ADVERTISEMENT

ನಿವೃತ್ತ ಉದ್ಯೋಗಿಗೆ ದಕ್ಕಿದ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 6:38 IST
Last Updated 20 ಸೆಪ್ಟೆಂಬರ್ 2013, 6:38 IST

ಹುಬ್ಬಳ್ಳಿ: ಮಹಾನಗರಪಾಲಿಕೆಯ ನಿವೃತ್ತ ಉದ್ಯೋಗಿಗೆ ಗ್ರ್ಯಾಚುಯಿಟಿ ಸಹಿತ ಸಿಗಬೇಕಾದ ಸೌಲಭ್ಯ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಪಾಲಿಕೆ ಆಯುಕ್ತರ ಕಾರು ಜಪ್ತಿ ಮಾಡಲು ಮುಂದಾದಾಗ  ರೂ 1.86 ಲಕ್ಷದ ಚೆಕ್‌ ನೀಡಿದ ಘಟನೆ ಗುರುವಾರ ನಡೆಯಿತು.

1958ರಿಂದ 1994ರವರೆಗೆ ಪಾಲಿಕೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಉದ್ಯೋಗದಲ್ಲಿದ್ದ ಮಧುಕರ ಲಾತೂರಕರ ಅವರಿಗೆ ನಿವೃತ್ತಿಯಾದ ಬಳಿಕ ಸಿಗಬೇಕಾದ ಸೌಲಭ್ಯ ನೀಡದೆ ಸತಾಯಿಸಲಾಗಿತ್ತು. ಈ ಕುರಿತು ಕಾರ್ಮಿಕ ನ್ಯಾಯಾಲಯದಿಂದ ಲಾತೂರಕರ ಅವರ ಪರ ತೀರ್ಪು ಬಂದಿದ್ದರೂ ಹಣ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದೊಂದಿಗೆ ಗುರುವಾರ ಪಾಲಿಕೆ ಆಯುಕ್ತರ ಕಾರು ಜಪ್ತಿ ಮಾಡಲು ಮುಂದಾದ ಸಂದರ್ಭದಲ್ಲಿ ಚೆಕ್‌ ನೀಡಲಾಯಿತು.

‘ಪಾಲಿಕೆಯಲ್ಲಿ 37 ವರ್ಷ ಸೇವೆ ಸಲ್ಲಿಸಿ 1994ರಲ್ಲಿ  ನಾನು ನಿವೃತ್ತಿ ಹೊಂದಿದ್ದೆ. ನಿವೃತ್ತಿ ಆದಾಗ ಇದ್ದ ಮೂಲವೇತನವನ್ನು ಬದಿಗಿಟ್ಟು 13 ತಿಂಗಳ ನಂತರ ಮೂಲವೇತನ ಕಡಿತಗೊಳಿಸಿ ಲೆಕ್ಕ ಪರಿಶೋಧಕ ಅಧಿಕಾರಿಗಳು ನಿವೃತ್ತಿ ವೇತನವನ್ನು ನಿರ್ಧರಿಸಿದ್ದರು.

ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಸಿಗದೇ ಇದ್ದಾಗ ಕಾರ್ಮಿಕ ನ್ಯಾಯಾಲ­ಯದ ಮೆಟ್ಟಿಲೇರಿದ್ದೆ. 2004ರಲ್ಲಿ ನನ್ನ ಪರವಾಗಿ ತೀರ್ಪು ಬಂದು ರೂ 1.27,484ನ್ನು ಶೇ 10ರ ಬಡ್ಡಿ ಸಹಿತ ನೀಡುವಂತೆ ಆದೇಶಿಸಲಾಗಿತ್ತು. ಆದರೆ ಹಣ ನೀಡದ ಹಿನ್ನೆಲೆಯಲ್ಲಿ ಆಯುಕ್ತರ ಕಾರು ಜಪ್ತಿಗೆ ನ್ಯಾಯಾಲಯ ಆದೇಶ ನೀಡಿದ್ದು, ನನ್ನ ವಕೀಲರಾದ ಎ.ಐ. ಸಿದ್ದಿಕ್‌ ಜೊತೆ ಆಯುಕ್ತರ ಕಚೇರಿಗೆ ಬಂದಿದ್ದೆ.  ವಿಷಯ ಅರಿತ ಆಯುಕ್ತರು, ಲೆಕ್ಕ ಪರಿಶೋಧಕರ ಜೊತೆ ಚರ್ಚಿ ನನಗೆ ಚೆಕ್‌ ನೀಡಿದರು’ ಎಂದು ಲಾತೂರಕರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.