ADVERTISEMENT

ಪ್ರಶ್ನಿಸದಿದ್ದರೆ ಅಭಿವೃದ್ಧಿ ಆಗದು:ರೈ

‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಸಂಘಟನೆ ಆಯೋಜಿಸಿದ್ದ ಸಂವಾದ

​ಪ್ರಜಾವಾಣಿ ವಾರ್ತೆ
Published 7 ಮೇ 2018, 10:51 IST
Last Updated 7 ಮೇ 2018, 10:51 IST

ಹುಬ್ಬಳ್ಳಿ: ‘ಸ್ವಾತಂತ್ರ್ಯಾನಂತರ ಯಾವುದೇ ರಾಜಕೀಯ ಪಕ್ಷಗಳು ಸರಿಯಾಗಿ ಆಡಳಿತ ನಡೆಸಿಲ್ಲ, ಜನರು ಒಂದಾಗಿ ಪ್ರಶ್ನಿಸದೇ ಹೋದರೆ ಅಭಿವೃದ್ಧಿ ಆಗುವುದಿಲ್ಲ’ ಎಂದು ನಟ, ಹೋರಾಟಗಾರ ಪ್ರಕಾಶ್ ರೈ ಹೇಳಿದರು.

‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಸಂಘಟನೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

‘ಸಮಸ್ಯೆಗಳು ಎದುರಾದಾಗ ಎಲ್ಲರೂ ಒಂದಾಗಬೇಕು. ಇನ್ನೊಬ್ಬರ ಸಮಸ್ಯೆ ನಮ್ಮದಲ್ಲ ಎಂದು ಕೂತರೆ ಯಾವುದಕ್ಕೂ ಪರಿಹಾರ ಸಿಗುವುದಿಲ್ಲ. ಅದಕ್ಕಾಗಿಯೇ ನಾನು ಜನರೊಂದಿಗೆ ನಿಂತು ಹೋರಾಡುತ್ತೇನೆ’ ಎಂದರು.

ADVERTISEMENT

‘ಕೋಮು ಗಲಭೆಗಳಲ್ಲಿ ಹಿಂದೂ ವ್ಯಕ್ತಿ ಸತ್ತ, ಮುಸ್ಲಿಂ ವ್ಯಕ್ತಿ ಸತ್ತ ಎನ್ನುತ್ತೀರಿ. ಆದರೆ ,ಆತ ಮನುಷ್ಯ ಎಂದು ಹೇಳುವುದೇ ಇಲ್ಲ. ಮುಗ್ಧ ಯುವಕರನ್ನು ಎತ್ತಿಕಟ್ಟಿ ಅವರಿಂದ ಅಪರಾಧಗಳನ್ನು ಮಾಡಿಸಿ ಜೈಲಿಗೆ ಹೋಗುವಂತೆ ಮಾಡುತ್ತಾರೆ. ಯಾರಾದರೂ ರಾಜಕೀಯ ಮುಖಂಡನ ಮಗ ಜೈಲಿಗೆ ಹೋಗಿದ್ದಾನೆಯೇ’ ಎಂದು ಪ್ರಶ್ನಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಸಮ್ಮಿಶ್ರ ಸರ್ಕಾರ ಬಂದರೆ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಪರಿಣಾಮಗಳು ನಿಮ್ಮ ಕಣ್ಣ ಮುಂದೆಯೇ ಇವೆ. ಯಾರಿಗೆ ಮತ ನೀಡಿ ಎಂದು ಹೇಳುವುದಿಲ್ಲ. ಯೋಚಿಸಿ ಮತ ನೀಡಿ. ಇಲ್ಲದಿದ್ದರೆ, ಮುಂದೆ ಪ್ರಶ್ನಿಸುವ ನೈತಿಕತೆ ನಿಮಗಿಲ್ಲವಾಗುತ್ತದೆ’ ಎಂದು ಮತದಾರರಿಗೆ ಮನವಿ ಮಾಡಿದರು.

‘ರಾಜ್ಯ ಸರ್ಕಾರವು ಲಿಂಗಾಯತ ಪ್ರತ್ಯೇಕ ಧರ್ಮ ರಚನೆಗೆ ಶಿಫಾರಸು ಮಾಡಲು ಚುನಾವಣೆ ವೇಳೆ ಹೊರಟಿದ್ದು ಸರಿಯಲ್ಲ. ಅದಕ್ಕೆ ಕಾಂಗ್ರೆಸ್ ಉತ್ತರಿಸಬೇಕು’ ಎಂದು ರೈ ಅಭಿಪ್ರಾಯಪಟ್ಟರು.

ಮಾಧ್ಯಮ ಸಂವಾದದ ನಂತರ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಯಿತು. ಈ ವೇಳೆ ‘ರೆಡ್ ಅಲರ್ಟ್; ದೇಶ ಆಪತ್ತಿನಲ್ಲಿ’ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಸಂಘಟನೆಯ ರಾಜ್ಯ ಸಂಚಾಲಕ ಕೆ.ಎಲ್. ಅಶೋಕ್ ವೇದಿಕೆಯಲ್ಲಿದ್ದರು.

‘ಮೋದಿ ಮನದಲ್ಲಿ ಮನು’

‘ಎಸ್.ಸಿ/ಎಸ್.ಟಿ ಕಾಯ್ದೆ ತಿದ್ದುಪಡಿಗೆ ಮುಂದಾದಾಗ ದಲಿತರ ನೆನಪಾಗಲಿಲ್ಲ. ಆದರೆ, ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಸರ್ಕಾರಕ್ಕೆ ದಲಿತರ ನೆನಪಾಗುತ್ತಿದೆ. ಮೋದಿ ಬಾಯಲ್ಲಿ ಅಂಬೇಡ್ಕರ್ ಇದ್ದಾರೆ. ಆದರೆ, ಅವರ ಹೃದಯದಲ್ಲಿ ಇರುವುದು ಮನು ಮತ್ತು ಮನುಸ್ಮೃತಿ’ ಎಂದು ಗುಜರಾತ್‌ನ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೆವಾನಿ ಟೀಕಿಸಿದರು.

‘ಉದ್ಯೋಗ ಕೇಳುವವರಿಗೆ ಗೊಬ್ಬರ, ಗೋಮೂತ್ರ ನೀಡುತ್ತೇವೆ ಎನ್ನುತ್ತಾರೆ’ ಎಂದು ಆರೋಪಿಸಿದರು.‘ಜನರ ಕೈ ಕಾಲು ಕಟ್ಟಿ ಮತ ಹಾಕಿಸಿ ಎಂದು ಬಿ.ಎಸ್. ಯಡಿಯೂರಪ್ಪ ಹೇಳುತ್ತಾರೆ. ಇದು ಕರ್ನಾಟಕದ ಜನತೆಗೆ ಮಾಡಿದ ಅವಮಾನ ಅಲ್ಲವೇ’ ಎಂದು ಅವರು ಕೇಳಿದರು. ‘ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸಿ’ ಎಂದು ಪೌರಕಾರ್ಮಿಕರಿಗೆ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.