ADVERTISEMENT

ಮನಸ್ತಾಪದಿಂದ ಅಭಿವೃದ್ಧಿಗೆ ಹಿನ್ನೆಡೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 6:25 IST
Last Updated 11 ಅಕ್ಟೋಬರ್ 2011, 6:25 IST

ಧಾರವಾಡ: `ಪ್ರತಿಪಕ್ಷಗಳ ಪೂರ್ಣ ಸಹಕಾರವಿದ್ದರೂ ನಗರದ ಸೂಪರ್ ಮಾರ್ಕೆಟ್ ಅಭಿವೃದ್ಧಿ ವಿಳಂಬವಾಗಲು ಶಾಸಕ ಚಂದ್ರಕಾಂತ ಬೆಲ್ಲದ ಮತ್ತು ಸಚಿವ ಜಗದೀಶ ಶೆಟ್ಟರ ನಡುವಣ ತಿಕ್ಕಾಟವೇ ಕಾರಣ~ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ ಚಿಂಚೋರೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

`ಶಾಸಕ ಬೆಲ್ಲದ ಅವರಿಗೆ ಧಾರವಾಡದ ಅಭಿವೃದ್ಧಿಗಿಂತಲೂ ಸಚಿವ ಸ್ಥಾನದ ಮೇಲೆ ಕಣ್ಣಿದೆ. ಸೂಪರ್ ಮಾರ್ಕೆಟ್ ಪ್ರಸ್ತುತ ಬೆಳವಣಿಗೆ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ಅವರು, ಸಂಪುಟದ ಅನುಮೋದನೆ ಸಿಗಲಿದೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ~ ಎಂದು ಟೀಕಿಸಿದರು.

`ಬಿಜೆಪಿ ಸರಕಾರ ಸೂಪರ್ ಮಾರ್ಕೆಟ್ ಅನ್ನು ಸಂಪೂರ್ಣ ಖಾಸಗೀಕರಣಗೊಳಿಸಲು ಹೊರಟಿದೆ. ರೂ. 83 ಕೋಟಿಗೆ 30 ವರ್ಷಗಳಿಗೆ ಗುತ್ತಿಗೆ ನೀಡುವ ವಿಚಾರವನ್ನು ಸರಕಾರ ಹೊಂದಿದೆ. ಖಾಸಗಿ ಸಹಭಾಗಿತ್ವದ ಯೋಜನೆ (ಪಿಪಿಪಿ)ಗೆ ತಮ್ಮ ಒಪ್ಪಿಗೆ ಇದೆ. ಸ್ಥಳೀಯ ಶಾಸಕ ಬೆಲ್ಲದ ಈ ಕುರಿತು ಆಸಕ್ತಿ ವಹಿಸುತ್ತಿಲ್ಲ. ಈ ಕುರಿತು ಬಹಿರಂಗ ಚರ್ಚೆಗೂ ಸಿದ್ಧ~ ಎಂದು ಅವರು  ತಿಳಿಸಿದರು.

`ಸೂಪರ್ ಮಾರ್ಕೆಟ್ ಪೂರ್ಣ ಅಭಿವೃದ್ಧಿಯಾಗಲು ಸಾಕಷ್ಟು ಸಮಯ ಬೇಕು. ಅಲ್ಲಿಯವರೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಪ್ರಯತ್ನವನ್ನಾದರೂ ಪಾಲಿಕೆ ಮಾಡಲಿ~ ಎಂದು ಅವರು ಒತ್ತಾಯಿಸಿದರು.

ಮುಂದಿನ ಸಾಮಾನ್ಯ ಸಭೆಯ ಒಳಗಾಗಿ ಸೂಪರ್ ಮಾರ್ಕೆಟ್ ಅಭಿವೃದ್ಧಿ ಕುರಿತು ಸ್ಪಷ್ಟ ನಿರ್ಧಾರ    ಕೈಗೊಳ್ಳದೆ ಇದ್ದಲ್ಲಿ ನಗರಾಭಿವದ್ಧಿ ಸಚಿವ ಸುರೇಶಕುಮಾರ ನಿವಾಸ ಎದುರು ಕಾಂಗ್ರೆಸ್ ಪ್ರತಿಭಟನೆ           ನಡೆಸುತ್ತೇವೆ. ಪ್ರತಿಭಟನೆಯಲ್ಲಿ ಎಲ್ಲ ಪಾಲಿಕೆ ಸದಸ್ಯರು, ಸಾಹಿತಿಗಳು, ಗಣ್ಯ ನಾಗರಿಕರು ಪಾಲ್ಗೊಳ್ಳುವರು~ ಎಂದು ಅವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.