ADVERTISEMENT

ಗೋಶಾಲೆ ನಿರ್ವಹಣೆ ಅನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:35 IST
Last Updated 18 ಫೆಬ್ರುವರಿ 2012, 6:35 IST

ನವಲಗುಂದ: ಇಲ್ಲಿನ ರೈತಸೇನಾ ಗೋಶಾಲೆ ಸೇನಾ ಸಮಿತಿಯಿಂದ ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಹದ್ದಿನಲ್ಲಿ ಪ್ರಾರಂಭಿಸಲಾಗಿರುವ ಗೋಶಾಲೆ ನಿರ್ವಹಣೆಗಾಗಿ ಸರಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲವಾದ್ದರಿಂದ ಗೋವುಗಳ ನಿರ್ವಹಣೆ ಕಷ್ಟಕರವಾಗುತ್ತದೆ. ಕಾರಣ ಜಿಲ್ಲಾಧಿಕಾರಿಗಳು ಗೋವುಗಳ ಸಂರಕ್ಷಣೆಗಾಗಿ ಕೂಡಲೇ ಅನುದಾನ ಬಿಡಗಡೆ ಮಾಡಬೇಕೆಂದು  ಈ ಸಮಿತಿಯ ಅಧ್ಯಕ್ಷ ವಿರೇಶ ಸೋಬರದಮಠ ಒತ್ತಾಯಿಸಿದ್ದಾರೆ.

ಈಗಾಗಲೇ ಗೋಶಾಲೆ ನಿರ್ಮಾಣಕ್ಕಾಗಿ ಇಬ್ರಾಹಿಂಪೂರ ಹದ್ದಿನಲ್ಲಿ 2 ಎಕರೆ ಜಮೀನನ್ನು ಬಾಡಿಗೆ ಪಡೆಯಲಾಗಿದೆ. ಸುಮಾರು 15 ಟ್ರಿಪ್ ಮೇವು ಸಂಗ್ರಹಣೆ, ನೀರಿನ ಸಂಗ್ರಹದ ವ್ಯವಸ್ಥೆಯನ್ನು ಕೂಡ ರೈತರು, ಗೋವು ರಕ್ಷಕರ ಸಹಾಯದಿಂದ ಮಾಡಲಾಗಿದೆ.
 
ಆದರೆ ಗೋಶಾಲೆ ನಿರ್ವಹಣೆಗಾಗಿ ಹೆಚ್ಚಿನ ಖರ್ಚು ತಗುಲುವುದರಿಂದ ಸರಕಾರ ಅನುದಾನ ಬಿಡುಗಡೆ ಮಾಡಬೇಕೆಂದು ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗಳಿಗೆ, ಸಂಸದರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿ.ಪಂ.ಅಧ್ಯಕ್ಷರಿಗೆ ಹಾಗೂ ಶಾಸಕರಿಗೆ ಮನವಿ ಮಾಡಿದ್ದರೂ ಅನುದಾನ ಬಿಡುಗಡೆ ಮಾಡದಿರು ವುದು ವಿಷಾದಕರ ಸಂಗತಿಯಾಗಿದೆ.
 
ಗೋವುಗಳು ನಿಲ್ಲಲು ಶೆಡ್ಡಿನ ವ್ಯವಸ್ಥೆ, ವಿದ್ಯುತ್ ಶಕ್ತಿ ಪಡೆಯಲು, ಹೊಟ್ಟು ಮೇವು ಖರೀದಿಗಾಗಿ, ಕಾರ್ಮಿಕರ ವೆಚ್ಚ ಮೊದಲಾದವುಗಳಿಗೆ ಅನುದಾನದ ಅವಶ್ಯಕತೆ ಇರುವುದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿ ಗೋವುಗಳ ರಕ್ಷಣೆ, ಸಂತತಿ ಉಳುವಿಗಾಗಿ ಸಹಕಾರ ನೀಡಬೇಕಾಗಿದೆ.
 
ಗೋವುಗಳ ರಕ್ಷಣೆ ಮತ್ತು ಸಂತಾನ ಉಳಿಸುವುದು ಈ ಸಮಿತಿಯ ಪ್ರಮುಖ ಉದ್ದೇಶವಾಗಿದೆ ಹೊರತು ಯಾವುದೇ ವಯಕ್ತಿಕ ಲಾಭಕ್ಕಾಗಿ ಈ ಸಮಿತಿಯನ್ನು ರಚನೆ ಮಾಡಿಲ್ಲ. ಕಾರಣ ತಾಲ್ಲೂಕಿನಾದ್ಯಂತ ರೈತರು ಹಸುಗಳನ್ನು ಕಸಾಯಿಖಾನೆಗೆ ಹೊಡೆಯದೆ ನಮ್ಮ ಗೋಶಾಲೆಗೆ ನೀಡಿದರೆ ನಾವು ಅವುಗಳನ್ನು ರಕ್ಷಣೆ ಮಾಡುತ್ತೇವೆ. ಕೈಕಾಲು ಮುರಿದಿರುವ, ಅಂಗ ವೈಫಲ್ಯದಿಂದ ಬಳಲುತ್ತಿರುವ ಗೋವುಗಳಿದ್ದರೂ ಅವುಗಳ ಆರೈಕೆಯನ್ನು ಮಾಡುತ್ತೇವೆ ಜೊತೆಗೆ ತಾವು ಕೂಡ ಗೋವುಗಳ ರಕ್ಷಣೆಗಾಗಿ ಸಹಕಾರ ನೀಡಿದಂತಾಗುತ್ತದೆ.
ಅಷ್ಟೇ ಅಲ್ಲದೇ ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ಮೇವು, ಹೊಟ್ಟನ್ನು ಸುಡಲಾರದೆ ಹೊಲದ ಒಂದು ದಡದಲ್ಲಿ ಇಟ್ಟರೇ ನಾವೇ ಬಂದು ಮೇವನ್ನು ತೆಗೆದುಕೊಂಡು ಹೋಗುತ್ತೇವೆ. ಕಾರಣ ರೈತರು, ಸರಕಾರಿ ಅಧಿಕಾರಿಗಳು ಸಹಾಯ ಮಾಡಬೇಕೆಂದು ವಿರೇಶ ಸೊಬರದಮಠ ವಿನಂತಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.