ADVERTISEMENT

`ರಿಕ್ರಿಯೇಶನ್ ಕ್ಲಬ್ ಕಾಮಗಾರಿ ನಿಲ್ಲಿಸಿ'

ಹು-ಧಾ ಮಹಾನಗರ ಪಾಲಿಕೆಗೆ ಪಾಟೀಲ ಪುಟ್ಟಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 6:27 IST
Last Updated 4 ಸೆಪ್ಟೆಂಬರ್ 2013, 6:27 IST
ಜಿಮ್ಖಾನಾ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿ ಸ್ಪೋರ್ಟ್ಸ್ ಗ್ರೌಂಡ್ ಬಚಾವೊ ಸಮಿತಿ ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಮಾತನಾಡಿದರು. ಸಮಿತಿ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಸದಸ್ಯರು ಚಿತ್ರದಲ್ಲಿದ್ದಾರೆ.
ಜಿಮ್ಖಾನಾ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಹುಬ್ಬಳ್ಳಿ ಸ್ಪೋರ್ಟ್ಸ್ ಗ್ರೌಂಡ್ ಬಚಾವೊ ಸಮಿತಿ ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಮಾತನಾಡಿದರು. ಸಮಿತಿ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಸದಸ್ಯರು ಚಿತ್ರದಲ್ಲಿದ್ದಾರೆ.   

ಹುಬ್ಬಳ್ಳಿ: `ಜಿಮ್ಖಾನಾ ಮೈದಾನದಲ್ಲಿ ಕಾನೂನು ಬಾಹಿರವಾಗಿ ರಿಕ್ರಿಯೇಶನ್ ಕ್ಲಬ್‌ಅನ್ನು ನಿರ್ಮಿಸಲಾಗಿದೆ. ಹೀಗಾಗಿ ಕೂಡಲೇ ಕ್ಲಬ್ ಕಾಮಗಾರಿಯನ್ನು ನಿಲ್ಲಿಸಬೇಕು ಹಾಗೂ ಮೈದಾನಕ್ಕೆ ಕಟ್ಟಿರುವ ಆವರಣ ಗೋಡೆಯನ್ನು ಕೆಡವಿ ಹಾಕಬೇಕು' ಎಂದು ಹುಬ್ಬಳ್ಳಿ ಸ್ಪೋರ್ಟ್ಸ್ ಗ್ರೌಂಡ್ ಬಚಾವೊ ಸಮಿತಿ ಗೌರವಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಆಗ್ರಹಿಸಿದ್ದಾರೆ.

ದೇಶಪಾಂಡೆ ನಗರದಲ್ಲಿರುವ ಜಿಮ್ಖಾನಾ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಂತರ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
`ರಿಕ್ರಿಯೇಶನ್ ಕ್ಲಬ್ ಕಟ್ಟಡವನ್ನು ನಿರ್ಮಿಸುವ ಸಂದರ್ಭದಲ್ಲಿ ಎಲ್ಲ ಕಾನೂನುಗಳನ್ನು ಉಲ್ಲಂಘಿಸಲಾಗಿದೆ. ಇಷ್ಟೆಲ್ಲಾ ಲೋಪಗಳಿದ್ದರೂ ಪಾಲಿಕೆ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿದ್ದು ಎಷ್ಟು ಸರಿ' ಎಂದು ಪ್ರಶ್ನಿಸಿದ ಅವರು, `ಈ ವಿಷಯದಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದ ಅಧಿಕಾರಿಗಳನ್ನು ಸಹ ಶಿಕ್ಷಿಸಿ' ಎಂದರು.

ಈ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದೂ ಎಚ್ಚರಿಸಿದರು.
ಇದಕ್ಕೂ ಮುನ್ನ ದುರ್ಗದ ಬೈಲ್ ವೃತ್ತದಲ್ಲಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವವ ರೆಗೆ ಈ ಹೋರಾಟ ನಿಲ್ಲದು ಎಂದರು.

ಡಾ.ಮಹೇಶ ನಾಲ್ವಾಡ, ಮಹೇಶ ಕಮಟಗಾರ, ಮನೋಜ್ ಹಾನಗಲ್, ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ ಅಳಗುಂಡಗಿ, ಕೆಜೆಪಿ ಮುಖಂಡ ಎನ್. ಎಸ್. ನಾಡಗೇರ, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಅಮೃತ ಇಜಾರಿ ಮಾತನಾಡಿದರು.

ನಂತರ ಮೆರವಣಿಗೆ ಮೂಲಕ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.