ADVERTISEMENT

ಮುನಿ ಧರ್ಮಸಾಗರಜೀ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 7:19 IST
Last Updated 16 ಜುಲೈ 2013, 7:19 IST

ಹಾವೇರಿ: ಭಾನುವಾರ ನಿಧನ ಹೊಂದಿದ ಜೈನ ಮುನಿ ಧರ್ಮಸಾಗರ ಮಹಾರಾಜರ ಅಂತ್ಯಕ್ರಿಯೆ ಜೈನ ಸಮುದಾಯದ ವಿಧಿವಿಧಾನಗಳ ಮೂಲಕ ಸೋಮವಾರ ಇಲ್ಲಿ ನಡೆಯಿತು.

ಇಲ್ಲಿನ ಶಂಭವನಂದಿ ಮುನಿ ಮಹಾರಾಜರ ಪಾದುಕೆ ಇರುವ ಸ್ಥಳದಲ್ಲಿ ದೇಹದಹನ ಕಾರ್ಯವು ಮುನಿ ಪುಣ್ಯಸಾಗರ ಹಾಗೂ ಪ್ರಸನ್ನಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ನಡೆಯಿತು.

ಪಾರ್ಥಿವ ಶರೀರವನ್ನು ಜೈನ ಬಸ್ತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತಲ್ಲದೇ, ಅವರ ದೇಹದಹನದ ವಿಧಿವಿಧಾನಗಳ ಕ್ರಿಯೆಯನ್ನು ಹರಾಜಿನ ಮೂಲಕ ಭಕ್ತರಿಗೆ ನೀಡಲಾಯಿತು.

ಂತರ ಧಾರ್ಮಿಕ ಕ್ರಿಯೆಗಳಾದ ಜಲಾಭಿಷೇಕ, ಚಂದನ ಅಭಿಷೇಕ, ಕ್ಷೀರಾಭಿಷೇಕ, ತುಪ್ಪದ ಅಭಿಷೇಕ, ಅಷ್ಟಕಳಶ ಅಭಿಷೇಕಗಳನ್ನು ಭಕ್ತರು ನೆರವೇರಿಸಿದರು. ಅದಾದ ನಂತರ ಜೈನ ಮುನಿಗಳು ಪಾರ್ಥಿವ ಶರೀರಕ್ಕೆ ಐದು ಸುತ್ತು ಹಾಕಿ, ಅಂತಿಮ ಸಂಸ್ಕಾರಕ್ಕೆ ಚಾಲನೆ ನೀಡಿದರು.

ಜೈನ ಮುನಿಗಳ ಹಾಗೂ ಸಹಸ್ರಾರು ಭಕ್ತರ ಮಂತ್ರ- ಘೋಷಗಳ ಮಧ್ಯೆ ಪಾರ್ಥಿವ ಶರೀರಕ್ಕೆ ಭಕ್ತರೊಬ್ಬರು ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ಭಕ್ತರು ಶ್ರದ್ಧಾಭಕ್ತಿಯಿಂದ `ಧರ್ಮಸಾಗರ ಮಹಾರಾಜ ಕೀ ಜೈ...' ಎಂದು ಘೋಷಣೆಗಳನ್ನು ಕೂಗಿದರು.

14ನೇ ಚಾತುರ್ಮಾಸ ಆಚರಣೆಗೆ ಮುನಿ ಧರ್ಮಸಾಗರ ಮಹಾರಾಜರು ಸವಣೂರು ತಾಲ್ಲೂಕಿನ ಕಳಸೂರು ಗ್ರಾಮಕ್ಕೆ ತೆರಳುತ್ತಿದ್ದಾಗ ಭಾನುವಾರ ತೀವ್ರ ಹೃದಯಾಘಾತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT