ADVERTISEMENT

ದುರ್ಗಂಧದೊಂದಿಗೆ ಬೆಳಗು ಆರಂಭ!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 9:05 IST
Last Updated 13 ಸೆಪ್ಟೆಂಬರ್ 2013, 9:05 IST

ಧಾರವಾಡ: 2005ರಲ್ಲಿಯೇ ಇಲ್ಲಿಯ ಬಸವನಗರ ಬಳಿಯ ವಿಜಯನಗರ ಬಡಾವಣೆ ಪಾಲಿಕೆಯಿಂದ ಅನು­ಮೋದನೆ­ಗೊಂಡಿದ್ದರೂ ಇನ್ನೂವರೆಗೂ ರಸ್ತೆ, ಒಳಚರಂಡಿ, ಕುಡಿಯುವ ನೀರು ಪೂರೈಕೆಯಲ್ಲಿ ಅವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳಿಂದ ನಲುಗುತ್ತಿದೆ.

ಮಗದುಮ್‌ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಈ ಬಡಾವಣೆಯ ಪಕ್ಕದ ಖಾಲಿ ಜಾಗೆಯಲ್ಲಿ ಸುತ್ತಮುತ್ತ ಎತ್ತರದಲ್ಲಿರುವ ಬಡಾವಣೆಗಳಿಂದ ನೀರು ಹರಿದು ದುರ್ಗಂಧ ಸೂಸುತ್ತಿದ್ದು, ಇಲ್ಲಿ ಜೀವಿಸುವುದೇ ಕಷ್ಟವಾಗಿದೆ. ನಾವು ಕಟ್ಟಡ ಕಟ್ಟಲು ನ್ಯಾಯಬದ್ಧವಾಗಿ ಪಾಲಿಕೆಯಿಂದ ಅನುಮತಿ ಪಡೆದು, ಮನೆಗೊಂದರಂತೆ 20ರಿಂದ 30 ಸಾವಿರದವರೆಗೆ ಅಭಿವೃದ್ಧಿ ಶುಲ್ಕವನ್ನೂ ಕಟ್ಟಿದ್ದೇವೆ. ಪ್ರತಿವರ್ಷವೂ 800ರಿಂದ ಸಾವಿರ ರೂಪಾಯಿಗಳವರೆಗೆ ಮನೆ ತೆರಿಗೆಯನ್ನು ತುಂಬುತ್ತಿದ್ದೇವೆ. ಇಲ್ಲಿ ನಿಲ್ಲುವ ನೀರನ್ನು ಗಟಾರು ನಿರ್ಮಿಸಿ ಮುಂದಕ್ಕೆ ಕಳಿಸುವ ಸಂಬಂಧ ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯ ಬಲರಾಮ ಕುಸುಗಲ್‌, ಜಿಲ್ಲಾಧಿಕಾರಿಗಳು, ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಸಲ್ಲಿಸಿ ನಮ್ಮ ಚಪ್ಪಲಿಗಳು ಹರಿದು ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿಗಳಾದ ಟಿ.ಪಿ.ಹೆಬಸೂರ, ಎಸ್‌.ಎಚ್‌.ಜಿಗತೇರಿ, ಎಸ್‌.ಸಿ.ಹಿರೇಮಠ, ಸಿ.ಕೆ.ಯಗಂಬಳಿ­ಮಠ, ವೈ.ಬಿ.ಉದಮೇಶಿ.

ಆರೋಗ್ಯ ಇಲಾಖೆ ಡೆಂಗೆ, ಮಲೇರಿಯಾ ಬರದಂತೆ ತಡೆಯಲು ಮನೆಯ ಬಳಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಜನಜಾಗೃತಿ ಮಾಡುತ್ತದೆ. ಆದರೆ, ಹೀಗೆ ನಿತ್ಯವೂ ನೀರು ನಿಲ್ಲುತ್ತಿರುವುದರಿಂದ ಡೆಂಗೆ ಬರೋದಿಲ್ಲವೇ? ಇದಕ್ಕೆ ಯಾರು ಹೊಣೆ. ನಮ್ಮಿಂದ ತೆರಿಗೆ ವಸೂಲಿ ಮಾಡು­ತ್ತಿದ್ದರೂ ಮಹಾನಗರ ಪಾಲಿಕೆ ತೆಪ್ಪಗೆ ಕಣ್ಣುಮುಚ್ಚಿ ಕುಳಿತಿರುವುದು ಏಕೆ ಎಂದು ಅವರು ಪ್ರಶ್ನಿಸುತ್ತಾರೆ.

ನೆಹರು ನಗರ ಹಾಗೂ ವಿಜಯನಗರವನ್ನು ಸಂಧಿಸುವ ಜಾಗದ ಮಧ್ಯೆ ದೊಡ್ಡ ಚರಂಡಿಯನ್ನು ನಿರ್ಮಿಸಲಾಗಿದೆ. ಇಲ್ಲಿ ನಿಲ್ಲುವ ನೀರನ್ನು ಆ ಚರಂಡಿಗೆ ಸಾಗಿಸಲು ಒಂದು ಗಟಾರು ನಿರ್ಮಾಣ ಮಾಡಿದರೂ ಸಾಕು ಸಮಸ್ಯೆ ಬಗೆಹರಿಯುತ್ತದೆ. ಆದರೆ ಅದನ್ನು ಮಾಡುವ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗೆ ಇಲ್ಲ. ಒಂದನೇ ವಾರ್ಡ್‌ನ ಪಾಲಿಕೆ ಸದಸ್ಯ ಬಲರಾಮ ಕುಸುಗಲ್‌ ಅವರಿಗೆ ಸಮಸ್ಯೆ ಬಗೆಹರಿಸಲು ಕೇಳಿದರೆ, ’ಪಾಲಿಕೆಯಿಂದ ಇನ್ನೂ ನಮಗೆ ಅಧಿಕಾರವೇ ಕೊಟ್ಟಿಲ್ಲ ಎಂದು ಜಾರಿಕೊಳ್ಳುತ್ತಾರೆ. ಕನಿಷ್ಟ ಅಧಿಕಾರಿಗಳನ್ನಾದರೂ ಕರೆತಂದು ಸಮಸ್ಯೆಯನ್ನು ವಿವರಿಸಬಹುದಲ್ಲ’ ಎಂದು ವಕೀಲರೂ ಆಗಿರುವ ಹೆಬಸೂರು ಪ್ರಶ್ನಿಸುತ್ತಾರೆ.

ಬಡಾವಣೆಯ ಎತ್ತರ ಪ್ರದೇಶದಲ್ಲಿ ವಾಸವಾಗಿರುವ ಮಂದಿ ಸಂಡಾಸು ಮಾಡಿದ್ದು ಇಲ್ಲಿಗೇ ಬರುತ್ತದೆ. ಆ ದುರ್ಗಂಧ ನಮ್ಮ ಮೂಗಿಗೆ ಅಡರು­ತ್ತದೆ. ಒಳಚರಂಡಿ ಕಾಮಗಾರಿ ಮಾಡದಿ­ರುವುದೇ ಈ ಸಮಸ್ಯೆಗೆ ಕಾರಣ. ಆದರೂ ಮಹಾನಗರಪಾಲಿಕೆಯ ವಲಯಾಧಿ­ಕಾರಿಗಳು, ಆಯುಕ್ತರು ಮಾತ್ರ ಇದನ್ನು ಗಮನಕ್ಕೇ ತೆಗೆದುಕೊಂಡಿಲ್ಲ ಎಂಬುದು ಈ ನಿವಾಸಿಗಳು ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.