ADVERTISEMENT

ಮಳೆ ಹಾನಿ: ವಾರದಲ್ಲಿ ಪರಿಹಾರ ವಿತರಣೆಗೆ ಸೂಚನೆ

ಒಂದು ವಾರದಲ್ಲಿ ಪರಿಹಾರ ವಿತರಣೆಗೆ ಕಟ್ಟುನಿಟ್ಟಿನ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 9:31 IST
Last Updated 13 ಜೂನ್ 2018, 9:31 IST

ಧಾರವಾಡ: ‘ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಹಾಗೂ ನಂತರದಲ್ಲಿ ಸುರಿದ ಮಳೆಯಿಂದಾಗಿ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ 28 ಜನ ಮೃತಪಟ್ಟಿದ್ದು, 2,246 ಮನೆಗಳಿಗೆ ಹಾನಿಯಾಗಿದೆ. ಇವರಿಗೆ ಪರಿಹಾರ ನೀಡುವಲ್ಲಿ ಯಾವುದೇ ವಿಳಂಬವಾಗಬಾರದು’ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಪ್ರಕೃತಿ ವಿಕೋಪ ಹಾಗೂ ಅತಿವೃಷ್ಟಿ
ಯಿಂದಾದ ಹಾನಿ ಹಾಗೂ ಪರಿಹಾರ ವಿತರಣೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

’ಒಟ್ಟು 43 ಹಳ್ಳಿಗಳಲ್ಲಿ ತೀವ್ರ ಹಾನಿಯಾಗಿದೆ. 176 ಜಾನುವಾರುಗಳು ಮೃತಪಟ್ಟಿವೆ. 1,231 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ತೋಟಗಾರಿಕಾ ಬೆಳೆ ಹಾನಿಗೀಡಾಗಿದೆ. ಹಾನಿಗೆ ಒಂದು ವಾರದೊಳಗೆ ಪರಿಹಾರ ವಿತರಿಸಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮಾಹಿತಿ ನೀಡಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ADVERTISEMENT

‘ಏಳು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಕೃಷಿ ಚಟುವಟಿಕೆಗೆ ಯಾವುದೇ ಕೊರತೆಯಾಗದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು’ ಎಂದರು.

ಶಾಸಕರಾದ ಪಿ.ರಾಜೀವ್, ಲಕ್ಷ್ಮಿ ಹೆಬ್ಬಾಳಕರ, ಸಿ.ಎಸ್‌.ಶಿವಳ್ಳಿ ಮತ್ತಿತರರು, ಹೆಚ್ಚಿನ ಪರಿಹಾರ ನೀಡಬೇಕು ಎಂದು
ಒತ್ತಾಯಿಸಿದರು.

ಮಳೆಯಿಂದಾಗಿ ಖಾನಾಪುರ ಭಾಗದಲ್ಲಿ ಸೇತುವೆ ಹಾಗೂ ರಸ್ತೆಗಳು ಹಾಳಾಗಿ ಜನರು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕು ಎಂದು ಶಾಸಕಿ ಅಂಜಲಿ ನಿಂಬಾಳಕರ ಬೇಡಿಕೆ ಇಟ್ಟರು.

‘ಪ್ರಕೃತಿ ವಿಕೋಪದಿಂದ ಹಾನಿಗೀಡಾದವರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದಾಗ ಅದು ತಿರಸ್ಕೃತವಾಗದಂತೆ ಎಚ್ಚರ ವಹಿಸುವುದು ಜಿಲ್ಲಾಧಿ
ಕಾರಿಗಳ ಕರ್ತವ್ಯ. ಬಾಗಲಕೋಟೆ ಜಿಲ್ಲೆಯಲ್ಲಿ ಮನೆ ಕುಸಿದು ಒಂಬತ್ತು ತಿಂಗಳ ಮಗು ಮೃತಪಟ್ಟಿದೆ. ಆದರೆ, ಮರಣೋತ್ತರ ಪರೀಕ್ಷೆ ನಡೆಸಿಲ್ಲವಾದ್ದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಬಾರದು. ಸಾಂದರ್ಭಿಕ ಸಾಕ್ಷಿಗಳನ್ನು ಪರಿಗಣಿಸಿ ಪರಿಹಾರ ನೀಡಬೇಕು’ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ, ಶಾಸಕರಾದ ದಿನಕರ ಶೆಟ್ಟಿ, ಅಮೃತ ದೇಸಾಯಿ, ಮಹಾಂತೇಶ ಕೌಜಲಗಿ, ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.