ADVERTISEMENT

ಸಿಎಂ ಕ್ಷಮೆ ಯಾಚನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 6:05 IST
Last Updated 17 ಫೆಬ್ರುವರಿ 2012, 6:05 IST

ಹುಬ್ಬಳ್ಳಿ: ಉಡುಪಿ ಬಳಿ ಮಲ್ಪೆ ಬೀಚ್‌ನ ಸೇಂಟ್‌ಮೇರಿಸ್ ದ್ವೀಪದಲ್ಲಿ ನಡೆದ ರೇವ್ ಪಾರ್ಟಿಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಇದೆಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಎಂದು ಹೇಳಿ ನಾಡಿನ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಯುವ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ಕಾಂಗ್ರೆಸ್ ಮುಖಂಡ ಮಹೇಶ ಕಮತರ, ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದುಡ್ಡು ಮಾಡುವುದು ಬೇಕಾಗಿಲ್ಲ. ಮುಖ್ಯಮಂತ್ರಿ ಹೇಳಿಕೆ ಬಿಜೆಪಿ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುವ ಮೂಲಕ ಬಿಜೆಪಿ ಸಚಿವರು ಲಜ್ಜೆಗೇಡಿತನ ಮೆರೆದಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಸಾಲದು ಮೂವರ ಶಾಸಕತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ ಅವರು, ರೇವ್ ಪಾರ್ಟಿ ಸಮರ್ಥನೆ ಮಾಡಿಕೊಂಡಿರುವ ಮುಖ್ಯಮಂತ್ರಿ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಿದ್ದು ಹಿರೇಮಠ, ಶಿವಕುಮಾರ ಕದಮ, ಮಂಜುನಾಥ ಉಳ್ಳಾಗಡ್ಡಿ, ಶ್ರೀನಿವಾಸ ಮುರಗೋಡ, ಬಿ.ಎನ್.ಗೋವಿಂದ, ಈರಣ್ಣ ಕೋರಿ, ರವಿ ಬೂಸನೂರ, ವಿಶ್ವನಾಥ ಚಂದಾವರಿ, ಸುನೀಲ ಅಲಗಾವಿ, ಶ್ರೀಕಾಂತ ಕಡೇಮನಿ, ಕಿರಣ್ ಗುತ್ತಿ, ಬಾಲಚಂದ್ರ ಒಡ್ಡರ, ರಾಜು ಸಾಲಿಮಠ, ರಮೇಶ ಬೋದಲೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.