ADVERTISEMENT

ಪೊಲೀಸ್ ಇಲಾಖೆ ಬಲವರ್ಧನೆಗೆ ಕ್ರಮ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 5:40 IST
Last Updated 14 ನವೆಂಬರ್ 2012, 5:40 IST

ಹುಬ್ಬಳ್ಳಿ: ಹೊಸದಾಗಿ ಸಿಬ್ಬಂದಿ ನೇಮಕ, ಆಧುನೀಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಪೊಲೀಸ್ ಇಲಾಖೆಯ ಬಲವರ್ಧನೆಗೆ ಕ್ರಮ ಕೈಗೊಳ್ಳಲು ಹಣಕಾಸು ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಬಂಜಾರ ಕಾಲೊನಿಯಲ್ಲಿ  ನಿರ್ಮಿಸಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಸಿಎಆರ್)ಆಡಳಿತ ಭವನದ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ತವ್ಯ ನಿರ್ವಹಣೆ ವೇಳೆ ಸಾವಿಗೀಡಾದ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ವಿಮೆ ಮೂಲಕ ನೀಡುವ ಪರಿಹಾರವನ್ನು 10 ಲಕ್ಷ ರೂಪಾಯಿಗೆ ಏರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಯ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು-ಸುವ್ಯವಸ್ಥೆ ಪಾಲನೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲು ರಾಜ್ಯದಲ್ಲಿನ ರಸ್ತೆಗಳ ಸಂಪರ್ಕದ ನಕ್ಷೆಯನ್ನು ಪುನರ್‌ರೂಪಿಸುವ ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಶೀಘ್ರ ಗೃಹ ಇಲಾಖೆಯ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಇತ್ತೀಚೆಗೆ ರಾಜ್ಯದಲ್ಲಿ ಕಾವೇರಿ ನದಿ ನೀರಿನ ಕುರಿತಾದ ಪ್ರತಿಭಟನೆಯ ಸಂದರ್ಭದಲ್ಲಿ ಕಾನೂನು-ಸುವ್ಯವಸ್ಥೆ ಪಾಲನೆ ಹಾಗೂ ಈಶಾನ್ಯ ರಾಜ್ಯಗಳ ನಿವಾಸಿಗಳಲ್ಲಿ ಅಭದ್ರತೆಯ ಮನೋಭಾವ ಹೋಗಲಾಡಿಸಲು ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳನ್ನು ಶೆಟ್ಟರ್ ಶ್ಲಾಘಿಸಿದರು.

10 ಠಾಣೆಗೆ ಮಂಜೂರಾತಿ
ರಾಜ್ಯದಲ್ಲಿ ಈ ವರ್ಷ 10 ಠಾಣೆಗಳಿಗೆ ಮಂಜೂರಾತಿ ನೀಡಲಾಗಿದೆ. ಪ್ರತಿ ವರ್ಷ ಹೊಸ ಠಾಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೂ ಹೆಚ್ಚು ಠಾಣೆಗಳಿಗೆ ಬೇಡಿಕೆ ಬರಬಾರದು. ಹಾಗೆ ಬಂದರೆ ಸಾರ್ವಜನಿಕರ ಜೀವನಕ್ಕೆ ತೊಂದರೆ ಆಗುತ್ತಿದೆ ಎಂದೇ ಅರ್ಥ. ಆದರೂ ಜನಸಂಖ್ಯೆಗೆ ಅನುಗುಣವಾಗಿ ಠಾಣೆಗಳನ್ನು ಹೆಚ್ಚಿಸಲಾಗುತ್ತದೆ~ ಎಂದು ಶೆಟ್ಟರ್ ತಿಳಿಸಿದರು.

`ಧಾರವಾಡದಲ್ಲಿ ಪೊಲೀಸ್ ಸಿಬ್ಬಂದಿ ಮಕ್ಕಳಿಗಾಗಿ ಎಂ.ಎನ್. ಮುತ್ತಣ್ಣ ವಸತಿ ಶಾಲೆಗೆ ಒಂದು ಕೋಟಿ ರೂಪಾಯಿ ನೀಡಲಾಗಿದೆ~ ಎಂದೂ ಅವರು ಹೇಳಿದರು.

`ಅವಳಿನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ಸಮಸ್ಯೆಗಳೂ ಹೆಚ್ಚಿವೆ. ಜೊತೆಗೆ ಪೊಲೀಸರ ಹೊಣೆಯೂ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಪೊಲೀಸರಿಗೆ ಅಗತ್ಯವಾದ ಮೂಲ ಸೌಲಭ್ಯ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ~ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.

ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ವೀರಭದ್ರಪ್ಪ ಹಾಲಹರವಿ, ಎಸ್.ಐ. ಚಿಕ್ಕನಗೌಡ್ರು, ಬಸವರಾಜ ಹೊರಟ್ಟಿ, ಡಿಜಿಪಿ ಲಾಲ್‌ರುಕುಮ್ ಪಚಾವ್, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಮೇಯರ್ ಡಾ.ಪಾಂಡುರಂಗ ಪಾಟೀಲ, ಜಿ.ಪಂ. ಅಧ್ಯಕ್ಷೆ ರತ್ನವ್ವ ಕಳ್ಳಿಮನಿ ಹಾಜರಿದ್ದರು.

ಸುಜಾತಾ ಗುರವ ನಾಡಗೀತೆ ಹಾಡಿದರು. ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಸ್ವಾಗತಿಸಿದರು. ಡಿಸಿಪಿ ಶ್ರೀನಾಥ ಜೋಶಿ ವಂದಿಸಿದರು. ಮಾಯಾ ರಾಮನ್ ನಿರೂಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.