ADVERTISEMENT

ವಿದ್ಯುತ್‌ ಕಂಬದಲ್ಲೇ ಇಬ್ಬರು ಗುತ್ತಿಗೆ ಕಾರ್ಮಿಕರ ಸಾವು

ಏಕಾಏಕಿ ತಂತಿಯಲ್ಲಿ ಪ್ರವಹಿಸಿದ ವಿದ್ಯುತ್‌: ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ– ಆರೋಪ

​ಪ್ರಜಾವಾಣಿ ವಾರ್ತೆ
Published 9 ಮೇ 2018, 10:10 IST
Last Updated 9 ಮೇ 2018, 10:10 IST
ಏಕಾಏಕಿ ವಿದ್ಯುತ್‌ ಸಂಪರ್ಕ ನೀಡಿದ್ದರಿಂದ ಶಾಕ್‌ ಹೊಡೆದು ಕಂಬದ ಮೇಲೆಯೇ ನೇತಾಡಿದ ಕಾರ್ಮಿಕನ ಶವ
ಏಕಾಏಕಿ ವಿದ್ಯುತ್‌ ಸಂಪರ್ಕ ನೀಡಿದ್ದರಿಂದ ಶಾಕ್‌ ಹೊಡೆದು ಕಂಬದ ಮೇಲೆಯೇ ನೇತಾಡಿದ ಕಾರ್ಮಿಕನ ಶವ   

ಹುಬ್ಬಳ್ಳಿ: ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ವೈರಿಂಗ್‌ ವೇಳೆ, ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಇಬ್ಬರು ಗುತ್ತಿಗೆ ಕಾರ್ಮಿಕರು ಮಂಗಳವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕರಡಿಕೊಪ್ಪ ಗ್ರಾಮದ ಸಂಗಪ್ಪ ಬಸಪ್ಪ ಸಿದ್ಲಿಂಗನವರ (29) ಹಾಗೂ ಮಹಾದೇವಪ್ಪ ಬಾಬಣ್ಣ ಬಾಬಣ್ಣವರ (28) ಮೃತಪಟ್ಟವರು.

ಇಲ್ಲಿನ ಕಿಮ್ಸ್‌ ಆಸ್ಪತ್ರೆಯ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ವಿದ್ಯುತ್‌ ಗ್ರಿಡ್‌ನಿಂದ ನಗರದ ವಿವಿಧೆಡೆ ಸಂಪರ್ಕ ಜಾಲ ಅಳವಡಿಸುವ ಕಾರ್ಯ ನಡೆದಿತ್ತು. ಗುತ್ತಿಗೆದಾರ ವಿಜಯಕುಮಾರ್‌ ಗುಡ್ಡದ ಬಳಿ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಈ ಇಬ್ಬರೂ ಕಾರ್ಮಿಕರು ಸುರಕ್ಷತಾ ಪರಿಕರಗಳಿಲ್ಲದೇ ಕಂಬ ಏರಿದ್ದರು.

ADVERTISEMENT

‘ಕೆಲಸ ನಡೆಯುತ್ತಿರುವ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತಾದರೂ ವಿದ್ಯುತ್‌ ಹರಿಸಲಾಗಿದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಇಬ್ಬರೂ ತಂತಿಯ ಮೇಲೆ ಜೋತಾಡುತ್ತಿದ್ದರು’ ಎಂದು ಪ್ರತ್ಯಕ್ಷದರ್ಶಿ ಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ಸುದ್ದಿ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಮಿಕರ ಶವಗಳನ್ನು ಕೆಳಕ್ಕೆ ಇಳಿಸಿದರು.ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಹೆಸ್ಕಾಂ ನಿರ್ದೇಶಕ (ತಾಂತ್ರಿಕ) ಪ್ರಕಾಶ್‌ ಕುಮಾರ್‌, ‘ಇಬ್ಬರು ಕಾರ್ಮಿಕರು ವಿದ್ಯುತ್‌ ಆಘಾತದಿಂದ ಮೃತಪಟ್ಟಿದ್ದಾರೆ. ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸುತ್ತೇನೆ’ ಎಂದರು.

