ADVERTISEMENT

ವರ್ಷದಲ್ಲಿ 1.81 ಲಕ್ಷ ಸಸಿ ನೆಡುವ ಗುರಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 6:26 IST
Last Updated 12 ಜೂನ್ 2013, 6:26 IST

ಹುಬ್ಬಳ್ಳಿ: ಮಳೆಗಾಲ ಆರಂಭದೊಡನೆ ಕೃಷಿ ಚಟುವಟಿಕೆಗೆ ಜೀವ ಬಂದಿದೆ. ಮತ್ತೊಂದೆಡೆ ಅರಣ್ಯ ಇಲಾಖೆ ಸಸಿಗಳನ್ನು ನೆಡುವ ಮೂಲಕ ಹಸಿರು ಹೆಚ್ಚಿಸಲು ಮುಂದಾಗಿದೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ಈ ವರ್ಷ 1.81 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಇಲಾಖೆ ಹೊಂದಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಮೂಲಕವೂ ಸಸಿಗಳನ್ನು ಬೆಳೆಸುವ ಕಾರ್ಯ ಮುಂದುವರಿದಿದೆ.

ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಯನಾಳ ಹಾಗೂ ಬುಡ್ನಾಳ ಸಸ್ಯಕ್ಷೇತ್ರಗಳಲ್ಲಿ ಸದ್ಯ ಸಾವಿರಾರು ಸಸಿಗಳನ್ನು ಪಾಲನೆ ಮಾಡಲಾಗುತ್ತಿದ್ದು, ಈ ಪೈಕಿ ನಿತ್ಯ ನೂರಾರು ಸಸಿಗಳನ್ನು ವಿವಿಧ ಯೋಜನೆಗಳ ಅಡಿ ಅರಣ್ಯೀಕರಣಕ್ಕಾಗಿ ಕೊಂಡೊಯ್ಯಲಾಗುತ್ತಿದೆ.

ರಾಯನಾಳದಲ್ಲಿ 10 ಸಾವಿರ ದೊಡ್ಡ ಗಾತ್ರದ ಸಸಿಗಳು ಹಾಗೂ 1.36 ಲಕ್ಷ ಸಣ್ಣ ಗಾತ್ರದ ಸಸಿಗಳು ಮತ್ತು ಉಳಿದ ಸಸಿಗಳನ್ನು ಬುಡ್ನಾಳ ಕೇಂದ್ರದಲ್ಲಿ ಇಡಲಾಗಿದೆ.

100 ಹೆಕ್ಟೇರ್ ಅರಣ್ಯ ಗುರಿ: `ಪ್ರಸ್ತುತ ವರ್ಷ ಇಲಾಖೆ 100 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಗುರಿ ಹೊಂದಿದೆ. ಇದಕ್ಕಾಗಿ ದೇವರಗುಡಿಹಾಳದಲ್ಲಿ 75 ಹೆಕ್ಟೇರ್ ಮತ್ತು ಚನ್ನಾಪುರದಲ್ಲಿ 25 ಹೆಕ್ಟೇರ್ ಕಾಯ್ದಿಟ್ಟ ಅರಣ್ಯವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ 1.44 ಲಕ್ಷ ಸಸಿಗಳನ್ನು ನೆಡುವ ಕಾರ್ಯವೂ ಈಗಾಗಲೇ ಆರಂಭಗೊಂಡಿದೆ' ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಂ. ಪತ್ತಾರ `ಪ್ರಜಾವಾಣಿ'ಗೆ ತಿಳಿಸಿದರು.

ನಗರದಲ್ಲೂ ಹಸಿರೀಕರಣ
`ನಗರ ಪ್ರದೇಶದಲ್ಲೂ ಸಸಿಗಳನ್ನು ನೆಡುವ ಮೂಲಕ ಹಸಿರು ಮೂಡಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಕಳೆದ ವರ್ಷ ನೃಪತುಂಗ ಬೆಟ್ಟ, ಗೋಕುಲ ರಸ್ತೆ, ರಾಜೀವ ನಗರ, ಅಕ್ಷಯ ಕಾಲೊನಿ, ಮಧುರಾ ಕಾಲೊನಿ ಮೊದಲಾದ ಪ್ರದೇಶಗಳಲ್ಲಿ ಇಲಾಖೆ ಸಸಿಗಳನ್ನು ನೆಟ್ಟಿತ್ತು. ಇದರಲ್ಲಿ ಸಾಕಷ್ಟು ಸಸಿಗಳು ಬೆಳೆದಿವೆ. ಈ ವರ್ಷ ಶಹರ ನೆಡುತೋಪು ಯೋಜನೆಯ ಅಡಿ ನಗರ ಪ್ರದೇಶದಲ್ಲಿ 3,800 ಸಸಿಗಳನ್ನು ನೆಡುವ ಗುರಿಯನ್ನು ಇಲಾಖೆ ಹೊಂದಿದೆ. ನೃಪತುಂಗ ಬೆಟ್ಟ, ಕೆಎಚ್‌ಬಿ ಕಾಲೊನಿ, ರೇಲ್ ನಗರ, ಕಲ್ಮೇಶ್ವರ ನಗರ ಮೊದಲಾದ ಪ್ರದೇಶಗಳಲ್ಲಿ ಸಸಿ ನೆಡಲಾಗುತ್ತಿದೆ'.

