ADVERTISEMENT

ಬರ ನಿರ್ವಹಣೆ: ಬಿಎಸ್‌ವೈ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಹುಬ್ಬಳ್ಳಿ: `ಬರ ಹಾಗೂ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಇಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ ಅವರ ಪುತ್ರಿಯ ಮದುವೆಗೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಗೆ ತೆರಳಲು ವಿಶೇಷ ವಿಮಾನದಲ್ಲಿ ಭಾನುವಾರ ಇಲ್ಲಿಗೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

`ಬರ ಅಧ್ಯಯನಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳು 3 ತಂಡಗಳನ್ನು ರಚಿಸಿದ್ದಾರೆ. ಜೊತೆಗೆ ನಾನು ಸಹ 7-8 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸರ್ಕಾರಕ್ಕೆ ವರದಿ ಕೊಟ್ಟಿರುವೆ. ಬರಗಾಲವನ್ನು ಸೂಕ್ತವಾಗಿ ಸರ್ಕಾರ ನಿಭಾಯಿಸುತ್ತದೆ~ ಎಂದು ಹೇಳಿದರು.

`ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸುಮಾರು ರೂ 2,600 ಕೋಟಿ ಬೇಡಿಕೆ ಇಡಲಾಗಿದೆ. ಕೂಡಲೇ ರೂ 1,000 ಕೋಟಿಗಳನ್ನು ಬಿಡುಗಡೆ ಮಾಡಬೇಕು~ ಎಂದು ಅವರು ಒತ್ತಾಯಿಸಿದರು.

ಉಪನ್ಯಾಸಕರಿಗೆ ಸಲಹೆ: `ಪಿಯು ಕಾಲೇಜಿನ ಉಪನ್ಯಾಸಕರು ತಮ್ಮ ವೇತನ ಪರಿಷ್ಕರಣೆ ಮಾಡಬೇಕೆಂದು ಮುಷ್ಕರ ಕೈಗೊಂಡಿರುವುದು ಸರಿಯಲ್ಲ.  ಸರ್ಕಾರದೊಂದಿಗೆ ಚರ್ಚಿಸಿ, ಮೌಲ್ಯಮಾಪನಕ್ಕೆ ಮುಂದಾಗಬೇಕು~ ಎಂದು ಅವರು ಸಲಹೆ ನೀಡಿದರು.

ಕಾಂಗ್ರೆಸ್ ಸೇರುವ ಕುರಿತು ಕೇಳಿದ ಪ್ರಶ್ನೆಗೆ `ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಕನಸಿನಲ್ಲಿಯೂ ಸೇರುವ ಯೋಚನೆಯಿಲ್ಲ. ಬೇರೆ ಪಕ್ಷದವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.