ADVERTISEMENT

ಬೆಲ್ಲದ ವಜಾಕ್ಕೆ ಒತ್ತಾಯ

ಎರಡು ಟ್ರಸ್ಟ್‌ಗಳ ಅಧ್ಯಕ್ಷಗಿರಿ!

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 7:16 IST
Last Updated 16 ಜುಲೈ 2013, 7:16 IST

ಹುಬ್ಬಳ್ಳಿ: ಡಿ.ವಿ.ಹಾಲಭಾವಿ ಟ್ರಸ್ಟ್ ಹಾಗೂ ಪಂ.ಬಸವರಾಜ ರಾಜಗುರು ಟ್ರಸ್ಟ್‌ನ ಅಧ್ಯಕ್ಷ ಸ್ಥಾನದಿಂದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರನ್ನು ತಕ್ಷಣ ವಜಾಗೊಳಿಸುವಂತೆ ಇಲ್ಲಿನ ಕನ್ನಡಪರ ಮಹಾಮಂಡಳ ಒತ್ತಾಯಿಸಿದೆ.

ಈ ಸಂಬಂಧ ಸೋಮವಾರ ಇಲ್ಲಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಮಂಡಳದ ಅಧ್ಯಕ್ಷ ಡಿ.ಗೋವಿಂದರಾವ್ ನೇತೃತ್ವದ ನಿಯೋಗ, ಎರಡೂ ಟ್ರಸ್ಟ್‌ಗಳಿಗೆ ಅರ್ಹರನ್ನು ನೇಮಕ ಮಾಡುವಂತೆ ಒತ್ತಾಯಿಸಿದೆ.

ಕೂಡಲೇ ಬೆಲ್ಲದ ಅವರನ್ನು ಈ ಉಭಯ ಟ್ರಸ್ಟ್‌ಗಳ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಅರ್ಹರನ್ನು ಸದರಿ ಟ್ರಸ್ಟ್‌ಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿರುವ ಅವರು ಒಂದು ವೇಳೆ ಈ ಬೇಡಿಕೆ ಈಡೇರದಿದ್ದರೆ ಕಲಾವಿದರೊಂದಿಗೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಸಂಘಟನೆಯ ಪದಾಧಿಕಾರಿಗಳಾದ ಎಂ.ಆರ್.ಪಾಟೀಲ, ಸುಭಾಸ್ ಪೂಜಾರ, ವೀರೇಶ ಅಂಗಡಿ, ಶಕುಂತಲಾ ಶೆಟ್ಟಿ, ನಿಕಿತಾ ಪಾಟೀಲ ನಿಯೋಗದಲ್ಲಿದ್ದರು.

ರಾಜೀನಾಮೆಗೆ ಒತ್ತಾಯ: ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ಡಿ.ವಿ.ಹಾಲಭಾವಿ ಟ್ರಸ್ಟ್ ಹಾಗೂ ಪಂ. ಬಸವರಾಜ ರಾಜಗುರು ಟ್ರಸ್ಟ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ರಾಜೀನಾಮೆ ನೀಡುವಂತೆ ಒತ್ತಡ ಹೆಚ್ಚುತ್ತಿದೆ.

ಬುಧವಾರ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಜೆಡಿಎಸ್‌ನ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕಲಾವಿದರು, ಸಂಗೀತಗಾರರು ಪ್ರತಿಭಟನೆ ನಡೆಸಿದ ನಂತರ ರಾಜೀನಾಮೆ ನೀಡುವಂತಹ ಪರಿಸ್ಥಿತಿಗೆ ಬೆಲ್ಲದ ಅವರು ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟರು.

ಈ ಟ್ರಸ್ಟ್‌ಗಳ ಅಧ್ಯಕ್ಷ ಸ್ಥಾನಕ್ಕೆ ಬೆಲ್ಲದ ಅವರು ಗೌರವದಿಂದ ರಾಜೀನಾಮೆ ನೀಡಬೇಕು. ಜನರ ಒತ್ತಡ ಹೆಚ್ಚಾದ ನಂತರ ರಾಜೀನಾಮೆ ನೀಡುವುದು ಹಿರಿಯರಾಗಿರುವ ಬೆಲ್ಲದ ಅವರಿಗೆ ಶೋಭೆ ತರುವುದಿಲ್ಲ ಎಂದ ಅವರು, ಕಲಾವಿದರು, ಸಂಗೀತಗಾರರೇ ಸಂಬಂಧಪಟ್ಟ ಟ್ರಸ್ಟ್‌ನ ಅಧ್ಯಕ್ಷ ಸ್ಥಾನ ವಹಿಸಬೇಕು ಎಂದೂ ಪ್ರತಿಪಾದಿಸಿದರು.

ಸಮಾಜ ಸೇವೆ ಮಾಡಲೇಬೇಕು ಎಂಬ ಇಚ್ಛೆ ಇದ್ದರೆ, ಹಲವಾರು ಕ್ಷೇತ್ರಗಳಿವೆ. ಅವುಗಳತ್ತ ಹಿರಿಯರಾದ ಬೆಲ್ಲದ ಅವರು ಗಮನ ಹರಿಸಬೇಕು ಎಂದರು. ಕಲಾವಿದರು, ರಾಜಕೀಯ ಮುಖಂಡರು, ಬೆಲ್ಲದ ಅವರು ಕೂಡಲೇ ಉಭಯ ಟ್ರಸ್ಟ್‌ಗಳ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

ಇಲ್ಲಿನ ಚಿತ್ರಸಂಗಮ ಕಲೆ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಹಾಗೂ ಕಲಾವಿದ ಕೆ.ವಿ.ಶಂಕರ್ ಅವರು `ಬೆಲ್ಲದ ಅವರು ದೊಡ್ಡ ಮನಸ್ಸು ಮಾಡಿ, ಯಾವುದಾದರೊಂದು ಟ್ರಸ್ಟ್‌ನ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡಬೇಕಿತ್ತು' ಎಂದು ಅಭಿಪ್ರಾಯಪಟ್ಟರು. `ಮೊದಲಿನಿಂದಲೂ ಚಿತ್ರಕಲೆ ಕುರಿತಂತೆ ಅವರಿಗೆ ವಿಶೇಷ ಆಸಕ್ತಿ ಇದೆ. ಹೀಗಾಗಿ ಡಿ.ವಿ.ಹಾಲಭಾವಿ ಟ್ರಸ್ಟ್‌ನ ಅಧ್ಯಕ್ಷರಾಗಿ ಮಾತ್ರ ಮುಂದುವರೆದಿದ್ದರೆ ಚೆನ್ನಾಗಿರುತ್ತಿತ್ತು' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT