ADVERTISEMENT

ಸಮವಸ್ತ್ರ ಖರೀದಿ ಟೆಂಡರ್‌ನಲ್ಲಿ ಅವ್ಯವಹಾರ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 7:58 IST
Last Updated 17 ಜೂನ್ 2018, 7:58 IST

ಹುಬ್ಬಳ್ಳಿ: ‘ಶಾಲಾ ಅಭಿವೃದ್ಧಿ ಸಮಿತಿಗೆ (ಎಸ್‌ಡಿಎಂಸಿ) ಇದ್ದ ಶಾಲಾ ಮಕ್ಕಳ ಸಮವಸ್ತ್ರ ಖರೀದಿ ಅಧಿಕಾರವನ್ನು ಕಿತ್ತುಕೊಂಡು ದೊಡ್ಡ ಕಂಪನಿಗಳಿಗೆ ನೀಡಲು ಟೆಂಡರ್‌ ಕರೆದಿರುವುದು ಸರಿಯಲ್ಲ. ಇದರ ಹಿಂದೆ ಅವ್ಯವಹಾರ ನಡೆದಿರುವ ಶಂಕೆ ಇದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಆರೋಪಿಸಿದರು.

‘ದೊಡ್ಡ ಕಂಪನಿಗಳಿಂದ ಅಧಿಕಾರಿಗಳು ಕಮಿಷನ್‌ ಪಡೆದು ಜೂನ್‌ 7ರಂದು ಸಮವಸ್ತ್ರ ಖರೀದಿಗೆ ₹ 96 ಕೋಟಿ ಮೊತ್ತದ ಟೆಂಡರ್‌ ಕರೆದಿದ್ದಾರೆ. ಇದನ್ನು ಕೂಡಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರದ್ದುಪಡಿಸಬೇಕು. ಇಲ್ಲದಿದ್ದರೆ, ನೀವೂ ಭಾಗಿಯಾಗಿದ್ದೀರಿ ಎಂದು ಭಾವಿಸಬೇಕಾಗುತ್ತದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸ್ಥಳೀಯವಾಗಿ ಬಟ್ಟೆ ಖರೀದಿಸುತ್ತಿದ್ದಾಗ ಸಾವಿರಾರು ಜನರಿಗೆ ಉದ್ಯೋಗ ದೊರೆಯುತ್ತಿತ್ತು. ಈಗ ಅವರಿಗೆ ಉದ್ಯೋಗವಿಲ್ಲದಂತಾಗಿದೆ. ಕೇಂದ್ರದ ಸರ್ವ ಶಿಕ್ಷಣ ಅಭಿಯಾನದ ನಿಯಮ ಪ್ರಕಾರ ಎಸ್‌ಡಿಎಂಸಿ ಗಳಿಗೆ ನೀಡಬೇಕು ಎಂದಿದೆ. ನಿಯಮ ಉಲ್ಲಂಘಿಸಿರುವುದನ್ನು ಕೇಂದ್ರದ ಗಮನಕ್ಕೆ ತರಲಾಗುವುದು’ ಎಂದರು.

ADVERTISEMENT

‘ಮಲೇಷ್ಯಾದಿಂದ ಮರಳು ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯಕ್ಕೂ ದೂರು ಸಲ್ಲಿಸಿದ್ದೆ. ಮಾಹಿತಿ ಸಂಗ್ರಹಿಸುವ ಕೆಲಸವನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಆ ಹೋರಾಟವನ್ನು ಮುಂದುವರಿಸಲಾಗುವುದು’ ಎಂದು ಹೇಳಿದರು.

‘ಫಸಲ್‌ ಭಿಮಾ ಯೋಜನೆಯಲ್ಲಿ ಹುಬ್ಬಳ್ಳಿಯ ಸುತ್ತಲಿನ 22 ಗ್ರಾಮಗಳನ್ನು ಒಂದೇ ಘಟಕವಾಗಿ ಪರಿಗಣಿಸಲಾಗಿದೆ.  ಒಂದೆರಡು ಗ್ರಾಮಗಳಲ್ಲಿ ಮಳೆಯಾದರೆ, ಉಳಿದ ಗ್ರಾಮಗಳವರಿಗೂ ಪರಿಹಾರ ಸಿಗುವುದಿಲ್ಲ. ಐದಾರು ಘಟಕಗಳೆಂದು ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಸರ್ಕಾರ ಒಂದೇ ವರ್ಷ ಸುಭದ್ರವಾಗಿರಲಿದೆ ಎಂದಿದ್ದಾರೆ. ಕೇಂದ್ರದಲ್ಲಿ ಎಚ್‌.ಡಿ. ದೇವೇಗೌಡ, ಚಂದ್ರಶೇಖರ್‌ ಸರ್ಕಾರಕ್ಕೆ ಬೇಷರತ್‌ ಬೆಂಬಲ ನೀಡಿದ್ದ ಕಾಂಗ್ರೆಸ್‌, ವರ್ಷದಲ್ಲಿಯೇ ಬೆಂಬಲ ಹಿಂತೆಗೆದುಕೊಂಡಿತ್ತು. ರಾಜ್ಯದಲ್ಲಿಯೂ ಹಾಗೆಯೇ ಮಾಡಲಿದೆ’ ಎಂದು ಭವಿಷ್ಯ ನುಡಿದರು.

ಮಲೇಷ್ಯಾದಿಂದ ಮರಳು ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದೆ, ಹೋರಾಟ ಮುಂದುವರಿಯಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.