ADVERTISEMENT

ಧನ್ಯತೆ ಮೂಡಿಸಿದ ಶ್ರಾವಣ ಜಲರಥೋತ್ಸವ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 5:45 IST
Last Updated 4 ಆಗಸ್ಟ್ 2012, 5:45 IST
ಧನ್ಯತೆ ಮೂಡಿಸಿದ ಶ್ರಾವಣ ಜಲರಥೋತ್ಸವ
ಧನ್ಯತೆ ಮೂಡಿಸಿದ ಶ್ರಾವಣ ಜಲರಥೋತ್ಸವ   

ಹುಬ್ಬಳ್ಳಿ: ಜಿಟಿ ಜಿಟಿ ಮಳೆ. ಕೆರೆಯ ಸುತ್ತ ಸೇರಿದ್ದ ಭಕ್ತರಿಂದ ಭಕ್ತಿ, ಭಾವಪರವಶತೆಯಿಂದ `ಓ ನಮಃ ಶಿವಾಯ~ ಘೋಷ. ಅಲಂಕೃತ ತೆಪ್ಪದಲ್ಲಿ ಆರೂಢ ಸಿದ್ಧಾರೂಢ ಸ್ವಾಮಿ ಮೂರ್ತಿ. ತೆಪ್ಪ ಕೆರೆ ನೀರ ಹಾದಿ ಹಿಡಿದು ನಿಧಾನವಾಗಿ ತೇಲುತ್ತಿದ್ದಂತೆ ಅಲ್ಲಿ ಸೇರಿದ್ದ ಎಲ್ಲರಲ್ಲೂ ಆ ನೋಟವನ್ನು ತನು, ಮನದಿಂದ ತುಂಬಿಕೊಳ್ಳುವ ಕಾತುರ!

ಶ್ರೀ ಸಿದ್ಧಾರೂಢ ಸ್ವಾಮಿಯ 83ನೇ ಪುಣ್ಯತಿಥಿಯ ಅಂಗವಾಗಿ ಶುಕ್ರವಾರ ಮಠದ ಕೆರೆಯಲ್ಲಿ ನಡೆದ ಜಲರಥೋತ್ಸವವನ್ನು ವೀಕ್ಷಿಸಿದ ಸಾವಿರಾರು ಭಕ್ತರು ಕೆಲ ಕ್ಷಣ ತಮ್ಮನ್ನು ತಾವೇ ಮರೆತರು. ಸ್ವಾಮಿಯನ್ನು ಹೊತ್ತ ತೇರು ಕೆರೆಯಲ್ಲಿ ಐದು ಸುತ್ತು ಬರುವವರೆಗೆ ಅತ್ತಿತ್ತ ಕದಲದೆ, ಕಣ್ಣು ಕಣ್ಣು ಬಿಟ್ಟು ವೀಕ್ಷಿಸಿದ ಭಕ್ತರ ಮುಖದಲ್ಲಿ ಅದೇನನ್ನೋ ಅನುಭವಿಸಿದ ಧನ್ಯತಾಭಾವ.

ಮಧ್ಯಾಹ್ನ 12.30ಕ್ಕೆ ವಾದ್ಯ ವೈಭವದೊಂದಿಗೆ ನಗರದಲ್ಲಿ ಪಲ್ಲಕಿ ಮೆರವಣಿಗೆ ನಡೆಯಿತು. ಮೆರವಣಿಗೆ ಮಠಕ್ಕೆ ತಲುಪಿದ ಬಳಿಕ ಸಂಜೆ 5.30ಕ್ಕೆ ಸರಿಯಾಗಿ ತೆಪ್ಪದ ತೇರು ಉತ್ಸವ ಜರುಗಿತು. ಮಹಾಪೂಜೆಯೊಂದಿಗೆ ಜಲ ರಥೋತ್ಸವ ಸಮಾಪ್ತಿಗೊಂಡಿತು.

`ಜಲರಥೋತ್ಸವ ನಡೆಯಲಿದ್ದ ಕೆರೆಯಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ ಮಠದ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಆಡಳಿತ ಕಮಿಟಿಯ ಮನವಿಯಂತೆ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಟ್ಯಾಂಕರ್‌ಗಳಲ್ಲಿ ನೀರು ತಂದು ಕೆರೆಗೆ ಸುರಿದಿದ್ದರು.
 