`ಸಸಿಗಳನ್ನು ನೆಡುವುದಷ್ಟೇ ಅರಣ್ಯ ಇಲಾಖೆಯ ಕೆಲಸ. ಆದರೆ ಅದನ್ನು ಕಾಪಾಡುವುದು ಸಾರ್ವಜನಿಕರ ಜವಾಬ್ದಾರಿ. ಜನ ಸಸಿಯನ್ನು ಪೋಷಿಸಿದಲ್ಲಿ ಹಸಿರು ಉಳಿಯಲು ಸಾಧ್ಯ ಎನ್ನುವುದು ಇಲಾಖೆ ಅಧಿಕಾರಿಗಳ ಕಾಳಜಿ. ಸಂಘ-ಸಂಸ್ಥೆಗಳು, ಪರಿಸರಪ್ರಿಯರು ಸೂಚಿಸಿದಲ್ಲಿ ಇಲಾಖೆಯು ಸಸಿಗಳನ್ನು ನೆಡಲು ಸಿದ್ಧವಿದ್ದು, ಅದನ್ನು ಕಾಪಾಡಿಕೊಂಡರೆ ಸಾಕು' ಎನ್ನುತ್ತಾರೆ ಅವರು.

ರೈತರ ನೆರವಿಗೆ ಯೋಜನೆ: `ಕೃಷಿ ಅರಣ್ಯವನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಕಳೆದ ವರ್ಷದಿಂದ ಕೃಷಿ ಪ್ರೋತ್ಸಾಹ ಯೋಜನೆಯನ್ನು  ಜಾರಿಗೆ ತಂದಿದೆ. ಈ ಯೋಜನೆಯ ಅಡಿ ಹೆಸರು ನೋಂದಾಯಿಸಿಕೊಳ್ಳುವ ರೈತರಿಗೆ ್ಙ 1 ಹಾಗೂ 3ರ ದರದಲ್ಲಿ ಸಸಿ ವಿತರಿಸಲಾಗುತ್ತದೆ. ಒಂದು ವರ್ಷದ ನಂತರ ಸರ್ವೆ ಕೈಗೊಂಡು ಬೆಳೆದಿರುವ ಪ್ರತಿ ಸಸಿಗೆ ರೂ 10 ಹಾಗೂ ನಂತರದ ಎರಡು ವರ್ಷಗಳಲ್ಲಿ ಕ್ರಮವಾಗಿ ರೂ 15 ಹಾಗೂ 20 ಅನ್ನು ಪ್ರೋತ್ಸಾಹ ಧನವಾಗಿ ವಿತರಿಸುತ್ತದೆ.'

`2011-12ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಈ ಯೋಜನೆಯ ಅಡಿ 32 ಫಲಾನುಭವಿಗಳಿಗೆ 12,760 ಸಸಿ ವಿತರಿಸಲಾಗಿದೆ. ಅಂತೆಯೇ ಒಂದು ವರ್ಷದ ಬಳಿಕ ಒಟ್ಟು ರೂ 34,900 ಪ್ರೋತ್ಸಾಹ ಧನ ನೀಡಲಾಗಿದೆ. 2012-13ನೇ ಸಾಲಿನಲ್ಲಿ 71 ಫಲಾನುಭವಿಗಳಿಗೆ ಒಟ್ಟು 35,220 ಸಸಿಗಳನ್ನು ವಿತರಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಸಮೀಕ್ಷೆ ಕೈಗೊಂಡು ಪ್ರೋತ್ಸಾಹ ಧನ ನೀಡಲಾಗುವುದು' ಎಂದು ಆರ್‌ಎಫ್‌ಒ ಆರ್.ಎಂ. ಪತ್ತಾರ ತಿಳಿಸಿದರು.

ಈ ಯೋಜನೆ ಲಾಭ ಪಡೆಯಬಯಸುವ ರೈತರು ತಮ್ಮ ಜಮೀನಿನ ಆರ್‌ಟಿಸಿ, ತಮ್ಮ ಭಾವಚಿತ್ರ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯೊಡನೆ ನೃಪತುಂಗ ಬೆಟ್ಟದಲ್ಲಿರುವ ಇಲಾಖೆ ಕಚೇರಿ ಅಥವಾ ಮೊಬೈಲ್ ಸಂಖ್ಯೆ 9449863722 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.