ನವಲಗುಂದ: ತಾಲ್ಲೂಕಿನ ಆರೆಕುರಹಟ್ಟಿ ಗ್ರಾಮದ ಗೋವಿನಜೋಳ ಖರೀದಿ ಕೇಂದ್ರವನ್ನು ಬುಧವಾರ ತಾತ್ಕಾಲಿಕವಾಗಿ ಬಂದ್ ಮಾಡಿದ್ದನ್ನು ವಿರೋಧಿಸಿ ಗುರುವಾರ ನೂರಾರು ರೈತರು ಮೂರು ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ಮೇಲೆ ಮುಳ್ಳು ಹಾಕಿ ಪ್ರತಿಭಟನೆ ಮಾಡಿದರು.
ಖರೀದಿ ಮಾಡಿದ ಗೋವಿನಜೋಳ ಶೇಖರಣೆಗೆ ಗುದಾಮುಗಳು ಸಿಗುತ್ತಿಲ್ಲವಾದ್ದರಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಗೋಡೌನ್ ಸಿಕ್ಕ ತಕ್ಷಣ ಪ್ರಾರಂಭಿಸಲಾಗುವುದೆಂದು ತಹಶೀಲ್ದಾರ ಕೆ.ಎಲ್.ಭಜಂತ್ರಿ ಹೇಳಿದೂ ಪ್ರಯೋಜನವಾಗಲಿಲ್ಲ. ಆಕ್ರೋಶಗೊಂಡ ರೈತರು ಮಾತಿನ ತಹಶೀಲ್ದಾರ್ ಜೊತೆ ಮಾತಿನ ಚಕಮಕಿ ನಡೆಸಿದರು.
‘ಸಾವಿರಾರು ಕ್ವಿಂಟಲ್ ಗೋವಿನಜೋಳವನ್ನು ಬೀದಿಯಲ್ಲಿಟ್ಟೆದ್ದೇವೆ. ಹಗಲು ರಾತ್ರಿ ಕಾದು ಸುಸ್ತಾಗಿದ್ದೇವೆ. ಖರೀದಿಸಿದ ಗೋವಿನಜೋಳ ಶೇಖರಣೆಗೆ ಗುಡೌನ್ ಸಿಗುತ್ತಿಲ್ಲವೆಂದು ಹೇಳುತ್ತಿರುವುದು ನಾಚಿಕೆಗೇಡಿತನದ ಸಂಗತಿ. ಸರಕಾರ ರೈತರನ್ನು ಕಡೆಗಣಿಸುತ್ತಿರುವುದಕ್ಕೆ ಇದೊಂದು ತಾಜಾ ಉದಾಹರಣೆ’ ಎಂದು ರೈತರು ಹೇಳಿದರು.
ಕೂಡಲೇ ಖರೀದಿಯನ್ನು ಪ್ರಾರಂಭಿಸದಿದ್ದರೇ ರಾಷ್ಟ್ರೀಯ ಹೆದ್ದಾರಿ ತೆರವುಗೊಳಿಸುವುದಿಲ್ಲವೆಂದು ಪಟ್ಟು ಹಿಡಿದರು. ರಸ್ತೆ ತೆರವುಗೊಳಿಸುವಂತೆ ರೈತರಿಗೆ ಸಿಪಿಐ ಎಸ್.ಎಸ್.ಪಡೋಳಕರ, ಸಿಪಿಐ ಯು.ಜಿ.ಶಶಿಧರ ಪ್ರಯತ್ನಿಸಿದರಾದರೂ ರೈತರು ನಮ್ಮ ಹೆಣ ಬಿದ್ದರೂ ಪರವಾಗಿಲ್ಲ, ಖರೀದಿ ಕೇಂದ್ರ ಪ್ರಾರಂಭಿಸುವವರೆಗೂ ರಸ್ತೆ ತೆರವುಗೊಳಿಸುದಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕೀಳಿದು ರಸ್ತೆ ಮೇಲೆಯೇ ಮಲಗಿಕೊಂಡು ಪ್ರತಿಭಟನೆಗೆ ಮುಂದಾದರು.
ಮೂರು ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಕಿ.ಮೀ ಉದ್ದಕ್ಕೂ ವಾಹನಗಳು ನಿಂತಿದ್ದವು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ತಹಶೀಲ್ದಾರರು ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಚರ್ಚಿಸಿ ಮತ್ತೇ ಖರೀದಿ ಕೇಂದ್ರವನ್ನು ಪ್ರಾರಂಭಿಸಲು ಸೂಚನೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಡಿಎಸ್‌ಪಿ ರಾಜು ಬನಹಟ್ಟಿ, ಧುರೀಣರಾದ ಬಿ.ಬಿ.ಗಂಗಾಧರಮಠ ಸ್ಥಳಕ್ಕೆ ಬಂದು ರೈತರನ್ನು ಸಮಾಧಾನಪಡಿಸಿದರು.
ತೂಕ ಮಾಡಿದ ಚಿಲಗಳನ್ನು ಹೊಲದಲ್ಲಿಯೇ ಶೇಖರಣೆ ಮಾಡಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆ 10.30 ರ ಒಳಗೆ ಖರೀದಿ ಮಾಡಿದ ಗೋವಿನಜೋಳವನ್ನು ಸಾಗಣಿ ಮಾಡದಿದ್ದರೆ ಮತ್ತೆ ಉಗ್ರ ಹೊರಾಟ ಮಾಡಲಾಗುವುದೆಂದು ರೈತರು ಎಚ್ಚರಿಕೆ ನೀಡಿದ್ದಾರೆ.
ವೆಂಕಣ್ಣ ರಾಯರಡ್ಡಿ, ಬಸವರಡ್ಡಿ ಲಕ್ಕಣ್ಣವರ, ಶಿವರಡ್ಡಿ ರಂಗರಡ್ಡಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.