ADVERTISEMENT

ಸಾವು-ಬದುಕಿನ ನಡುವೆ ಅಥ್ಲೀಟ್

​ಪ್ರಜಾವಾಣಿ ವಾರ್ತೆ
Published 28 ಜೂನ್ 2012, 9:55 IST
Last Updated 28 ಜೂನ್ 2012, 9:55 IST
ಸಾವು-ಬದುಕಿನ ನಡುವೆ ಅಥ್ಲೀಟ್
ಸಾವು-ಬದುಕಿನ ನಡುವೆ ಅಥ್ಲೀಟ್   

ಹುಬ್ಬಳ್ಳಿ: ಚಿಗರೆಯಂತೆ ಓಡುತ್ತಾ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದ ದೂರದ ಓಟಗಾರ್ತಿ ಕಲ್ಲವ್ವ ಸಿಂಧೋಗಿ ಇದೀಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ. ಆಕೆಯನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಆಕೆ, ಈ ವರ್ಷವಷ್ಟೇ ಪದವಿ ಪೂರೈಸಿದ್ದಾಳೆ. ರಾಷ್ಟ್ರೀಯ ಕಿರಿಯರ ಶಿಬಿರಕ್ಕೆ ಆಯ್ಕೆಯಾಗಿದ್ದ ಕಲ್ಲವ್ವ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದಳು. ಕಳೆದ ಸಲದ ಕರ್ನಾಟಕ ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲೂ ಆಕೆ ಬಂಗಾರದ ಪದಕ ಗಳಿಸಿದ್ದಳು.

ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರಿಂದ ಆಕೆ ಅಸ್ವಸ್ಥಗೊಂಡಿದ್ದಳು. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಎರಡೂ ಕಾಲುಗಳ ಸ್ಪರ್ಶಜ್ಞಾನವನ್ನೇ ಆಕೆ ಕಳೆದುಕೊಂಡಿದ್ದು, ಹೊಟ್ಟೆ ನೋವಿನಿಂದಲೂ ಬಳಲುತ್ತಿದ್ದಾಳೆ.

ಧಾರವಾಡ ಹೊರವಲಯದ ಉಪ್ಪಿನ ಬೆಟಗೇರಿ ಗ್ರಾಮದ ಈ ಹುಡುಗಿ, ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕೋಚ್ ಶ್ಯಾಮಲಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಸುತ್ತಿದ್ದಳು. 3-4 ದಿನಗಳಿಂದ ಕಲ್ಲವ್ವ ಅಭ್ಯಾಸಕ್ಕೆ ಬಾರದ್ದರಿಂದ ಆತಂಕಗೊಂಡ ಶ್ಯಾಮಲಾ, ಪತಿ ಸುಜಯಕುಮಾರ್ ಮತ್ತು ಆಕೆಯ ಗೆಳತಿಯರೊಂದಿಗೆ ಉಪ್ಪಿನ ಬೆಟಗೇರಿಗೆ ಹೋದರು. ಮನೆಯ ಪುಟ್ಟ ಕೊಣೆಯಲ್ಲಿ ಕಲ್ಲವ್ವ ಚಿಂತಾಜನಕ ಸ್ಥಿತಿಯಲ್ಲಿ ಹಾಸಿಗೆ ಹಿಡಿದ ದೃಶ್ಯ ಕಂಡು ಅವರೆಲ್ಲ ಬೆಚ್ಚಿಬಿದ್ದರು.

ಕಲ್ಲವ್ವ ಅನುಭವಿಸುತ್ತಿದ್ದ ತೊಂದರೆಯ ಗಾಂಭೀರ್ಯವನ್ನು ಗ್ರಹಿಸದ ಆಕೆಯ ಪಾಲಕರು ಮನೆಯಲ್ಲೇ ಸುಮ್ಮನೆ ಮಲಗಿಸಿದ್ದರು. ಆಕೆಯ ಪಾಲಕರಿಗೆ ವಿಷಯವನ್ನು ಮನವರಿಕೆ ಮಾಡಿಕೊಟ್ಟ ಜೆಎಸ್‌ಎಸ್ ಕಾಲೇಜು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್ ಕೋಚ್‌ಗಳು ಹಾಗೂ ಆಕೆಯ ಸಹವರ್ತಿಗಳ ಸಹಾಯದಿಂದ ಕಲ್ಲವ್ವಳನ್ನು ಚಿಕಿತ್ಸೆಗೆ ಕರೆತಂದರು. ಮೊದಲು ಧಾರವಾಡದ ಹೋಮಿಯೋಪತಿ ಆಸ್ಪತ್ರೆ ಹಾಗೂ ಬಳಿಕ ಹುಬ್ಬಳ್ಳಿಯ ಕಿಮ್ಸಗೆ ಆಕೆಯನ್ನು ದಾಖಲಿಸಲಾಯಿತು. ಎರಡು ದಿನಗಳ ನಂತರ ಆಕೆಯನ್ನು ಕೆಎಲ್‌ಇ ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು.

