ಹುಬ್ಬಳ್ಳಿ: ಬೈರಿದೇವರಕೊಪ್ಪಕ್ಕೆ ಹೊಂದಿಕೊಂಡಿರುವ ಸದಾ ಶಿವಾನಂದನಗರದಲ್ಲಿ ಒಳಚರಂಡಿ ದುರಸ್ತಿ ಕಾಮಗಾರಿ ಕೈಗೊಳ್ಳುವಾಗ ಎಲ್ಲೆಂದರಲ್ಲಿ ಬಿಎಸ್‌ಎನ್‌ಎಲ್ ಮಾರ್ಗ ತುಂಡರಿಸಿ ಹೋಗಿದ್ದು, ಇದರಿಂದ ಬೈರಿದೇವರಕೊಪ್ಪ ಸೇರಿದಂತೆ ಸುತ್ತಲಿನ ಪ್ರದೇಶಗಳ 500ಕ್ಕೂ ಅಧಿಕ ದೂರವಾಣಿಗಳು ಸಂಪರ್ಕ ಕಳೆದುಕೊಂಡಿವೆ.
ಮೊದಲ ಸಲ ಕೇಬಲ್ ತುಂಡರಿಸಿ ಹೋದಾಗಲೇ ಸ್ಥಳದಲ್ಲಿ ಹಾಜರಿದ್ದ ಮುಖ್ಯಸ್ಥರ ಗಮನಕ್ಕೆ ತರಲಾಗಿದ್ದರೂ ಮತ್ತೆ ಮತ್ತೆ 4-5 ಕಡೆ ಕೇಬಲ್ ಕತ್ತರಿಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ದೂರಿದ್ದಾರೆ. ಒಳ ಚರಂಡಿ ದುರಸ್ತಿ ಕಾಮಗಾರಿಗೆ ಜೆಸಿಬಿಯನ್ನು ಬಳಸಿದ್ದೇ ಘಟನೆಗೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಸಂಪರ್ಕ ಕಡಿದುಹೋದ ತಕ್ಷಣ ಜಾಗೃತವಾದ ಬಿಎಸ್‌ಎನ್‌ಎಲ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯದಲ್ಲಿ ತೊಡಗಿದರು. ಸಮರೋಪಾದಿಯಲ್ಲಿ ಕೆಲಸ ಆರಂಭಿಸಲಾಗಿದ್ದು ಎಲ್ಲ ದೂರವಾಣಿಗಳು ಪುನಃ ಸಂಪರ್ಕ ಪಡೆಯಲು ಶನಿವಾರದವರೆಗೆ ಕಾಲಾವಕಾಶ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.
`ಘಟನೆಯಿಂದ ಸಾಕಷ್ಟು ಪ್ರಮಾಣದ ಕೇಬಲ್‌ಗೆ ಹಾನಿಯಾಗಿದ್ದು, ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದೆ. ತುಂಬಿಕೊಡುವಂತೆ ಪಾಲಿಕೆಯನ್ನು ಕೋರಲಾಗುವುದು. ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಉಣಕಲ್‌ನಲ್ಲೂ ಇದೇ ರೀತಿ ಕೇಬಲ್ ಕತ್ತರಿಸಲಾಗಿತ್ತು.
ಪಾಲಿಕೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ಮಾಡಿಕೊಂಡರೂ ಇಂತಹ ಘಟನೆಗಳನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಕೇಬಲ್ ಹಾಳಾದ ಘಟನೆಗೆ ಸಂಬಂಧಿಸಿದಂತೆ ಬಿಎಸ್‌ಎನ್‌ಎಲ್‌ನಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪಾಲಿಕೆ ಅಧಿಕಾರಿಗಳಿಗೂ ಹಾನಿ ಭರಿಸುವಂತೆ ಪತ್ರ ಬರೆಯಲು ನಿರ್ಧರಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಎನ್.ಕೆ. ಗಂದಿಗವಾಡ, ಎಂಜಿನಿಯರ್ ಸಿ.ಎಚ್.ಶಿವಾನಂದ ಹಾಗೂ ಅಧಿಕಾರಿ ಚಂದ್ರಶೇಖರ್ ತರಿಕೇರಿ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.