ADVERTISEMENT

ವಿದ್ಯಾರ್ಥಿಗಳ ಹೊಟ್ಟೆಗೆ ತಣ್ಣೀರ ಬಟ್ಟೆ!

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:15 IST
Last Updated 3 ಅಕ್ಟೋಬರ್ 2012, 5:15 IST

ಧಾರವಾಡ: ಗಾಂಧಿ ಜಯಂತಿಯ ದಿನವಾದ ಮಂಗಳವಾರ ಇಲ್ಲಿಯ ಸಮಾಜ ಕಲ್ಯಾಣ ಇಲಾಖೆ ನಡೆಸುವ ಬಸವ ನಗರ ಹಾಸ್ಟೆಲ್‌ನಲ್ಲಿ ಬೆಳಗಿನ ಉಪಾಹಾರ ನೀಡದೇ ಇರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್ ವಾರ್ಡನ್, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಊಟವನ್ನು ಸಮರ್ಪಕವಾಗಿ ನೀಡುವ ಬಗ್ಗೆ ನೀಡಿದ್ದ ಭರವಸೆಗಳು ಈಡೇರಿಲ್ಲ. ಊಟ ಪೂರೈಕೆ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ವಿದ್ಯಾರ್ಥಿಗಳು ಎರಡು ಗಂಟೆಗಳವರೆಗೆ ಪಟ್ಟು ಹಿಡಿದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಕುಳಿತರು.

ಗ್ಯಾಸ್ ದರ ಏರಿಕೆಯಾಗಿದೆ ಎಂಬ ನೆಪವೊಡ್ಡಿ ಕಳೆದ ಐದು ದಿನಗಳಿಂದಲೂ ಬರೀ ಅನ್ನ ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಚಪಾತಿ ಪಲ್ಯ ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಬಂದು ದೂರುಗಳನ್ನು ಆಲಿಸಿ, ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅಶೋಕ ಚಲವಾದಿ ಅವರಿಗೆ ಸೂಚನೆ ನೀಡಿದರು. ಆಗಲೂ ವಿದ್ಯಾರ್ಥಿಗಳು ಹೋರಾಟವನ್ನು ಹಿಂದಕ್ಕೆ ಪಡೆಯದೇ, ಈ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ಮತ್ತೆ ಪಟ್ಟು ಹಿಡಿದರು.

ಬೆಳಿಗ್ಗೆಯಿಂದಲೂ ಏನೂ ತಿಂದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದರಿಂದ ಬೀಳಗಿ ಅವರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, `ನೀವೂ ಗ್ಯಾಸ್ ಇಲ್ಲವೆಂದು ಹಸಿವಿನಿಂದ ಇರುತ್ತಿದ್ದಿರಾ? ಕೂಡಲೇ ಸಮಸ್ಯೆಯನ್ನು ಬಗೆಹರಿಸಿ~ ಎಂದು ನಿರ್ದೇಶನ ನೀಡಿದರು.

ಅಶೋಕ ಚಲವಾದಿ, `ಅಡುಗೆ ಸಿಬ್ಬಂದಿ ಎಲ್ಲಿಗೋ ಓಡಿ ಹೋಗಿದ್ದಾರೆ. ಬೇರೆ ಅಡುಗೆಯವರನ್ನು ಕರೆತಂದಿದ್ದೇವೆ. ಒಂದು ಗಂಟೆಯಲ್ಲಿ ಊಟ ಪೂರೈಸುತ್ತಾರೆ~ ಎಂದು ಭರವಸೆ ನೀಡಿದರೂ ವಿದ್ಯಾರ್ಥಿಗಳು ಕೇಳಲಿಲ್ಲ.

ಎಐಡಿಎಸ್‌ಓ ಬೆಂಬಲ: ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (ಎಐಡಿಎಸ್‌ಓ) ಜಿಲ್ಲಾ ಅಧ್ಯಕ್ಷ ಗಂಗಾಧರ ಬಡಿಗೇರ, `ಬೇರೆ ಬೇರೆ ಭಾಗಗಳಿಂದ ಅಧ್ಯಯನಕ್ಕೆಂದು ಬಂದ ವಿದ್ಯಾರ್ಥಿಗಳಿಗೆ ಕನಿಷ್ಟ ಊಟವನ್ನೂ ಹಾಕದ ಸಮಾಜ ಕಲ್ಯಾಣ ಇಲಾಖೆಯು ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣವಾಗಿ ಸೋತಿದೆ.

ಹಾಸ್ಟೆಲ್‌ಗಳಿಗೆ ವಿದ್ಯಾರ್ಥಿಗಳ ಆಯ್ಕೆಪಟ್ಟಿಯನ್ನೂ ಎರಡು ತಿಂಗಳಷ್ಟು ತಡವಾಗಿ ಪ್ರಕಟಿಸಿ ಸಮಸ್ಯೆ ಸೃಷ್ಟಿಸಿದ ಇಲಾಖೆಯು ಇದೀಗ ಊಟವನ್ನೂ ಹಾಕುತ್ತಿಲ್ಲ. ಇದು ಬಸವ ನಗರ ಹಾಸ್ಟೆಲ್‌ನ ಸಮಸ್ಯೆಯಷ್ಟೇ ಅಲ್ಲ. ಇತರ ಹಾಸ್ಟೆಲ್‌ಗಳ ಸಮಸ್ಯೆಯೂ ಆಗಿದೆ. ಆದ್ದರಿಂದ ಸಮಸ್ಯೆ ಮರುಕಳಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು~ ಎಂದು ಒತ್ತಾಯಿಸಿದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.