ಹೆಸ್ಕಾಂ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದ ವಿರುದ್ಧ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡದ ಹೆಸ್ಕಾಂ ಅಧಿಕಾರಿ ಹುಬ್ಬಳ್ಳಿ: ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಂಡ ಅಮಾಯಕ ಕಾರ್ಮಿಕರ ಜೀವ ಇಷ್ಟೊಂದು ಅಗ್ಗವೇ?

ಇಂಥದೊಂದು ಪ್ರಶ್ನೆಯನ್ನು ಇಲ್ಲಿನ ಕಿಮ್ಸ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಮಂಗಳವಾರದ ಪರಿಸ್ಥಿತಿ ಕಂಡಾಗ ಆಸ್ಪತ್ರೆಯಲ್ಲಿದ್ದ ಜನರು ಕೇಳುತ್ತಿದ್ದರು.

ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್‌ ಪ್ರವಹಿಸಿ ಸಾವಿಗೀಡಾದ ಕರಡಿಕೊಪ್ಪ ಗ್ರಾಮದ ಸಂಗಪ್ಪ ಸಿದ್ಲಿಂಗನವರ ಹಾಗೂ ಮಹಾದೇವಪ್ಪ ಬಾಬಣ್ಣವರ ಅವರ ಶವವನ್ನು ನೋಡಲು ಕೆಲಸಕ್ಕೆ ನಿಯೋಜಿಸಿದ್ದ ಗುತ್ತಿಗೆದಾರ ವಿಜಯಕುಮಾರ್‌ ಗುಡ್ಡದ ಹಾಗೂ ಮೂಲ ಉದ್ಯೋಗದಾತ ಸಂಸ್ಥೆ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ)ಯ ಯಾವೊಬ್ಬ ಅಧಿಕಾರಿಯೂ ಬಂದಿರಲಿಲ್ಲ. ಇದು ಇಬ್ಬರೂ ಬಡ ಕಾರ್ಮಿಕರ ಕುಟುಂಬದವರಲ್ಲಿ ಆಕ್ರೋಶ ಮೂಡಿಸಿತ್ತು.

ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದ ತಕ್ಷಣವೇ ಶವಗಳನ್ನು ಕೆಳಗಿಳಿಸಿ ಕಿಮ್ಸ್‌ಗೆ ತರಲಾಯಿತು. ಆದರೆ, ಅವರನ್ನು ನಿಯೋಜಿಸಿದ್ದ ವಿದ್ಯುತ್‌ ಗುತ್ತಿಗೆದಾರ ಗುಡ್ಡದ, ಗೋಪನಕೊಪ್ಪ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಂಜನಪ್ಪ ಸೇರಿದಂತೆ ಹೆಸ್ಕಾಂನ ಉನ್ನತ ಅಧಿಕಾರಿಗಳು ಭೇಟಿ ನೀಡಲಿಲ್ಲ. ಅಧಿಕಾರಿಗಳು ಬರಬೇಕು ಎಂದು ವಿದ್ಯುತ್‌ ಗುತ್ತಿಗೆ ಕಾರ್ಮಿಕರು ಹಾಗೂ ಕುಟುಂಬದವರು ಪಟ್ಟು ಹಿಡಿದು ಗಲಾಟೆ ನಡೆಸಿದರಾದರೂ ಯಾರೂ ಇತ್ತ ಬರಲಿಲ್ಲ ಎಂದು ಮೃತ ಕಾರ್ಮಿಕ ಮಹಾದೇವಪ್ಪ ಸಂಬಂಧಿ ಅಶೋಕ ದೂರಿದರು.

ಘಟನೆ ಕುರಿತು ಮಾಹಿತಿ ಪಡೆಯಲು ಎಇಇ ಆಂಜನಪ್ಪ ಅವರನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಹಲವು ಬಾರಿ ಪ್ರಯತ್ನಿಸಿತಾದರೂ ಅವರು ‘ವ್ಯಾಪ್ತಿ ಪ್ರದೇಶದ ಹೊರಗಿದ್ದರು’!. ಕಾರ್ಮಿಕರ ವಾರಸುದಾರರು ಬರುವುದು ತಡವಾಗಿದ್ದರಿಂದ ಬುಧವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.