ADVERTISEMENT

ಸಂಯಮದಿಂದ ಕೆಲಸ ನಿರ್ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:35 IST
Last Updated 22 ಫೆಬ್ರುವರಿ 2012, 8:35 IST

ಧಾರವಾಡ: `ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಕುಟುಂಬಗಳಿಗೆ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ಪರಿಹಾರ ನೀಡಲು ಹಾಗೂ ಪುನರ್‌ವಸತಿ ಕಲ್ಪಿಸಲು ಸಂಬಂಧಿತ ಇಲಾಖೆಗಳು ನಿರಂತರ ಸಂಪರ್ಕದಲ್ಲಿದ್ದು ನೆರವು ನೀಡಬೇಕು~ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದರು.

ಇಲ್ಲಿನ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಶನಿವಾರ ಆಯೋಜಿಸಿದ್ದ ದೌರ್ಜನ್ಯ ಪ್ರತಿಬಂಧ ಕಾಯ್ದೆ, ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ ಕುರಿತ ಜಾಗೃತಿ, ಅನುಷ್ಠಾನ ಹಾಗೂ ಸೂಕ್ತ ಪರಿಹಾರೋಪಾಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಈ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಆಡಳಿತ ಪ್ರಥಮ ಬಾರಿಗೆ ಪ್ರಯತ್ನ ಮಾಡಿದೆ. ವಿವಿಧ ದಲಿತ ಸಂಘಟನೆಗಳು ಭಾಗವಹಿಸಿ ಕಾನೂನು ತಿಳಿವಳಿಕೆ ಪಡೆಯಬೇಕು. ಇಂಥ ಪ್ರಕರಣಗಳ ಹಿನ್ನೆಲೆಯಲ್ಲಿ ಕಂದಾಯ, ಸಮಾಜ ಕಲ್ಯಾಣ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಸಮನ್ವಯದಿಂದ ಕೆಲಸ ಮಾಡಿ ನೆರವು ನೀಡಬೇಕು ಎಂದರು.

ಮುಂದಿನ ತಿಂಗಳಿನಿಂದ ಧಾರವಾಡ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕರ್ನಟಕ ಸೇವಾ ಖಾತರಿ ಕಾಯ್ದೆ- 2011 ಅನ್ನು ಸರ್ಕಾರ ಜಾರಿಗೆ ತರಲಿದೆ. ಈ ಕಾಯ್ದೆಯಡಿ ನಾಗರಿಕರ ಸೇವೆ ಕುರಿತು ಹಲವಾರು ಕಾರ್ಯಕ್ರಮಗಳು ಜಾರಿಗೊಳ್ಳಲಿವೆ. ಈ ಕಾಯ್ದೆಯಡಿ ನಿಗದಿತ ಅವಧಿಯಲ್ಲಿ ನಾಗರಿಕರಿಗೆ ಔಲಭ್ಯಗಳು ದೊರಕಬೇಕು, ಇದೊಂದು ಮಹತ್ವದ ಕಾಯ್ದೆಯಾಗಿದ್ದು, ಇದರ ಅಡಿ ಅನುಸೂಚಿತ ಜಾತಿಯವರಿಗೆ ಮೀಸಲಿಟ್ಟ ಶೇ. 22.5 ಅನುದಾನ ಬಳಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಎ.ಆರ್.ಪಾಟೀಲ ಅವರು ದೌರ್ಜನ್ಯ ಪ್ರತಿಬಂಧ ಕಾಯ್ದೆ- 1999, ಡಿಎಸ್‌ಪಿ ಬೆಳ್ಳುಬ್ಬಿ ಅವರು ದೌರ್ಜನ್ಯ ಪ್ರಕರಣಗಳು, ಉಪವಿಭಾಗಾಧಿಕಾರಿ ಶಿವಾನಂದ ಕಾಪಸಿ ಅವರು ಪಿಟಿಸಿಎಲ್ ಕಾಯ್ದೆ- 1979, ಪಾಲಿಕೆ ವಿಶೇಷ ಅಧಿಕಾರಿ ನರೇಗಲ್ ಶೇ. 22.5 ಅನುದಾನ ಬಳಕೆ ಹಾಗೂ ಸರ್ಕಾರದ ಸೌಲಭ್ಯಗಳು, ನೀಲೂಪಂತ ಅವರು ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ- 1955 ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಅಧಿಕಾರಿ ಎಸ್.ಎ.ಮುಲ್ಲಾ ಸ್ವಾಗತಿಸಿದರು.

ಸಂವಾದ ನಾಳೆ
ಧಾರವಾಡ:ಇಲ್ಲಿನ ಸೆಂಟರ್ ಫಾರ್ ಮಲ್ಟಿ- ಡಿಸಿಪ್ಲಿನರಿ ಡೆವಲಪ್‌ಮೆಂಟ್ ರಿಸರ್ಚ್ ಸಂಸ್ಥೆ ಇದೇ 23ರಂದು ಡಾ. ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನ ಕುರಿತು ಜನಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಂದು ಬೆಳಿಗ್ಗೆ 11.30ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಡಿವೆಪ್ಪ ಮನಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ ಆಗಮಿಸುವರು. ಡಾ. ಪಿ.ಆರ್.ಪಂಚಮುಖಿ ಅಧ್ಯಕ್ಷತೆ ವಹಿಸುವರು. ಪ್ರೊ. ಅಬ್ದುಲ್ ಅಜೀಜ್, ಪ್ರೊ. ಜಿ.ಕೆ.ಕಡೆಕೋಡಿ, ಪ್ರೊ. ಛಾಯಾ ದೇಗಾಂವಕರ್, ಪ್ರೊ. ಎಂ.ಸಿ.ಕೊಡ್ಲಿ, ಪ್ರೊ. ಆರ್.ಡಿ.ದಾಡಿಭಾವಿ, ಪ್ರೊ. ಎನ್.ಜಿ.ಚಚಡಿ, ಪ್ರೊ. ಪುಷ್ಪಾ ಸವದತ್ತಿ, ಪ್ರೊ. ಎಂ.ಆರ್.ಚಂದಾವರಕರ ಸಂವಾದದಲ್ಲಿ ಭಾಗವಹಿಸುವರು. ಜಿಪಂ, ತಾಪಂ ಸದಸ್ಯರು ಹಾಗೂ ಸಿಬ್ಬಂದಿ ಸಹ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.