ಹುಬ್ಬಳ್ಳಿ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿ ಸದಾಶಿವ ಆಯೋಗ ವರದಿ ವಿರೋಧಿ ಹೋರಾಟ ಒಕ್ಕೂಟದ ಸದಸ್ಯರು ಹುಬ್ಬಳ್ಳಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬೆಳಿಗ್ಗೆ ಸುಮಾರು 11 ಗಂಟೆಗೆ ವಿವಿಧ ಕಡೆಗಳಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರ ಕೈಯಲ್ಲಿ `ಸದಾಶಿವ ಆಯೋಗಕ್ಕೆ ಧಿಕ್ಕಾರ~, `ದಲಿತರನ್ನು ಒಡೆದು ಆಳುವ ನೀತಿಗೆ ಧಿಕ್ಕಾರ~ ಎಂಬಿತ್ಯಾದಿ ಘೋಷಣೆಗಳು ರಾರಾಜಿಸಿದವು. ಕೆಲವೇ ಕ್ಷಣಗಳಲ್ಲಿ ಚನ್ನಮ್ಮ ವೃತ್ತವನ್ನು ಸುತ್ತುವರಿದ ಪ್ರತಿಭಟನಕಾರರು ಸದಾಶಿವ ಆಯೋಗದ ವಿರುದ್ಧ ರೋಷ ವ್ಯಕ್ತಪಡಿಸಿದರು. ಮಧ್ಯದಲ್ಲಿ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಅದನ್ನೇ ವೇದಿಕೆಯನ್ನಾಗಿ ಮಾಡಿಕೊಂಡ ಮುಖಂಡರು ವರದಿಯನ್ನು ತಿರಸ್ಕರಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಸಬರಿಕೆ, ಕಟ್ಟಿಗೆ ಮತ್ತಿತರ ವೃತ್ತಿಗೆ ಸಂಬಂಧಪಟ್ಟ ವಿವಿಧ ಸಾಮಗ್ರಿಗಳು ಹಾಗೂ ಹಂದಿಗಳೊಂದಿಗೆ ಆಗಮಿಸಿದ ಪ್ರತಿಭಟನಾಕಾರರು ವೇಷಭೂಷಣಗಳನ್ನು ತೊಟ್ಟುಕೊಂಡು ನೃತ್ಯವಾಡಿದರು. ಸದಾಶಿವ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ವರದಿಯನ್ನು ತಕ್ಷಣ ತಿರಸ್ಕರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದ ಪರಿಶಿಷ್ಟ ಜಾತಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಲು ರಚಿಸಲಾಗಿದ್ದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಮೊದಲ ಐದು ವರ್ಷ ಯಾವುದೇ ಕೆಲಸ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ 11.12 ಕೋಟಿ ರೂಪಾಯಿ ಮಂಜೂರು ಮಾಡಿತ್ತು. ನಂತರ ಒಂದೇ ವರ್ಷದಲ್ಲಿ ತರಾತುರಿಯಲ್ಲಿ ವರದಿ ಸಿದ್ಧಪಡಿಸಲಾಯಿತು. ಇದು ಪೂರ್ವಗ್ರಹಪೀಡಿತ ವರದಿಯಾಗಿದ್ದು ಪಟ್ಟಭದ್ರ ಹಿತಾಸಕ್ತಿಗಳು ಇದರ ಹಿಂದೆ ಕೆಲಸ ಮಾಡಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
`ವರದಿಯಲ್ಲಿ ಅವೈಜ್ಞಾನಿಕ, ಅಸಾಂವಿಧಾನಿಕ ಹಾಗೂ ರಾಜಕೀಯ ಪ್ರೇರಿತ ಅಂಶಗಳಿವೆ. ಪರಿಶಿಷ್ಟ ಜಾತಿಯಲ್ಲಿ ಒಡಕು ಉಂಟುಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಪರಿಶಿಷ್ಟ ಜಾತಿಯವರನ್ನು ಒಟ್ಟು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಸ್ಪರ್ಶಿತರು ಹಾಗೂ ಅಸ್ಪೃಶ್ಯರು ಎಂಬ ಅಸಾಂವಿಧಾನಿಕ ಪದಗಳನ್ನು ಬಳಸಲಾಗಿದೆ. ಇದು ಖಂಡನೀಯ~ ಎಂದು ದೂರಲಾಗಿದೆ.
ಆಯೋಗ ತನ್ನ ಅಧಿಕಾರದ ವ್ಯಾಪ್ತಿ ಮೀರಿ ಸಂವಿಧಾನದ ಪ್ರಕಾರ ಲಭ್ಯವಾಗಿರುವ ಮೀಸಲಾತಿಯನ್ನು ಮರುವಿಂಗಡಣೆ ಮಾಡುವಂತೆ ಶಿಫಾರಸು ಮಾಡಿದೆ. ಇದರಿಂದ ಪರಿಶಿಷ್ಟ ಜಾತಿಯ ಮುಂದಿನ ಪೀಳಿಗೆಯ ಜನರು ಬೀದಿಗೆ ಬೀಳುವ ಸಾಧ್ಯತೆ ಇದೆ.
ಒಳಮೀಸಲಾತಿ ಎಂದರೆ ಪರಿಶಿಷ್ಟ ಜಾತಿಯ ಎರಡು ಸಮುದಾಯಗಳಿಗೆ ಮಾತ್ರ ಸಂಬಂಧಪಟ್ಟದ್ದು ಎಂದು ಆಯೋಗ ತಿಳಿದುಕೊಂಡಂತಿದೆ. ಈ ಅಭಿಪ್ರಾಯದಿಂದಾಗಿ ತೀರಾ ಕೆಳಮಟ್ಟದ ಜೀವನ ನಡೆಸುವ ವಿಭಾಗಗಳು ಸಂಕಷ್ಟಕ್ಕೆ ಸಿಲುಕಲಿವೆ. ಇಂಥ ವರದಿ ಜಾರಿಯಾದರೆ ಪರಿಶಿಷ್ಟ ಜಾತಿಯ 99 ಜಾತಿಯ ಜನರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗಲಾರದು. ಹೀಗಾಗಿ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಚಿತ್ರದುರ್ಗದ ಸೇವಾಲಾಲ ಸರ್ದಾರ ಬಂಜಾರ ಗುರುಪೀಠದ ಶ್ರೀಗಳು, ಹುಬ್ಬಳ್ಳಿಯ ತಿಪ್ಪೇಶ್ವರ ಶ್ರೀಗಳು, ಮಾಜಿ ಮೇಯರ್‌ಗಳಾದ ವೆಂಕಟೇಶ ಮೇಸ್ತ್ರಿ, ದಾನಪ್ಪ ಕಬ್ಬೇರ, ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಸ್ಯೆ ಲಕ್ಷ್ಮಿ ಬಿಜವಾಡ, ಮಾಜಿ ಸದಸ್ಯ ಯಮನೂರ ಗುಡಿಹಾಳ, ಮುಖಂಡರಾದ ಮುತ್ತುರಾಜ ಮಾಕಡವಾಲೆ, ಪಾಂಡುರಂಗ ಪಮ್ಮಾರ, ಲಕ್ಷ್ಮಣ ಕರಿ, ಡಿ.ಡಿ. ಮಂಚಣ್ಣವರ, ವಾ.ಭಿ. ಭಜಂತ್ರಿ, ಶಿವಾನಂದ ಕೊಣ್ಣೂರು ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.