ADVERTISEMENT

ವಸತಿ ಯೋಜನೆ: ಐವರು ಪಿಡಿಓಗಳಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 9:15 IST
Last Updated 14 ಏಪ್ರಿಲ್ 2012, 9:15 IST

ನವಲಗುಂದ: ಬಸವ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬೇಜವಾಬ್ದಾರಿ ತೋರಿದರೆ ಅಂಥವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಯೋಜನೆ ಅನುಷ್ಠಾನ ವಿಳಂಬ ಮಾಡಿದ ಐವರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿಯ ತಾ.ಪಂ. ಸಭಾಭವನದಲ್ಲಿ ಏರ್ಪಡಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಬಸವ ವಸತಿ ಯೋಜನೆ ಅನುಷ್ಠಾನ ಕುರಿತು ಚರ್ಚೆ ನಡೆಸಿದರು.

ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ 2010-11ನೇ ಸಾಲಿನಲ್ಲಿ ಪ್ರತಿ ಗ್ರಾಮವನ್ನು ಗುಡಿಸಲು ರಹಿತ ಗ್ರಾಮಗಳನ್ನಾಗಿ ಮಾಡಬೇಕೆಂದು ಸುಮಾರು 2000 ಫಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಪ್ರತಿ ಮನೆಗೆ ರೂ 50 ಸಾವಿರ ಸಹಾಯಧನ ನೀಡುವ ಈ ಯೋಜನೆಯಿಂದಾಗಿ ವಸತಿ ರಹಿತ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸಲಿ ಎಂಬ ಉದ್ದೇಶವಿತ್ತು. ನಮ್ಮ ತಾಲ್ಲೂಕಿಗೆ ಹೆಚ್ಚಿನ ಫಲಾನುಭವಿಗಳ ಪಟ್ಟಿಯನ್ನು ಮಂಜೂರಾತಿ ಪಡೆದಿದ್ದೆವು. ಆದರೆ ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರಲ್ಲದೆ ವಿಳಂಬ ಮಾಡಿದ ತಾಲ್ಲೂಕಿನ ಶಲವಡಿ, ಶಿಶ್ವಿನಹಳ್ಳಿ, ತುಪ್ಪದ ಕುರಹಟ್ಟಿ, ಇಬ್ರಾಹಿಂಪುರ ಹಾಗೂ ಹಾಲಕುಸುಗಲ್ಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಿದರು.

ಕೆಲವೆಡೆ ಗ್ರಾ.ಪಂ. ಸದಸ್ಯರ ಒತ್ತಡದಿಂದಾಗಿ ಅಧಿಕಾರಿಗಳು ನಿಯಮಾನುಸಾರ ಫಲಾನುಭವಿಗಳನ್ನು ಆಯ್ಕೆ ಮಾಡದ್ದರಿಂದ ಶೇ 30ರಷ್ಟು ಫಲಾನುಭವಿಗಳು ಅನರ್ಹಗೊಳ್ಳುವಂತಾಗಿದೆ. ರಾಜಕೀಯ ಒತ್ತಡಕ್ಕೆ ಮಣಿಯಬಾರದೆಂದು ಮೊದಲೇ ಸೂಚನೆ ನೀಡಿದ್ದರೂ ಅಧಿಕಾರಿಗಳು ಮೇಲಿಂದ ಮೇಲೆ ತಪ್ಪು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಗ್ರಾ.ಪಂ. ಫಲಾನುಭವಿಗಳ ಪಟ್ಟಿ ಹಾಗೂ ನಿರ್ಮಾಣದ ಹಂತದಲ್ಲಿರುವ ಮನೆಗಳನ್ನು ಸಮೀಕ್ಷೆ ನಡೆಸಲು ತಂಡ ರಚಿಸಿ 10 ದಿನದ ಒಳಗಾಗಿ ವರದಿ ಸಲ್ಲಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಮೀಕ್ಷಾ ತಂಡದಲ್ಲಿ ತಾ.ಪಂ. ಅಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿ, ಲೋಕೋಪಯೋಗಿ ಹಾಗೂ ಜಿ.ಪಂ. ಎಂಜಿನಿಯರ್ ತಂಡದಲ್ಲಿ ಇರಬೇಕೆಂದು ಹೇಳಿದರು.

ರೂ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಮೊರಾರ್ಜಿ ವಸತಿ ಶಾಲೆ ಕಟ್ಟಡಗಳ ಕಾಮಗಾರಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿ.ಪಂ.ಅಧ್ಯಕ್ಷ ಅಡಿವೆಪ್ಪ ಮನಮಿ ಮಾತನಾಡಿದರು.

ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕೆರಿಮನಿ, ಉಪಾಧ್ಯಕ್ಷೆ ಗೌರಮ್ಮ ಬಡಿಗೇರ, ಜಿ.ಪಂ. ಸದಸ್ಯರಾದ ಶಾಂತಾದೇವಿ ನಿಡವಣಿ, ಫಕ್ಕಿರಪ್ಪ ಜಕ್ಕಣ್ಣವರ, ಹುಬ್ಬಳ್ಳಿ ಗ್ರಾಮೀಣ ಕಾರ್ಯ ನಿರ್ವಾಹಕ ಅಧಿಕಾರಿ ಎನ್.ಬಿ.ಗಂಗಲ ಉಪಸ್ಥಿತರಿದ್ದರು.

ಕಾಮಗಾರಿ ಚಿತ್ರೀಕರಣಕ್ಕೆ ಆದೇಶ
ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡುವ ಹಂತದಿಂದ ಹಿಡಿದು ಮನೆಗಳ ನಿರ್ಮಾಣ ಹಂತದ ವರೆಗಿನ ಕಾಮಗಾರಿವರೆಗೆ ಎಲ್ಲವನ್ನೂ ವಿಡಿಯೊ ಚಿತ್ರೀಕರಣ ಮಾಡಿ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.