ADVERTISEMENT

ರೊಟ್ಟಿ, ಹೋಳಿಗೆ ಸವಿದಿದ್ದ ರವಿಶಂಕರ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 9:01 IST
Last Updated 13 ಡಿಸೆಂಬರ್ 2012, 9:01 IST

ಹುಬ್ಬಳ್ಳಿ: ಆರು ದಶಕಗಳ ಹಿಂದೆ ಪಂ. ರವಿಶಂಕರ್ ಹುಬ್ಬಳ್ಳಿಗೂ ಬಂದಿದ್ದರು. ಗಂಗೂಬಾಯಿ ಹಾನಗಲ್ಲ ಅವರ ಆಹ್ವಾನದ ಮೇರೆಗೆ ಹುಬ್ಬಳ್ಳಿ ಆರ್ಟ್ ಸರ್ಕಲ್ ಏರ್ಪಡಿಸಿದ್ದ ಸಂಗೀತ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಸಿತಾರ ವಾದನ ಕಛೇರಿ ನೀಡಿದ್ದರು. ಅದು 1954. ಅವರೊಂದಿಗೆ ತಬಲಾ ವಾದಕ ಅಲ್ಲಾರಖಾ ಕೂಡಾ ಬಂದಿದ್ದರು.

ಆಗಿನ್ನೂ ವಿಮಾನ ಸೌಲಭ್ಯ ಇರಲಿಲ್ಲ. ಹೀಗಾಗಿ ರೈಲಿನಲ್ಲಿ ಬಂದಿದ್ದರು. ಆಗ ಅಷ್ಟಾಗಿ ಲಾಡ್ಜಿಂಗ್ ಸೌಲಭ್ಯ ಇರಲಿಲ್ಲ. ಗಂಗೂಬಾಯಿ ಅವರ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಮೂರೂ ದಿನಗಳವರೆಗೆ ಗಂಗಜ್ಜಿ ಮನೆಯಲ್ಲಿಯೇ ಉಳಿದು, ಜೋಳದ ರೊಟ್ಟಿ ಹಾಗೂ ಹೂರಣದ ಹೋಳಿಗೆಯನ್ನು ಉಂಡು ಬಹಳವಾಗಿ ಮೆಚ್ಚಿ ಕೊಂಡಿದ್ದರು. ಒಂದು ದಿನ ಅಲ್ಲಾರಖಾ ಖಾನ್ ಅವರು ಶಾಕಾಹಾರಿ ಅಡುಗೆ ಮಾಡಿ ರವಿಶಂಕರ್ ಅವರಿಗೂ ಬಡಿಸಿದ್ದರು. ಊಟ ಮಾಡಿದ ನಂತರ ಅಚ್ಛಾ ಎಂದಿದ್ದರು ರವಿಶಂಕರ್. ಮತ್ತೆ 1970ರಲ್ಲಿ ಹುಬ್ಬಳ್ಳಿ ಆರ್ಟ್ ಸರ್ಕಲ್ ಬೆಳ್ಳಿಹಬ್ಬದ ಅಂಗವಾಗಿ ರವಿಶಂಕರ್ ಹುಬ್ಬಳ್ಳಿಗೆ ಬಂದರು. ಆರ್ಟ್ ಸರ್ಕಲ್ ಶುರುವಾಗಿದ್ದು 1944. ಅದರ ಬೆಳ್ಳಿಹಬ್ಬವನ್ನು 1969ರಲ್ಲಿ ಮಾಡಬೇಕಿತ್ತು. ಆದರೆ ಆಗಲಿಲ್ಲ. ಹೀಗಾಗಿ 1970ರಲ್ಲಿ ಹಮ್ಮಿ ಕೊಳ್ಳಲಾಗಿತ್ತು.  ಬೆಳಗಾವಿಯವರೆಗೆ ವಿಮಾನದಲ್ಲಿ ಬಂದು, ಹುಬ್ಬಳ್ಳಿಗೆ ಕಾರಿನಲ್ಲಿ ಆಗಮಿಸಿದರು.

ನಾಲ್ಕು ದಿನಗಳವರೆಗೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಗರ್ಲ್ಸ್ ಹೈಸ್ಕೂಲಿನಲ್ಲಿ ಪೆಂಡಾಲ್ ಹಾಕಿ ಅದ್ದೂರಿ ಸಂಗೀತ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಗ ಹುಬ್ಬಳ್ಳಿ ಯ್ಲ್ಲಲಿಯ ಹೋಟೆಲಿನಲ್ಲಿ ಉಳಿದುಕೊಂಡು ಕೊನೆಯ ದಿನ ರವಿಶಂಕರ್ ಕಛೇರಿ ನೀಡಿದರು. ಇದಕ್ಕಿಂತ ಮೊದಲು ಅಂದರೆ 1931ರಲ್ಲಿ ಗಂಗೂಬಾಯಿ ಅವರು ಕೋಲ್ಕತ್ತದಲ್ಲಿ ನಡೆಯುವ ಸಂಗೀತ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಗೆ ಬಂದಿದ್ದ ರವಿಶಂಕರ್ ಮತ್ತು ಬಿಸ್ಮಿಲ್ಲಾ ಖಾನ್ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದರು. ಆದರೆ ಅವರು ಕಾರ್ಯಕ್ರಮ ನೀಡುವ ಮೊದಲು ಸಂಘಟಕರು ತಮ್ಮೆದುರು ಸಿತಾರ ವಾದನ ನುಡಿಸಿರಿ ಎಂದಿದ್ದರು. 10 ನಿಮಿಷ ಸಿತಾರ ವಾದನ ನುಡಿಸಿದ ಮೇಲೆ ಸಂಘಟಕರಿಗೆ ಭರವಸೆ ಬಂದಿತ್ತು. ನಂತರ ಕಛೇರಿಗೆ ಅವಕಾಶ ನೀಡಿದ್ದರು. ಏಕೆಂದರೆ ಆಗ ರವಿಶಂಕರ್ 25 ವರ್ಷದೊಳಗಿದ್ದರು. ಹೀಗಾಗಿ ಸಂಘಟಕರಿಗೆ ನಂಬಿಕೆ ಬಂದಿರಲಿಲ್ಲ ಎಂಬುದನ್ನು ಗಂಗಜ್ಜಿ ಮೆಲುಕು ಹಾಕುತ್ತಿದ್ದರು.

ಕೋಲ್ಕತ್ತದಲ್ಲಿ ಏಳು ದಿನಗಳವರೆಗೆ ನಡೆಯುವ ಸಂಗೀತ ಮಹೋತ್ಸವದಲ್ಲಿ ಪ್ರತಿಯೊಬ್ಬ ಸಂಗೀತಗಾರರು ಮೂರು ದಿನಗಳವರೆಗೆ ಇರಬೇಕಿತ್ತು. ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ಕಾರ್ಯಕ್ರಮವನ್ನು ನೀಡಬೇಕಿತ್ತು.  ಇದನ್ನು ಯಶಸ್ವಿಯಾಗಿ ರವಿಶಂಕರ್ ಕೈಗೊಂಡರು ಎಂದು ಗಂಗಜ್ಜಿ ಜೊತೆಗೆ ಕೋಲ್ಕತ್ತಕ್ಕೆ ಹೋಗಿದ್ದ ಅವರ ಪುತ್ರ ಹಾಗೂ ಹುಬ್ಬಳ್ಳಿ ಆರ್ಟ್ ಸರ್ಕಲ್ ಕಾರ್ಯದರ್ಶಿಯೂ ಆಗಿರುವ ಬಾಬುರಾವ್ ಹಾನಗಲ್ಲ ಮೆಲುಕು ಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.