ADVERTISEMENT

ದಸರಾ ಕ್ರೀಡಾಕೂಟ: ಧಾರವಾಡ ಜಿಲ್ಲೆ ಮೇಲುಗೈ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 5:45 IST
Last Updated 8 ಅಕ್ಟೋಬರ್ 2012, 5:45 IST

ಬಾಗಲಕೋಟೆ: ಎಲ್ಲ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಧಾರವಾಡ ಜಿಲ್ಲಾ ತಂಡದ ಆಟಗಾರರು  ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬೆಳಗಾವಿ ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿದರು.

ಪುರುಷರ ವಿಭಾಗದ ಹಾಕಿಯಲ್ಲಿ ಗದಗ ತಂಡವನ್ನು 5-1 ಗೋಲುಗಳಿಂದ ಮಣಿಸಿದ ಧಾರವಾಡ ಜಿಲ್ಲಾ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ವಿಜಯಿ ತಂಡದ ಪರವಾಗಿ ಮಂಜುನಾಥ ಜಾಧವ, ಸಚಿನ್ ಉಂಡಿ, ಶೇಖರ ಕಾರವಾರ, ಅಭಿಷೇಕ ಬೇಜವಾನ ಮತ್ತು ರಾಘವೇಂದ್ರ ಕೊರವರ ತಲಾ ಒಂದೊಂದು ಗೋಲು ಬಾರಿಸಿದರು. ಮಹಿಳೆಯರ ವಿಭಾಗದ ಹಾಕಿಯಲ್ಲಿ ಆತಿಥೇಯ ಬಾಗಲಕೋಟೆ ತಂಡ 7-1 ಗೋಲುಗಳ ಅಂತರದಲ್ಲಿ ಧಾರವಾಡ ತಂಡವನ್ನು ಪರಾಭವಗೊಳಿಸಿತು.

ಪುರುಷರ ವಿಭಾಗದ ಹ್ಯಾಂಡ್‌ಬಾಲ್ ಫೈನಲ್‌ನಲ್ಲಿ ಬೆಳಗಾವಿ ತಂಡ 19-12 ಪಾಯಿಂಟ್‌ಗಳಿಂದ ಧಾರವಾಡ ತಂಡವನ್ನು ಮಣಿಸಿತು. ಮಹಿಳೆಯರ ವಿಭಾಗದಲ್ಲಿ ಧಾರವಾಡ ತಂಡ, ಬೆಳಗಾವಿ ತಂಡವನ್ನು (11-4) ಸೋಲಿಸಿತು.

ರಾಖಿ ನಾಯಕ, ಅಕ್ಷತಾ ಬಾಲಶೆಟ್ಟಿ, ಶೀತಲ್ ಫ್ರಾನ್ಸಿ, ಪ್ರಭಾವತಿ ಹುಲಿ, ಶ್ರುತಿ ಬಿ.ಜಾಧವ, ಶಿಲ್ಪಾ ಕಮ್ಮಾರ, ಶ್ರೇಯಾ ಬಡಿಗೇರ, ಮಧು ಮೆಣಸಿನಕಾಯಿ, ಶಿಲ್ಪಾ ಚೌರಿ, ಶ್ರುತಿ  ಬಡಿಗೇರ, ಶೃತಿ ಜೆ.ಜಾಧವ ಮತ್ತು ರೇಖಾ ನವಲಗುಂದ ಧಾರವಾಡದ ಪರ ಉತ್ತಮ ಆಟ ಪ್ರದರ್ಶಿಸಿದರು.

ಬಾಲ್ ಬ್ಯಾಡ್ಮಿಂಟನ್‌ನ ಪುರುಷರ ವಿಭಾಗದಲ್ಲಿ ಧಾರವಾಡ ತಂಡ 2-1ರಿಂದ ಹಾವೇರಿ ತಂಡವನ್ನು ಸೋಲಿಸಿತು. ವಿಶ್ವನಾಥ ಕೆ, ನಿರಂಜನ ಆರ್, ಅಮಿತ ಕುಮಾರ, ವೆಂಕಟೇಶ ಪಮ್ಮಾರ, ಮಂಜುನಾಥ ಎಂ, ಶ್ರೀಶೈಲ ಕುಮಾರ ಮತ್ತು ಲಾರನ್ನ ಅವಟಿ ಧಾರವಾಡ ತಂಡದಲ್ಲಿದ್ದರು.

ಷಟಲ್ ಬ್ಯಾಡ್ಮಿಂಟನ್ (ಸಿಂಗಲ್ಸ್): ಮಹಿಳೆಯರ ವಿಭಾಗದಲ್ಲಿ ಧಾರವಾಡದ ನೀತಾ ಹೆಗಡೆ 2-1 ಸೆಟ್‌ಗಳಿಂದ ತಮ್ಮದೇ ಜಿಲ್ಲೆಯ ಅಕ್ಷತಾ ಮಡಿವಾಳರ ಅವರನ್ನು ಸೋಲಿಸಿದರು.

ಪುರುಷರ ವಿಭಾಗದ ಟೆನಿಸ್‌ಸಿಂಗಲ್ಸ್‌ನಲ್ಲಿ ಧಾರವಾಡದ ಗಿರೀಶ ಸಂಕೋಲಿ, ಬಾಗಲಕೋಟೆಯ ವಿಶ್ವನಾಥ ದಾಸ ಅವರನ್ನು ಪರಾಭವಗೊಳಿಸಿದರೆ ಮಹಿಳೆಯರ      ವಿಭಾಗದ ಸಿಂಗಲ್ಸ್‌ನಲ್ಲಿ ಧಾರವಾಡದ ಅಫ್ರೋಜ್ ಫಾತಿಮಾ, ಬೆಳಗಾವಿಯ ಸ್ನೇಹಾ        ಕಾಗತಿಕರ ಅವರನ್ನು 6-2 ಸೆಟ್‌ಗಳಿಂದ ಸೋಲಿಸಿದರು.

ಟೆನಿಸ್‌ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗದ ಡಬಲ್ಸ್‌ಗೆ ತಲಾ ಒಂದೊಂದು ತಂಡಗಳು ಮಾತ್ರ ಬಂದಿದ್ದ ಕಾರಣ ಧಾರವಾಡದ ರಾಹುಲ್ ಬಿಲ್ಲೆ-ಅಖಿಲೇಶ ಜಾಧವ ಹಾಗೂ ಬಾಗಲಕೋಟೆಯ ರಾಜೇಶ್ವರಿ ಪಾಟೀಲ-ಸುಪ್ರಿಯಾ ಪಾಟೀಲ ಅವರಿಗೆ ಪ್ರಶಸ್ತಿ ನೀಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.