ಈ ಅಪೂರ್ವ ಕ್ರೀಡಾ ಪ್ರತಿಭೆಯ ತಂದೆ-ತಾಯಿಗಳು ಕೂಲಿ ಕಾರ್ಮಿಕರಾಗಿದ್ದು, ಅವಳ ಚಿಕಿತ್ಸಾ ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿ ಇಲ್ಲ. ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿರುವ ಕಲ್ಲವ್ವ ವೈದ್ಯಕೀಯ ವೆಚ್ಚಕ್ಕಾಗಿ ಕ್ರೀಡಾ ಪೋಷಕರ ನೆರವಿನ ನಿರೀಕ್ಷೆಯಲ್ಲಿದ್ದಾಳೆ. ಈ ಹುಡುಗಿಯ ಎಲ್ಲ ಸಹಪಾಠಿಗಳು ತಮ್ಮ ತಲಾ ರೂ 2,000 ಕ್ರೀಡಾ ಶಿಷ್ಯ ವೇತನವನ್ನು ಚಿಕಿತ್ಸೆಗಾಗಿ ದೇಣಿಗೆ ನೀಡುವ ಮೂಲಕ ಹೃದಯ ವೈಶಾಲ್ಯ ಮೆರೆದರು. ತಮ್ಮ ಗೆಳತಿಯ ಬಗೆಗೆ ಕಾಳಜಿಯನ್ನೂ ವ್ಯಕ್ತಪಡಿಸಿದರು. ಕೆಎಲ್‌ಇ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರುವ ಈ ಹುಡುಗಿ ಇನ್ನೂ ಪ್ರಾಣಾಪಾಯದಿಂದ ಪಾರಾಗಿಲ್ಲ. ಜೆಎಸ್‌ಎಸ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಸ್. ಭೀಮಣ್ಣವರ, ಹಾಲಿ ನಿರ್ದೇಶಕ ಜಿನ್ನಪ್ಪ ಮತ್ತಿತರರು ಅವಳ ಸಹಾಯಕ್ಕೆ ಧಾವಿಸಿದ್ದಾರೆ. ಶ್ಯಾಮಲಾ ಅವರ ಕಾಳಜಿಗೆ ಕ್ರೀಡಾ ವಲಯ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಮಧ್ಯೆ ಮಾಜಿ ಕ್ರೀಡಾಪಟುವೂ ಆಗಿರುವ ಪಾಲಿಕೆ ಸದಸ್ಯ ಶಿವು ಹಿರೇಮಠ ನೇತೃತ್ವದಲ್ಲಿ ಕೋಚ್‌ಗಳು, ಕ್ರೀಡಾಪಟುಗಳು ಹಾಗೂ ಕ್ರೀಡಾಪ್ರಿಯರು ಸಭೆ ಸೇರಿ ಕಲ್ಲವ್ವಳ ಸಹಾಯಕ್ಕೆ ಧಾವಿಸಲು ನಿರ್ಧರಿಸಿದರು. ಕೆಲವರು ಸ್ಥಳದಲ್ಲೇ ದೇಣಿಗೆಯನ್ನೂ ನೀಡಿದರು.

ಪ್ರತಿಭೆಗೆ ನೆರವಾಗಿ 
ಅಪಾರ ವೆಚ್ಚದ ಚಿಕಿತ್ಸೆ ಪಡೆಯುತ್ತಿರುವ ಈ ಪ್ರತಿಭಾನ್ವಿತ ಕ್ರೀಡಾ ಪಟುವಿಗೆ ನೆರವಿನ ಹಸ್ತ ನೀಡಲು ಇಚ್ಛೆ ಯುಳ್ಳವರು ಎಸ್.ಎಸ್. ಅಗಡಿ (99161 88603) ಇಲ್ಲವೆ ಶಿವು ಹಿರೇಮಠ (97400 24123) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT