ADVERTISEMENT

ಪಾರ್ಕ್‌ನಲ್ಲೇ ಕಾರ್ಯಕರ್ತರೊಂದಿಗೆ ನಾಸ್ಟಾ, ಊಟ...

ಮನೋಜ ಕುಮಾರ್ ಗುದ್ದಿ
Published 6 ಮೇ 2018, 10:33 IST
Last Updated 6 ಮೇ 2018, 10:33 IST

ಹುಬ್ಬಳ್ಳಿ: ಬೆಳಿಗ್ಗೆ 6ಕ್ಕೆ ಆರಂಭವಾಗುವ ದಿನಚರಿ ರಾತ್ರಿ ಮೂರು ಗಂಟೆಯವರೆಗೂ ಮುಂದುವರೆಯುತ್ತದೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30, ಮಧ್ಯಾಹ್ನ 3.30ರಿಂದ ಸಂಜೆ 6 ಗಂಟೆವರೆಗೆ ಮನೆ ಮನೆಗೆ ತೆರಳಿ ಮತಯಾಚನೆ. ಪ್ರಚಾರದ ವೇಳೆ ಪಾರ್ಕ್‌ನಲ್ಲಿಯೇ ನಾಸ್ಟಾ, ಊಟ...ಇವು ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮಹೇಶ ನಾಲವಾಡ ಅವರ ನಿತ್ಯದ ಚಟುವಟಿಕೆ.

ನೃಪತುಂಗ ಬೆಟ್ಟದ ಬಳಿ ಇರುವ ಸಂತೋಷ ನಗರ, ಜೆ.ಕೆ. ಸ್ಕೂಲ್‌ ಬಳಿ ತೆರಳಿದಾಗ ದಾರಿಯಲ್ಲಿ ಹೋಗುವವರೆಲ್ಲ ಇವರನ್ನು ‘ಡಾಕ್ಟ್ರೇ’ ಎಂದು ಮಾತನಾಡಿಸುತ್ತಿದ್ದರು. ರೋಗಿಗಳಾಗಿ ಚಿಕಿತ್ಸೆ ಪಡೆದವರು, ‘ಓ.. ನೀವೂ ಎಲೆಕ್ಷನ್ನಿಗೆ ನಿಂತಿರೇನ್ರಿ. ಆತ್ರಿ. ನಾವು ನಿಮಗ ಸಪೋರ್ಟ್‌ ಮಾಡ್ತೀವಿ’ ಎನ್ನುತ್ತಿದ್ದಂತೆಯೇ ನಾಲವಾಡರ ಮುಖ ಅಗಲವಾಗುತ್ತಿತ್ತು

ನಾಲ್ಕೈದು ಜನ ಕಾರ್ಯಕರ್ತರು ಮತದಾರರ ಮನೆ ಬಾಗಿಲಿಗೆ ತೆರಳಿ ಡಾಕ್ಟರ್‌ ಬಂದಾರೆ, ಎಲೆಕ್ಷನ್ನಿಗಿ ನಿಂತಾರ ಎಂದು ಕರೆಯುತ್ತಾರೆ. ಮನೆಯ ಹಿರಿಯರು, ಕಿರಿಯರು ಹೊರಗೆ ಬರುತ್ತಿದ್ದಂತೆಯೇ ನಾಲವಾಡ ಅವರು ಕೈಮುಗಿದು, ‘ಈ ಸರ್ತಿ ನನಗ ಸಪೋರ್ಟ್‌ ಮಾಡ್ರಿ. ಇಡೀ ಕ್ಷೇತ್ರ ಡೆವಲಪ್ ಮಾಡ್ತೀನಿ’ ಎಂದು ಭರವಸೆ ನೀಡುತ್ತಾರೆ. ಸಮಯದ ಅಭಾವದಿಂದಾಗಿ ಕೆಲವೊಮ್ಮೆ ಹೊರಗಡೆಯಿಂದಲೇ ನಮಸ್ಕಾರ ಮಾಡಿ, ಮತ ಕೇಳಿ ಮುಂದೆ ಸಾಗುತ್ತಲೇ ಇರುತ್ತಾರೆ.

ADVERTISEMENT

ತೀರಾ ಪರಿಚಯಸ್ಥರ ಮನೆಗಳು ಬಂದಾಗ ಮನೆಯೊಳಗೆ ತೆರಳಿ ಒಂದೈದು ನಿಮಿಷ ಮಾತನಾಡುತ್ತಿದ್ದರು. ಅಷ್ಟರಲ್ಲೇ ಮನೆಯವರು, ನೀರು, ಚಹಾ ಅಥವಾ ಮಜ್ಜಿಗೆ ತಂದು ಕೊಟ್ಟು ಉಪಚರಿಸುತ್ತಾರೆ. ಓಣಿಯಲ್ಲಿ ಓಡಾಡುವ ಸಂದರ್ಭದಲ್ಲಿ ಮಿಸ್ಡ್‌ ಕಾಲ್‌ ಆದ ಫೋನ್‌ ಕರೆಗಳಿಗೆ ಆದ್ಯತೆಗನುಗುಣವಾಗಿ ಮಾತನಾಡುತ್ತಾ ಮುಂದಿನ ಮನೆಗಳತ್ತ ಪಯಣ ಸಾಗುತ್ತಿತ್ತು.

ಸೂರ್ಯನ ಬಿಸಿಲು ನೆತ್ತಿಯ ಮೇಲೆ ಬಂದಾಗ ಊಟದ ವ್ಯವಸ್ಥೆ ಮಾಡುವಂತೆ ಸಹಾಯಕರಿಗೆ ಹೇಳುತ್ತಾರೆ. ಇವರ ಮನದ ಇಂಗಿತ ಅರಿತ ಆಪ್ತ ಸಹಾಯಕ ಲಿಂಗರಾಜ, ‘ಊಟಕ್ಕ ಅರೇಂಜ್‌ ಮಾಡೀನ್ರಿ. ಇಲ್ಲೇ ಗೋಲ್ಡನ್‌ ಪಾರ್ಕ್ ಅಂತ ಅದ. ಅಲ್ಲೇ ಹೋಗೂನ್ರಿ’ ಎಂದರು. ‘ಪ್ರಚಾರ ಶುರು ಮಾಡಿದಾಗಿನಿಂದ ಬೆಳಿಗ್ಗೆ ನಾಸ್ಟಾ, ಮಧ್ಯಾಹ್ನ ಊಟ ಕಾರ್ಯಕರ್ತರ ಜೊತೆಗೇನ ಆಗ್ತದ’ ಎಂದು ಹಾಗೆಯೇ ಮುನ್ನಡೆದರು.

ಅಷ್ಟರಲ್ಲೇ ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅನ್ವರ್‌ ಮುಧೋಳ ಅವರೂ ಪ್ರಚಾರಕ್ಕೆ ಜೊತೆಗೂಡಿದರು.

ಮಧ್ಯಾಹ್ನ ಊಟ ಮುಗಿಸಿ ಕೊಂಚ ಹೊತ್ತು ವಿರಮಿಸಿದ ಬಳಿಕ ಮತ್ತೊಂದು ಬಡಾವಣೆಗೆ ತೆರಳಿದರು. ಕೈ ಮುಗಿದು ಮತ ಕೇಳುತ್ತಲೇ, ಸಂಜೆ ಬೀದಿ ಬದಿ ನಡೆಸಬೇಕಾದ ಸಭೆ ಕುರಿತು ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಾ ಮುನ್ನಡೆದರು. ಅಷ್ಟರಲ್ಲೇ ಸೂರ್ಯ ಪಶ್ಚಿಮದತ್ತ ಮರೆಯಾದ. ಬಡಾವಣೆಯ ಮನೆ, ಮನೆಗಳಲ್ಲಿ, ಬೀದಿಗಳಲ್ಲಿ ದೀಪಗಳು ಬೆಳಗಿದವು.

ನಮ್ಮನೆಯಲ್ಲಿ 32 ವೋಟು ಅದಾವು!

ಉಣಕಲ್‌–ಗೋಪನಕೊಪ್ಪ ರಸ್ತೆ ಹಿಂಬದಿಯ ಮನೆಯೊಂದಕ್ಕೆ ತೆರಳಿದ ನಾಲವಾಡ ಅವರಿಗೆ ಯುವಕನೊಬ್ಬ ಎದುರಾದ. ಕೈಮುಗಿದು ಮತ ಕೇಳುತ್ತಿದ್ದಂತೆಯೇ, ‘ನಮ್ಮನೆಯಲ್ಲಿ 32 ವೋಟ್‌ ಅದಾವ್ರಿ. ಅಷ್ಟೂ ಹಾಕಿಸ್ತೀನಿ’ ಎಂದ. ಅವನ ಮಾತನ್ನು ‘ಅರ್ಥ’ ಮಾಡಿಕೊಂಡ ನಾಲವಾಡ ಮುಗಳ್ನಗುತ್ತಲೇ ಮುಂದೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.