ಅಲ್ಲದೇ ಜಲಮಂಡಳಿ ವತಿಯಿಂದಲೂ ಶ್ರೀನಿವಾಸ ನಗರದಿಂದ ಕೊಳವೆ ಬಾವಿ ನೀರನ್ನು ಕೆರೆಗೆ ಬಿಡಲಾಗಿತ್ತು. ಈ ಮಧ್ಯೆ ಕಳೆದ 2-3 ದಿನಗಳಿಂದ ಸುರಿದ ಮಳೆ ನೀರೂ ಸೇರಿ ಕೆರೆ ತುಂಬಿದ್ದು ಸಿದ್ಧಾರೂಢ ಸ್ವಾಮಿಯ ಮಹಿಮೆ~ ಎಂದು ಸಮಿತಿಯ ಮಾಜಿ ಪದಾಧಿಕಾರಿ ರಂಗಾ ಬುದ್ದಿ ತಿಳಿಸಿದರು.

`ಸ್ವಾಮಿಯ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ಜಲರಥೋತ್ಸವಕ್ಕೆ ಸಾಕ್ಷಿಯಾದರು. ಕೆಲವು ಭಕ್ತರು ಕೊಡದಲ್ಲಿ ನೀರು ತಂದು ಕೆರೆಗೆ ಸುರಿದದ್ದು ಇನ್ನೊಂದು ವಿಶೇಷ. ಕೆರೆಯಲ್ಲಿ ಈ ಬಾರಿ ಪ್ರತಿ ವರ್ಷಕ್ಕಿಂತ ಈ ಬಾರಿ ನಿರೀಕ್ಷೆಗಿಂತಲೂ ನಾಲ್ಕಿಂಚು ನೀರು ಹೆಚ್ಚೇ ತುಂಬಿತ್ತು. ಹೀಗಾಗಿ ಸ್ವಾಮಿಯನ್ನು ಹೊತ್ತ ತೆಪ್ಪದ ತೇರು ಸರಾಗವಾಗಿ ತೇಲಲು ಸಾಧ್ಯವಾಯಿತು~ ಎಂದು ಮಠದ ಮ್ಯಾನೇಜರ್ ಈರಣ್ಣ ತುಪ್ಪದ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮುದುಕಿಬಾವಿ ಗ್ರಾಮದ 200ಕ್ಕೂ ಹೆಚ್ಚು ಭಕ್ತರು ಮಠದಲ್ಲಿ ಅಡುಗೆ ಮಾಡಿ ಭಕ್ತರಿಗೆ ಬಡಿಸುವ ಮೂಲಕ ಸೇವೆ ಸಲ್ಲಿಸಿದರು. `ಸಿದ್ಧಾರೂಢ ಸಾರು ಉಂಡವರು ಪಾರು~ ಎಂಬಂತೆ ಅನ್ನ ಸಂತರ್ಪಣೆಯಲ್ಲಿ ಭಾಗಿಯಾಗಿ ಪ್ರಸಾದ ಭೋಜನ ಸೇವಿಸಿದ ಭಕ್ತರು ಪುನೀತಗೊಂಡರು. ಕಳೆದ ಒಂದು ವಾರದಿಂದ ಸ್ವಾಮಿಯ ಪುಣ್ಯಸ್ಮರಣೆಯ ಅಂಗವಾಗಿ ನಡೆದ ಪುರಾಣ ಪಠಣ ಮತ್ತು ಪ್ರವಚನ ಕಾರ್ಯಕ್ರಮಗಳು ಜಲರಥೋತ್ಸವದೊಂದಿಗೆ ಸಂಪನ್ನಗೊಂಡವು.

ಮಠದ ಮುಖ್ಯ ಆಡಳಿತಗಾರರಾದ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ. ನಟರಾಜನ್, ಆಡಳಿಗಾರ ಸಿ.ರಾಜಶೇಖರ ಅವರ ನೇತೃತ್ವದಲ್ಲಿ ಜಲರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.