತಿಗಳ ಮಾತುಗಳನ್ನು ಉದ್ಧರಿಸಿ ಮಾತನಾಡುತ್ತಿದ್ದರು. ಇತರ ಸಚಿವರು ಗೈರು ಹಾಜರಾಗಿದ್ದಾಗ ಎಂ.ಪಿ. ಪ್ರಕಾಶ ಅವರು ನೇರ ವಾಗಿ ಹಾಗೂ ಸ್ಪಷ್ಟವಾಗಿ ಉತ್ತರಿಸುತ್ತಿದ್ದರು. ಅವರು ಮುಖ್ಯಮಂತ್ರಿಯಾಗಲು ಯೋಗ್ಯ ರಾಗಿದ್ದರು. ಆದರೆ ಅವರಿಗೆ ಅವಕಾಶ ತಪ್ಪಿತು~ ಎಂದು ಅವರು ಹೇಳಿದರು.


ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಸಾಹಿತಿ ಮೋಹನ ನಾಗಮ್ಮನವರ, ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ರಂಗ ಕಲಾವಿದೆ ಸುಮತಿಶ್ರೀ ನವಲಿಹಿರೇಮಠ, ಸಂಗೀತ ನಿರ್ದೇಶಕ ವಿ. ಮನೋಹರ, ಟಿವಿ ನಟ ಸುನೀಲ ಪುರಾಣಿಕ ಮೊದಲಾದವರು ಹಾಜರಿದ್ದರು. ನಂತರ ವಿವಿಧ ಸಂಘಟನೆಗಳಿಂದ ನೃತ್ಯ ಕಾರ್ಯ ಕ್ರಮಗಳು ಜರುಗಿದವು.

ಸ್ಪರ್ಧೆ ಇಂದು ಮುಂದುವರಿಕೆ
ರಾಜ್ಯಮಟ್ಟದ ನೃತ್ಯ ಮತ್ತು ಗಾಯನ ಸ್ಪರ್ಧೆಯ `ಸ್ಟಾರ್ ಆಫ್ ನಾರ್ತ್ ಕರ್ನಾಟಕ~ ಸೋಮವಾರ  (ಅ. 17) ಕೂಡಾ ಮುಂದುವರಿಯಲಿದೆ.

`ಸಮಾರೋಪ ಸಮಾರಂಭ ತಡವಾದ ಕಾರಣ ಸೀನಿಯರ್ ಸೋಲೊ ಗಾಯನ, ಸೀನಿಯರ್ ಸೋಲೊ ನೃತ್ಯ ಹಾಗೂ ಗುಂಪು ನೃತ್ಯ ಸ್ಪರ್ಧೆಗಳು ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಗೋಕುಲ ಗಾರ್ಡನ್‌ನಲ್ಲಿ ಮುಂದುವರಿಯಲಿವೆ~ ಎಂದು ಸಂಘಟಕ ಶಾಂತಮೂರ್ತಿ ಕುಲಕರ್ಣಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT