ADVERTISEMENT

ಪಾನೀಯ–ಪುಸ್ತಕ ಮಾರಾಟವೂ ಜೋರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 5:39 IST
Last Updated 1 ಮಾರ್ಚ್ 2014, 5:39 IST

ಹುಬ್ಬಳ್ಳಿ: ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರ್‍ಯಾಲಿಯಿಂದ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಎಷ್ಟು ಲಾಭವಾಗಬಹುದು ಗೊತ್ತಿಲ್ಲ. ಆದರೆ, ಮೋದಿ ಪಾಲ್ಗೊಂಡಿದ್ದ ‘ಭಾರತ ಗೆಲ್ಲಿಸಿ’ ರ್‍ಯಾಲಿ ಸಂದರ್ಭದಲ್ಲಿ ಮಾತ್ರ ಸಣ್ಣ–ಪುಟ್ಟ ವ್ಯಾಪಾರಸ್ಥರು ತಮ್ಮ ಜೇಬು ತುಂಬಿಸಿಕೊಂಡು ಬೀಗುತ್ತಿದ್ದುದು ಕಂಡು ಬಂದಿತು.

ನೀರಿನ ಬಾಟಲು, ಅನಾನಸ್, ಕಲ್ಲಂಗಡಿ ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆದಿತ್ತು. ಅದೂ ಮಾಮೂಲಿಗಿಂತ ದುಪ್ಪಟ್ಟು ಬೆಲೆಯಲ್ಲಿ!
‘ನಾನು ತಂದಿದ್ದ ಎಲ್ಲಾ 75 ಅನಾನಸ್ ಹಣ್ಣುಗಳು ಖರ್ಚಾಗಿದ್ದು ನಾಲ್ಕು ಗಂಟೆ ಅವಧಿಯಲ್ಲಿ ₨ 3,000 ಗಳಿಸಿದ್ದೇನೆ’ ಎನ್ನುವ ರಫೀಕ್, ₨ 10ಕ್ಕೆ ಒಂದು ಹೋಳು ಅನಾನಸ್ ಮಾರಾಟ ಮಾಡಿದರೂ ಜನ ಮುಗಿದು ಬಿದ್ದು ಕೊಂಡುಕೊಳ್ಳುತ್ತಿದ್ದರು.

ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ರಾಜೇಶ, ಸುಮನೇಶ ಅವರ ಅಭಿಪ್ರಾಯವೂ ಇದೇ ಆಗಿತ್ತು. ‘ನಾವು ತಂದಿದ್ದ 200 ಕಲ್ಲಂಗಡಿ ಹಣ್ಣುಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾದವು. ಇನ್ನೂ 100 ಹಣ್ಣುಗಳನ್ನು ತಂದಿದ್ದರೆ ಅವುಗಳು ಸಹ ಮಾರಾಟವಾಗುತ್ತಿದ್ದವು’ ಎಂದು ಖುಷಿಯಿಂದ ಹೇಳಿದರು.

ಇದು ಹಣ್ಣು, ನೀರು, ತಂಪು ಪಾನೀಯಗಳ ಮಾರಾಟದ ಮಾತಾಯಿತು. ಬಿಜೆಪಿ ಮತ್ತು ನರೇಂದ್ರ ಮೋದಿ ಕುರಿತ ಪುಸ್ತಕಗಳನ್ನು ಮಾರಾಟ ಮಾಡಲು ಸಪ್ನ ಬುಕ್ ಹೌಸ್ ಅಂಗಡಿಯನ್ನು ತೆರೆದಿತ್ತು.

‘ಒಟ್ಟು 200 ಪುಸ್ತಕಗಳನ್ನು ತಂದಿದ್ದೆವು. ಮೊದಲ ಒಂದು ಗಂಟೆ ಅವಧಿಯಲ್ಲಿ 45 ಪುಸ್ತಕಗಳು ಖರ್ಚಾದವು’ ಎಂದು ಸಂಸ್ಥೆಯ ವ್ಯವಸ್ಥಾಪಕ ಎಂ.ವಿ.ರಘು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.